ಹಾಸನಾಂಬೆಯ ಸುಗಮ ದರ್ಶನಕ್ಕೆ ಭಕ್ತರ ಮೆಚ್ಚುಗೆ

KannadaprabhaNewsNetwork |  
Published : Oct 12, 2025, 01:00 AM IST
11ಎಚ್ಎಸ್ಎನ್8ಎ : ಭಕ್ತರನ್ನು ಭೇಟಿ ಮಾಡಿ ಸಮಸ್ಯೆಗಳೇನಾದರೂ ಇದೆಯಾ ಎಂದು ಸಚಿವರಾದ ಕೃಷ್ಣಭೈರೇಗೌಡ ಆಲಿಸಿದರು. | Kannada Prabha

ಸಾರಾಂಶ

ಕಳೆದ ವರ್ಷ ಅದ್ವಾನಗಳ ಆಗರವಾಗಿ ತಳ್ಳಾಟ ನೂಕಾಟ, ಲಾಠಿ ಚಾರ್ಜ್‌, ಹೀಗೆ ಹತ್ತು ಹಲವು ಗೊಂದಲಗಳ ಗೂಡಾಗಿದ್ದ ಹಾಸನಾಂಬೆ ದರ್ಶನೋತ್ಸವ ಈ ಬಾರಿ ಸುಸೂತ್ರವಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ವಿಐಪಿ ಹಾಗೂ ವಿವಿಐಪಿ ಪಾಸ್‌ಗಳನ್ನು ರದ್ಧು ಮಾಡುವುದರ ಜತೆಗೆ ದರ್ಶನಕ್ಕೆ ಬರುವ ವಿಐಪಿಗಳಿಗೆ ಜಿಲ್ಲಾಡಳಿತವೇ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು. ಇದರ ಮಾಸ್ಟರ್‌ ಮೈಂಡ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ. ಹಾಗಾಗಿ ಈ ಬಾರಿ ಸಾಮಾನ್ಯ ಜನರಿಗೂ ಹಾಸನಾಂಬೆ ದರ್ಶನ ಸುಸೂತ್ರವಾಗಿ ನಡೆಯುತ್ತಿದ್ದು, ದರ್ಶನ ಪಡೆದ ಭಕ್ತರೆಲ್ಲಾ ಈ ಬಾರಿಯ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಕಳೆದ ವರ್ಷ ಅದ್ವಾನಗಳ ಆಗರವಾಗಿ ತಳ್ಳಾಟ ನೂಕಾಟ, ಲಾಠಿ ಚಾರ್ಜ್‌, ಹೀಗೆ ಹತ್ತು ಹಲವು ಗೊಂದಲಗಳ ಗೂಡಾಗಿದ್ದ ಹಾಸನಾಂಬೆ ದರ್ಶನೋತ್ಸವ ಈ ಬಾರಿ ಸುಸೂತ್ರವಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ವಿಐಪಿ ಹಾಗೂ ವಿವಿಐಪಿ ಪಾಸ್‌ಗಳನ್ನು ರದ್ಧು ಮಾಡುವುದರ ಜತೆಗೆ ದರ್ಶನಕ್ಕೆ ಬರುವ ವಿಐಪಿಗಳಿಗೆ ಜಿಲ್ಲಾಡಳಿತವೇ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು. ಇದರ ಮಾಸ್ಟರ್‌ ಮೈಂಡ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ. ಹಾಗಾಗಿ ಈ ಬಾರಿ ಸಾಮಾನ್ಯ ಜನರಿಗೂ ಹಾಸನಾಂಬೆ ದರ್ಶನ ಸುಸೂತ್ರವಾಗಿ ನಡೆಯುತ್ತಿದ್ದು, ದರ್ಶನ ಪಡೆದ ಭಕ್ತರೆಲ್ಲಾ ಈ ಬಾರಿಯ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಏಕೆಂದರೆ ಕಳೆದ ಬಾರಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ತುಮಕೂರು ಜಿಲ್ಲೆಯವರೇ ಆಗಿದ್ದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಲೆಕ್ಕವಿಲ್ಲದಷ್ಟು ವಿಐಪಿ ಹಾಗೂ ವಿವಿಐಪಿ ಪಾಸುಗಳನ್ನು ಮುದ್ರಿಸಿ ಇಡೀ ತುಮಕೂರಿನಲ್ಲಿ ಹಂಚಿಕೆ ಮಾಡಿದ್ದರಿಂದಲೇ ಹಾಸನಾಂಬೆ ದರ್ಶನೋತ್ಸವದ ಇಡೀ ವ್ಯವಸ್ಥೆ ಹಾಳಾಗಿದ್ದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಈ ಬಾರಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಕಳೆದ ವರ್ಷದ ತಪ್ಪನ್ನು ಗಮನಿಸಿ ಈ ಬಾರಿ ವಿಐಪಿ ಹಾಗೂ ವಿವಿಐಪಿ ಪಾಸುಗಳನ್ನು ರದ್ದುಗೊಳಿಸಿದರು. ಹಾಗೆಯೇ ದೇವಿ ದರ್ಶನಕ್ಕೆ ಬರುವ ಗಣ್ಯಾತಿಗಣ್ಯರಿಂದಲೂ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎನ್ನುವುದನ್ನೂ ಅರಿತು ಅದಕ್ಕೂ ಜಿಲ್ಲಾಡಳಿತದಿಂದಲೇ ವ್ಯವಸ್ಥೆ ಮಾಡಿದ್ದರಿಂದ ಈ ಬಾರಿ ಸಾಮಾನ್ಯ ಜನರ ಧರ್ಮದರ್ಶನಕ್ಕೆ ಯಾವುದೇ ತೊಂದರೆ ಇ್ಲಲವಾಗಿದೆ. ಒಂದು ಸಾವಿರ ರು. ಟಿಕೆಟ್‌ ಖರೀದಿಸಿದವರು ಕೂಡ ಕಳೆದ ವರ್ಷ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವಂತಾಗಿತ್ತು. ಆದರೆ, ಈಬಾರಿ ಆ ಕ್ಯೂನಲ್ಲಿ ನಿಂತವರು ಅರ್ಧ ಗಂಟೆಯಲ್ಲಿ ದರ್ಶನ ಪಡೆಯುತ್ತಿದ್ದಾರೆ. ಇನ್ನು ಧರ್ಮದರ್ಶನದ ಸಾಲಿನಲ್ಲಿ ನಿಂತವರು ಕೂಡ ಎರಡು ಮೂರು ಗಂಟೆಗಳಲ್ಲಿ ದರ್ಶನ ಪಡೆಯಲು ಸಾಧ್ಯವಾಗಿದೆ.

ಖುದ್ದು ಭೇಟಿ ನೀಡುತ್ತಿರುವ ಕೃಷ್ಣಬೈರೇಗೌಡ್ರು

ಜಾತ್ರೆ ಆರಂಭವಾದ ದಿನದಿಂದ ಪ್ರತಿದಿನ ಬೆಳಗ್ಗೆ ದೇವಸ್ಥಾನದ ಬಳಿ ಭೇಟಿ ನೀಡುತ್ತಿರುವ ಸಚಿವರಾದ ಕೃಷ್ಣಬೈರೇಗೌಡರು ಭಕ್ತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುತ್ತಿದ್ದಾರೆ. ಜನರು ಸಮಸ್ಯೆ ಬದಲು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೆಲ್ಲಾ ಕೇಳಿದ ಮೇಲೆ ಸಚಿವರು ಯಾವುದೇ ಸಮಸ್ಯೆ ಇಲ್ಲದೇ ಭಕ್ತರು ಹಾಸನಾಂಬೆ ದರ್ಶನ ಮಾಡಿರುವುದು ನಮಗೆ ಸಾರ್ಥಕತೆ ನೀಡುತ್ತದೆ. ಈಗಾಗಲೇ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಕ್ಟೋಬರ್ ೧೮ರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಈ ದಿನಾಂಕದ ಒಳಗೆ ದೇವಿ ದರ್ಶನ ಮಾಡಿಕೊಳ್ಳುವಂತೆ ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣೇಬೈರೇಗೌಡ ಮನವಿ ಮಾಡಿದ್ದಾರೆ.

೯೧ ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ:

ಶನಿವಾರದಂದು ಹಾಸನಾಂಬೆ ದೇವಾಲಯದ ಒಳಗೆ ಮತ್ತು ಹೊರಗೆ ಸುತ್ತಾಡಿ ಅಭಿಪ್ರಾಯ ಪಡೆದು ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದೇವಾಲಯದಲ್ಲಿ ಶನಿವಾರದಂದು ಅರ್ಧ ದಿನದ ದರ್ಶನ ಮುಗಿದು, ಈವರೆಗೆ ೯೧ ಸಾವಿರಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ ೨ ಗಂಟೆಯಿಂದ ೩.೩೦ರವರೆಗೆ ನೈವೇದ್ಯದ ಹಿನ್ನೆಲೆಯಲ್ಲಿ ದರ್ಶನ ಸ್ಥಗಿತಗೊಳ್ಳಲಿದ್ದು, ಮಧ್ಯಾಹ್ನ ೩.೩೦ಕ್ಕೆ ಮತ್ತೆ ಪ್ರಾರಂಭವಾಗಿ ರಾತ್ರಿ ೨ ಗಂಟೆಯವರೆಗೆ ನಿರಂತರವಾಗಿ ದರ್ಶನ ಮುಂದುವರಿಯಲಿದೆ. ದರ್ಶನ ವ್ಯವಸ್ಥೆ ಪರಿಶೀಲಿಸಿದಲ್ಲದೇ ಭಕ್ತರಿಂದ ದೇವಾಲಯದ ವ್ಯವಸ್ಥೆ ಬಗ್ಗೆ ವಿಚಾರಿಸಿದಾಗ ಶ್ಲಾಘನೆ ವ್ಯಕ್ತಪಡಿಸಿದರು.

ಅರ್ಧಗಂಟೆಯಲ್ಲೇ ದರ್ಶನ:

ಕಳೆದ ಐದು-ಆರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ್ಶನದ ವ್ಯವಸ್ಥೆ ದಾಖಲೆಯ ಮಟ್ಟದಲ್ಲಿ ಚೆನ್ನಾಗಿದೆ. ಭಕ್ತರು ಅರ್ಧಗಂಟೆಯಲ್ಲೇ ದರ್ಶನ ಪಡೆಯುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ನಮಗೆ ಸಾರ್ಥಕತೆ ನೀಡುತ್ತದೆ ಎಂದರು. ನಾವು ಮಾಡಿದ ಬದಲಾವಣೆಗಳ ಸಮರ್ಪಕ ಜಾರಿ, ಸಾರ್ವಜನಿಕರಿಗೆ ಅನುಕೂಲವಾದ ರೀತಿಯ ವ್ಯವಸ್ಥೆ, ಯಾವುದೇ ಗೊಂದಲವಿಲ್ಲದ ರೀತಿಯ ನಿರ್ವಹಣೆ ಇದರಿಂದ ಜನ ಖುಷಿಯಾಗಿದ್ದಾರೆ ಎಂದರು. ಅಕ್ಟೋಬರ್ ೧೮ರಿಂದ ೨೨ರವರೆಗೆ ಭಾರೀ ಪ್ರಮಾಣದ ಭಕ್ತರ ಆಗಮನ ನಿರೀಕ್ಷೆಯಿದೆ. ದಿನಕ್ಕೆ ಕನಿಷ್ಠ ಎರಡು ಲಕ್ಷ ಭಕ್ತರು ಬರುವ ಸಾಧ್ಯತೆ ಇದೆ. ಆದ್ದರಿಂದ ಸಾಧ್ಯವಿರುವವರು ೧೮ರ ಮೊದಲು ದರ್ಶನ ಮುಗಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಈ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮಹಮ್ಮದ್ ಸುಜೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.* ಬಾಕ್ಸ್‌.................15ಕ್ಕೆ ಸಿಎಂ, ಡಿಸಿಎಂ ಹಾಸನಾಂಬೆ ದೇವಿ ದರ್ಶನ:

ಅಕ್ಟೋಬರ್ ೧೫ರಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಆಗಮನದ ಸಮಯ ನಿಗದಿಯಾಗಿದೆ. ಜನರಿಗೆ ತೊಂದರೆ ಆಗದ ಸಮಯದಲ್ಲಿ ಅವರನ್ನು ಕರೆತಂದು ದರ್ಶನ ಮಾಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ವರ್ಷ ದೇವಾಲಯದ ಆದಾಯ ಕಡಿಮೆ ಆಗಬಹುದು, ಆದರೆ ಅದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ದೇವಾಲಯ ಭಕ್ತರು ಖರೀದಿಸುವ ಟಿಕೆಟ್ ಹಣದ ಮೇಲೆ ಅವಲಂಬಿತವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಭಕ್ತರು ಸುಖವಾಗಿಯೂ, ಆರಾಮವಾಗಿಯೂ ದರ್ಶನ ಪಡೆದು ಹೋದರೆ ಅದೇ ನಮ್ಮ ಸಂತೋಷ. ಆದಾಯ ನಿಂತರೂ ಪರವಾಗಿಲ್ಲ. ನಾವು ಬದಲಾವಣೆ ಮಾಡಿದ್ದು ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ಜನರ ಹಿತಕ್ಕಾಗಿ. ಸಮಸ್ಯೆ ಆದ ಮೇಲೆ ಪರಿಹಾರ ಹುಡುಕುವುದಲ್ಲ, ಸಮಸ್ಯೆ ಆಗದ ಹಾಗೆ ವ್ಯವಸ್ಥೆ ಮಾಡೋದು ಮುಖ್ಯ, ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ