- ಗಾಣದಕಟ್ಟೆ ಬಳಿ ಮತ್ತಿಹಳ್ಳ ಚೆಕ್ ಡ್ಯಾಂಗೆ ಬಾಗಿನ ಅರ್ಪಿಸಿ ಮಾಡಾಳು ವಿರೂಪಾಕ್ಷಪ್ಪ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಯಾವುದೇ ಅಧಿಕಾರ ಶಾಶ್ವತವಲ್ಲ. ಆದರೆ, ಅಧಿಕಾರ ಸಿಕ್ಕಾಗ ಮಾಡಿದ ಜನಪರ ಸೇವೆಯ ಕೆಲಸಗಳು ಶಾಶ್ವತವಾಗಿರುತ್ತವೆ. ಶಾಸಕನಾಗಿದ್ದಾಗ ಮತ್ತಿಹಳ್ಳಕ್ಕೆ ₹6 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದೆ. ಇದರ ಪರಿಣಾಮ ಈ ಭಾಗದ ರೈತರು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ತಾಲೂಕಿನ ಗಾಣದಕಟ್ಟೆ ಗ್ರಾಮದ ಬಳಿ ಸೋಮವಾರ ಮತ್ತಿಹಳ್ಳ ಚೆಕ್ ಡ್ಯಾಂಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿಯೇ ಅತಿ ದೊಡ್ಡ ಚೆಕ್ ಡ್ಯಾಂ ಇದಾಗಿದೆ. 0.8 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಈ ಡ್ಯಾಂ ತುಂಬಿದ ನಂತರ ಸಾರಥಿ, ಮಾವಿನಕಟ್ಟೆ, ಚನ್ನೇಶಪುರ ಗ್ರಾಮಗಳ ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಈ ಭಾಗದ ಅಂತರ್ಜಲಮಟ್ಟ ವೃದ್ಧಿಯಾಗಲಿದೆ ಎಂದರು.
ಮೊದಲ ಬಾರಿಗೆ ಶಾಸಕನಾಗಿದ್ದಾಗ ಉಬ್ರಾಣಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಈ ಯೋಜನೆಗೆ ಒಳಪಡುವ ಎಲ್ಲ ಕೆರೆಗಳನ್ನು ತುಂಬಿಸಿದ್ದೆ. ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿತ್ತು. ಆಗ ಈ ಯೋಜನೆಗೆ ಒಳಪಡುವ ಕೆರೆಗಳಿಗೆ ಮೂರು ಇಂಚಿನ ಪೈಪ್ ಅಳವಡಿಸಿದ್ದೀರಿ. ಇದರಿಂದ ಕೆರೆ ಹೇಗೆ ತುಂಬುತ್ತದೆ ಎಂದು ರೈತರೇ ಪ್ರಶ್ನಿಸಿದ್ದರು. ಆಗ, ಮತ್ತೆ ಸರ್ಕಾರದಿಂದ ₹170 ಕೋಟಿ ಅನುದಾನ ಮಂಜೂರು ಮಾಡಿಸಿ, ಹೆಚ್ಚುವರಿ ಪೈಪ್ ಲೈಲ್ ಅಳವಡಿಸಲು ಕ್ರಮ ಕೈಗೊಂಡಿದ್ದೆ. ಈಗಿನ ಶಾಸಕರು ಈ ಕಾಮಗಾರಿ ಆದಷ್ಟು ಶೀಘ್ರದಲ್ಲಿಯೇ ಮುಗಿಸಿ, ಕೆರೆಗಳಿಗೆ ನೀರನ್ನು ಹರಿಸಬೇಕು ಎಂದರು.ಗ್ರಾಮದ ಮುಖಂಡರಾದ ನಿಂಗಪ್ಪ, ಚಂದ್ರಪ್ಪ, ತುಮ್ಕೋಸ್ ನಿರ್ದೇಶಕ ಹರೋನಹಳ್ಳಿ ದೇವರಾಜ್, ಮಾಜಿ ಗ್ರಾಪಂ ಅಧ್ಯಕ್ಷ ಶಶಿಕುಮಾರ್, ದಿಗ್ಗೇನಹಳ್ಳಿ ನಾಗರಾಜ್, ಕಾಂತರಾಜ್, ಭೋಜಣ್ಣ, ರುದ್ರೇಶ್, ಗ್ರಾಮಸ್ಥರು ಹಾಜರಿದ್ದರು.
- - - -19ಕೆಸಿಎನ್‌ಜಿ2:ಚನ್ನಗಿರಿ ತಾಲೂಕಿನ ಗಾಣದಕಟ್ಟೆ ಬಳಿ ಇರುವ ಮತ್ತಿಹಳ್ಳ ಚೆಕ್ ಡ್ಯಾಂಗೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಾಗಿನ ಅರ್ಪಿಸಿದರು.