ಮಾಗಡಿ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯವನ್ನು ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ತಾಲೂಕಿನಲ್ಲಿ ಐಸಿಹಾಸಿಕ ಕೋಟೆ ಕೊತ್ತಲ, ದೇವಾಲಯಗಳನ್ನು ಪ್ರಮುಖ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಆಗುವುದಲ್ಲದೆ, ಪ್ರವಾಸೋದ್ಯಮದ ಆದಾಯವೂ ವೃದ್ಧಿಯಾಗಲಿದೆ. ಬೆಂಗಳೂರಿಗೆ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ಮಾಗಡಿ ತಾಲೂಕಿನ ಪ್ರವಾಸೋದ್ಯಮಕ್ಕೆ ಶಾಸಕ ಬಾಲಕೃಷ್ಣ ಅವರು ಇಚ್ಚಾಸಕ್ತಿ ತೋರಬೇಕು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ಮತ್ತು ಕುಮುದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಅಣೆಕಟ್ಟು ರಮಣೀಯ ಪರಿಸರವನ್ನು ಹೊಂದಿದೆ. ಅರ್ಕಾವತಿ ನದಿ ನಂದಿ ಬೆಟ್ಟದಲ್ಲಿ ಹುಟ್ಟಿ ದೊಡ್ಡಬಳ್ಳಾಪುರದ ಹಳ್ಳಿಗಳಲ್ಲಿ ಹರಿದು ಹಲವು ಕೆರೆಗೆ ಕಟ್ಟೆಗಳನ್ನು ತುಂಬಿಸಿ, ಬೆಂಗಳೂರು ಉತ್ತರ ತಾಲೂಕು ಹೆಸರುಘಟ್ಟ ಕೆರೆ, ಮಾಕಳಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದ ಮುಖಾಂತರ ನೀರು ಹರಿದು ಮಂಚನಬೆಲೆ ಸೇರುತ್ತದೆ. ಕುಮುದ್ವತಿ ನದಿ ಹರಿಯುವ 278 ಹಳ್ಳಿಗಳಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಂಚನಬೆಲೆ ಅಣೆಕಟ್ಟು 83 ಅಡಿ ಎತ್ತರವಿದ್ದು, ಈ ಜಲಾಶಯ ಭರ್ತಿಯಾದರೆ ಮಾಗಡಿ ಪಟ್ಟಣ ಹಾಗೂ ಬಿಡದಿ ಪಟ್ಟಣಕ್ಕೂ ಕುಡಿಯುವ ನೀರಿನ ಯೋಜನೆ ರೂಪಿಸುವುದಲ್ಲದೆ, ರಾಮನಗರಕ್ಕೂ ಕೃಷಿ ಚಟುವಟಿಕೆಗೆ ನೀರು ಪೂರೈಸುವ ಯೋಜನೆಯಿದೆ.
ಬೋಟಿಂಗ್ ವ್ಯವಸ್ಥೆ ಆಗಬೇಕು:ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ನಲ್ಲಿಗುಡ್ಡ ಕೆರೆ ಹಾಗೂ ಕಣ್ವ ಜಲಾಶಯದಲ್ಲೂ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಹಿನ್ನಿರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಸಂಜೆ ಸೂರ್ಯಾಸ್ತಮಯದ ರಮಣೀಯ ದೃಶ್ಯಗಳನ್ನು ಕಾಣಬಹುದು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಚನಬೆಲೆ ಜಲಾಶಯವನ್ನು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು 150 ಎಕರ ಜಾಗವನ್ನು ಬಜೆಟ್‌ನಲ್ಲಿ ₹ 100 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಈಗಾಗಲೇ ಎರಡುವರೆ ವರ್ಷ ಪೂರೈಸಿದ್ದು ಮಂಚನಬೆಲೆ ಜಲಾಶಯ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು.
ಕೋಟ್...........
-ಎಚ್.ಸಿ.ಬಾಲಕೃಷ್ಣ, ಶಾಸಕರು