ಯಲ್ಲಾಪುರ: ನಾವ್ಯಾರು ಶಾಶ್ವತವಲ್ಲ. ಅಧಿಕಾರವಿದ್ದಾಗ ಮಾಡಿರುವ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶನಿವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಮದನೂರು ಗ್ರಾಪಂ ಸಂಯುಕ್ತಾಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ ಹಳಿಯಾಳ (ಉಕ) ವತಿಯಿಂದ ಅಂದಾಜು ಮೊತ್ತ ₹ 878 ಲಕ್ಷ ವೆಚ್ಚದಲ್ಲಿ ಮಂಜೂರಾದ ಹುಲಗೋಡ ಹಳ್ಳಕ್ಕೆ ಬಂದಾರ ಸಹಿತ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.ಕಿರವತ್ತಿ ಹಾಗೂ ಮದನೂರು ಪಂಚಾಯಿತಿಗಳು ಬಯಲು ಸೀಮೆಯಂತೆ ಬರಗಾಲ ಎದುರಿಸುತ್ತಿರುತ್ತವೆ. ಹೀಗಾಗಿ ಹೆಚ್ಚು ಆದ್ಯತೆ ನೀಡಿ ಇಲ್ಲಿ ನೀರಾವರಿ ಯೋಜನೆ ತರಲಾಗಿದೆ. ಹುಲಗೋಡ ಏತ ನೀರಾವರಿಯ ಏಳನೇ ಯೋಜನೆ, 2.5 ಸಾವಿರ ಎಕರೆ ಹೊಲಗಳಿಗೆ ನೀರಾವರಿ, ಹುಲುಗೋಡ ಹಳ್ಳಕ್ಕೆ ಬಹಳಷ್ಟು ಕಷ್ಟಪಟ್ಟು ತಂದ ಯೋಜನೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಸಕ್ತಿ ವಹಿಸದಿದ್ದರೆ ಹುಲಗೋಡು ಯೋಜನೆ ದೊರಕುತ್ತಿರಲಿಲ್ಲ. ಬಾಶಿ, ಹುಲಗೋಡ ಹಾಗೂ ಕೆರೆಹೊಸಳ್ಳಿಯ ಒಟ್ಟು 3 ಯೋಜನೆಗಳ ವೆಚ್ಚ ₹18 ಕೋಟಿಗಳಾಗಿವೆ ಎಂದರು.
ಪ್ರತಿ ವರ್ಷ 2 ರಿಂದ 3 ಬಾರಿ ಕೆರೆಗಳಿಗೆ ನೀರು ತುಂಬಿದರೆ,ಆ ಸುತ್ತಮುತ್ತ ಭಾಗದ ಅಂತರ್ಜಲ ಹೆಚ್ಚಾಗುತ್ತದೆ. ಕೊಳವೆ ಬಾವಿಯನ್ನು ರಿಚಾರ್ಜ್ ಆಗಲಿವೆ. ಒಟ್ಟಾರೆ ₹1,100 ಕೋಟಿ ವೆಚ್ಚದಲ್ಲಿ ಯಲ್ಲಾಪುರ ಕ್ಷೇತ್ರದ 57 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಆಗಲಿದೆ. ರೈತರ ಬದುಕಿಗೆ ಶಕ್ತಿ ಕೊಟ್ಟಂತಹ ಕೆಲಸ ಆಗುತ್ತದೆ.ಮಳೆಗಾಲದಲ್ಲಿ ಬೇಡ್ತಿಯಿಂದ ಹರಿದು ಹೋಗುತ್ತಿದ್ದ ನೀರನ್ನು ತಡೆ ಹಾಕಿ ಅದನ್ನು ರೈತರಿಗೆ ಭೂಮಿಗಳಿಗೆ ಹಾಯಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಆಗ ರೈತರು ಆರ್ಥಿಕ ಬೆಳಗಳ ಕಡೆಗೆ ಹೋಗಬಹುದಾಗಿದೆ. ರೈತರ ಹೊಟ್ಟೆ ತುಂಬಿಸಬೇಕಾದರೆ ಕೃಷಿ ಕೆಲಸಕ್ಕೆ ಬೇಕಾದಂತಹ ಅನುಕೂಲತೆ ಮಾಡಿಕೊಡಬೇಕು. ಹುಲಗೋಡು ಏತ ನೀರಾವರಿ ಕೆಲಸ ಪ್ರಾರಂಭವಾದಾಗ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಕೇಳಿಕೊಂಡರು.
ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಸಾಮಾಜಿಕ ಕಾರ್ಯಕರ್ತ ರಾಜೇಶ ತಿನ್ನೇಕರ, ಇಂದಿರಾ ನಾಯ್ಕ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದಪೇದಾರ, ಸ್ಥಳೀಯರಾದ ಲಕ್ಕು ಗಾವಡೆ, ಕೃಷ್ಣ ಮರಾಠೆ ಇದ್ದರು.