ಕನಕಗಿರಿ: ಕನಕಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಭಾನುವಾರ ಮಾತನಾಡಿದರು.೨೦೦೮ ರಲ್ಲಿ ಚುನಾಯಿತರಾದ ಬಳಿಕ ೨೦೧೮ರಲ್ಲಿ ಕನಕಗಿರಿ-ಕಾರಟಗಿ ಪಟ್ಟಣಗಳನ್ನು ತಾಲೂಕು ಕೇಂದ್ರಗಳನ್ನಾಗಿ ಮಾಡಿದ್ದೇನೆ. ಇದೀಗ ನನ್ನ ಆಡಳಿತದ ಅವಧಿಯಲ್ಲಿಯೇ ಪ್ರಜಾಸೌಧಕ್ಕೆ ಶಂಕುಸ್ಥಾಪನೆ ಮಾಡಿದ್ದು, ಇನ್ನು ನನ್ನ ಮೂರು ವರ್ಷದ ಅವಧಿಯಲ್ಲಿ ಕನಕಗಿರಿ ಕ್ಷೇತ್ರ ಅಭಿವೃದ್ಧಿ ಹೊಂದಲಿದೆ.ಒಂದುವರೆ ವರ್ಷದ ನಂತರ ಪ್ರಜಾಸೌಧ ಉದ್ಘಾಟನೆಯಾಗಲಿದ್ದು, ನಾನೇ ಉದ್ಘಾಟನೆ ಮಾಡುತ್ತೇನೆ. ಜೂ. ೨ರಂದು ನೂರು ಬೆಡ್ ಆಸ್ಪತ್ರೆ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸುತ್ತೇನೆ ಎಂದರು.
ತೋಟಗಾರಿಕೆ ಪಾರ್ಕ್‌ಗೆ ಮುಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುದಾನ ಮೀಸಲಿರಿಸಿ ಅಭಿವೃದ್ಧಿ ಮುಂದಾಗುತ್ತೇನೆ.ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇನೆ. ನಾನು ಬಿಜೆಪಿಯವರಂತೆ ಸುಳ್ಳು ಹೇಳಿ ಪ್ರಚಾರಗಿಟ್ಟಿಸಿಕೊಳ್ಳುವ ಗಿರಾಕಿ ಅಲ್ಲ. ಜನರ ಜತೆಗೆ ಇದ್ದು ಜನಸೇವೆಗೆ ಮಾಡುತ್ತೇನೆ ಎಂದರು.ಇನ್ನೂ ಹುಲಿಹೈದರ ಗ್ರಾಮ ಪರಿಶಿಷ್ಟ ಪಂಗಡ ಕಾಲನಿಯ ಸಿಸಿ ರಸ್ತೆ ನಿರ್ಮಾಣಕ್ಕೆ ₹೪೦ ಲಕ್ಷ ಹಾಗೂ ಅಲ್ಪಸಂಖ್ಯಾತರ ಕಾಲನಿಯ ಸಿಸಿ ರಸ್ತೆಗೆ ₹೧೦ ಲಕ್ಷ ಮಂಜೂರಾಗಿದ್ದು, ಭೂಮಿಪೂಜೆ ನೆರವೇರಿಸಲಾಗಿದೆ. ತಾಲೂಕು ಕೇಂದ್ರಕ್ಕೆ ಬರಬೇಕಾದ ವಿವಿಧ ಸರ್ಕಾರಿ ಕಚೇರಿಗಳನ್ನು ತಂದು ಕಾರ್ಯಾರಂಭ ಮಾಡುವುದಾಗಿ ತಿಳಿಸಿದರಲ್ಲದೇ ಪ್ರಜಾಸೌಧಕ್ಕೆ ಭೂಮಿದಾನ ನೀಡಿದ ತಬ್ರಿಜ್ ಅವರನ್ನು ಅಭಿನಂದಿಸಿದರು.
ಸಮಾನಾಂತರ ಜಲಾಶಯ ಬೃಹತ್ ಪ್ರಾಜೆಕ್ಟ್ ಆಗಿದ್ದು, ನಾಲ್ಕೈದು ವರ್ಷಕ್ಕೆ ಕಾಮಗಾರಿ ಮುಗಿಯುವುದಿಲ್ಲ. ಜಲಾಶಯದ ಕುರಿತು ಬಿಜೆಪಿ ಸರ್ಕಾರ ಡಿಪಿಆರ್ ಸಿದ್ಧಪಡಿಸಿತ್ತು. ಆದರೆ, ಜಲಾಶಯಗಳು ನಿರ್ಮಾಣವಾದರೆ ಹಲವು ಕೆರೆಗಳನ್ನು ತುಂಬಿ,ಜನಸಾಮಾನ್ಯರಿಗೆ, ಪಶು, ಪಕ್ಷಿಗಳಿಗೆ ಅನುಕೂಲವಾಗಲಿದೆ. ಈ ವಿಚಾರವಾಗಿ ನಮ್ಮ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.ಈ ವೇಳೆ ತಹಸೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿಶ್ರೀನಿವಾಸ, ಗಂಗಾಧರಸ್ವಾಮಿ, ಸಿದ್ದಪ್ಪ ನಿರ್ಲೂಟಿ, ಬಸವರಾಜ ಸಮಗಂಡಿ, ರಮೇಶ ನಾಯಕ ಹುಲಿಹೈದರ, ಅನಿಲ ಬಿಜ್ಜಳ, ಶರಣೇಗೌಡ ಹುಲಸನಹಟ್ಟಿ, ಹನುಮೇಶ ಹುಳ್ಕಿಹಾಳ, ವೆಂಕಟೇಶ ಗೋಡಿನಾಳ ಇತರರಿದ್ದರು.
ಕೋಟ್:ತುಂಗಭದ್ರಾ ಜಲಾಶಯ ಕ್ರಸ್ಟ್ ಗೆಟ್‌ಗಳ ದುರಸ್ಥಿ ಕಾರ್ಯದ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯಲಿದೆ.ಸಭೆಯಲ್ಲಿ ಚರ್ಚೆಯಾದಂತೆ ಅಭಿವೃದ್ಧಿಗೆ ಮುಂದಾಗುತ್ತೇನೆ. ನಾಲ್ಕು ಜಿಲ್ಲೆಗಳ ಜನರ ಜೀವನಾಡಿಯಾಗಿರುವ ತುಂಗಭದ್ರಾ ಸಂರಕ್ಷಣೆಗೆ ಬದ್ಧನಾಗಿರುತ್ತೇನೆ. ಟಿಬಿ ಡ್ಯಾಂ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಕೆಲವರು ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.