ಗದಗ: ನಗರಸಭೆಯ 2025-26ನೇ ಸಾಲಿನ ಅಯವ್ಯಯ ಕುರಿತ ಸಾರ್ವಜನಿಕ ಸಮಾಲೋಚನೆಯ ಮೊದಲ ಸುತ್ತಿನ ಸಭೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ತಮ್ಮ ಅನಿಸಿಕೆ ಅಭಿಪ್ರಾಯ ಮಂಡಿಸಿ ಅವಳಿ ನಗರದ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಇದಕ್ಕೆ ಉತ್ತರವಾಗಿ ಸಮಾಜಸೇವಕ ಸತೀಶ ಹೂಲಿ ಮಾತನಾಡಿ, ಕಸ ಸಂಗ್ರಹಣೆಯ ಆದಾಯ ಇತರರಿಗೆ ಹೋಗುತ್ತಿದೆ. ನೀರು ಸರಿಯಾಗಿ ಪೂರೈಕೆ ಆಗದೆ ಮತ್ತು 24*7 ಯೋಜನೆ ಪೂರ್ಣಗೊಳ್ಳದೆ ಇರುವದರಿಂದ ಆದಾಯ ಕಡಿಮೆ ಆಗಿದೆ. ₹ 40 ಲಕ್ಷ ಭಿಕ್ಷಕರ ಕರ ಮೀಸಲಿಟ್ಟರು ಭಿಕ್ಷಾಟನೆ ಕಡಿಮೆಯಾಗಿಲ್ಲ, ₹ 40 ಲಕ್ಷ ಗ್ರಂಥಾಲಯಕ್ಕೆ ಮೀಸಲಿಟ್ಟರು ಅದು ಬಳಕೆಯಾಗಿಲ್ಲ ದೊಡ್ಡ ವಾಣಿಜ್ಯ ಮಳಿಗೆಗಳಿಂದ ತೆರಿಗೆ ವಸೂಲಿ ಆಗುತ್ತಿಲ್ಲ ಎಂದರು.
ಸಮಾಜ ಸೇವಕ ಮಾರ್ತಾಂಡಪ್ಪ ಹಾದಿಮನಿ ಮಾತನಾಡಿ, ಸಾರ್ವಜನಿಕರ ಸಮಾಲೋಚನೆ ಸಭೆ ಕಾಟಾಚಾರಕ್ಕೆ ಆಗಬಾರದು. ನಗರಸಭೆಯಲ್ಲಿ 214 ಹುದ್ದೆಗಳು ಖಾಲಿ ಇವೆ. ತೆರಿಗೆ ಸಂಗ್ರಹಿಸಿದಷ್ಟೆ ಸೋರಿಕೆ ಆಗುತ್ತಿದೆ. ನಗರದಲ್ಲಿ ಪ್ಲೆಕ್ಸ್ ಬ್ಯಾನರ್, ಆಸ್ಪತ್ರೆ, ಬೃಹತ್ ಮಳಿಗೆಗಳಿಂದ ತೆರಿಗೆ ಸಂಗ್ರಹಿಸಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ಆಸ್ತಿ ಹೊಂದಿರುವ ನಗರಸಭೆಯಲ್ಲಿ ಗದಗ 2ನೇ ಸ್ಥಾನದಲ್ಲಿದೆ. ಸುಮಾರು ₹5 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು ಬರಿ ಒಂದು ಸಾವಿರ ಕೋಟಿ ಮೌಲ್ಯದ ಆಸ್ತಿಯಿಂದ ತೆರಿಗೆ ಬರುತ್ತಿದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ತಿಳಿಸಿದರು.ಮುತ್ತು ಬಿಳೆಯಲಿ ಮಾತನಾಡಿ, ನಗರಸಭೆಯ 450ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಬಾಡಿಗೆ ದರ ಪರಿಷ್ಕರಣೆ ಮಾಡಿ ಬಾಡಿಗೆ ಹೆಚ್ಚಿಸಿದರೆ ಅದರಿಂದ ಬರುವ ಆದಾಯದಿಂದ ಅಭಿವೃದ್ಧಿ ಮಾಡಬಹುದು ಎಂದರು.
ಅಶೋಕ ಕುಡತಿನ್ನಿ ಮಾತನಾಡಿ, ಅವಳಿ ನಗರ ಬೃಹತ್ತಾಗಿ ಬೆಳೆಯುತ್ತಿದ್ದರೂ ಅದಾಯದ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಆನಂದ ಸಿಂಗಾಡಿ, ಮೋಹನ ಕಟ್ಟಿಮನಿ, ಬಾಬು ನದಾಫ್, ಡಾ.ಪವನ ಪಾಟೀಲ, ಡಾ. ತುಕಾರಾಮ ಸೂರಿ, ಶರಣಪ್ಪ ಗೊಳಗೊಳಕಿ, ಪ್ರಕಾಶ ಕಲ್ಮನಿ, ಮುನ್ನಾ ರೇಶ್ಮಿ, ಮುತ್ತು ಚವಡಣ್ಣವರ ಸೇರಿದಂತೆ ಮುಂತಾದವರು ಸಲಹೆ ನೀಡಿದರು.
ವೇದಿಕೆ ಮೇಲೆ ಪೌರಾಯುಕ್ತ ಮಹೇಶ ಪೋತದಾರ ಉಪಸ್ಥಿತರಿದ್ದರು. ಕಚೇರಿಯ ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಎಸ್.ವೈ. ಸಂಕನಗೌಡ್ರ, ಪ್ರಹ್ಲಾದ ಕಮ್ಯೂನಿಅಂತೇರ, ಬಸವರಾಜ ಕೋಳೂರು, ಎಂ.ಎಂ. ಮಕಾನದಾರ, ಎಸ್.ಎನ್. ದಳವಾಯಿ, ಎಸ್.ಎಂ.ಗುಡಿ, ಎಂ.ಆರ್. ಪಾಟೀಲ, ಜಗದೀಶ ಕೋನರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.