ಸದ್ಭಕ್ತರೇ ಶ್ರೀಮಠದ ನೈಜ ಆಸ್ತಿ: ಗುರುಸಿದ್ದೇಶ್ವರ ಶ್ರೀ

KannadaprabhaNewsNetwork | Published : Oct 27, 2024 2:16 AM

ಸಾರಾಂಶ

ಶ್ರೀಮಠದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಭಕ್ತರೂ ಅಹರ್ನಿಶಿ ಶ್ರಮಿಸಿದ್ದು, ಸದ್ಭಕ್ತರೇ ಶ್ರೀಮಠದ ನೈಜ ಆಸ್ತಿಯಾಗಿದ್ದಾರೆಂದು ಗುರುಸಿದ್ದೇಶ್ವರಶ್ರೀಗಳು ನುಡಿದರು

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪೂರ ಸುತ್ತಲಿನ ಪ್ರದೇಶಗಳ ಸದ್ಭಕ್ತರ ಅಭಿಲಾಷೆಯಂತೆ ಗುರುದೇವ ಶ್ರೀಬ್ರಹ್ಮಾನಂದಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಕೃಷಿ ಪರಂಪರೆ ನಡೆಸಿಕೊಂಡು ಬಂದಂತೆ ಇಂದಿಗೂ ಶ್ರೀಮಠ ಮುಂದುವರೆಸಿಕೊಂಡು ಬಂದಿದೆ. ಶ್ರೀಮಠದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಭಕ್ತರೂ ಅಹರ್ನಿಶಿ ಶ್ರಮಿಸಿದ್ದು, ಸದ್ಭಕ್ತರೇ ಶ್ರೀಮಠದ ನೈಜ ಆಸ್ತಿಯಾಗಿದ್ದಾರೆಂದು ಗುರುಸಿದ್ದೇಶ್ವರಶ್ರೀಗಳು ನುಡಿದರು.

ಶನಿವಾರ ಸಂಜೆ ಶ್ರೀಮಠದ ಆವರಣದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗುರುಸಿದ್ದೇಶ್ವರಶ್ರೀಗಳ ಪೀಠಾರೋಹಣದ ದ್ವಾದಶ ವರ್ಷಗಳು ಗತಿಸಿದ ಪ್ರಯುಕ್ತ ನೂತನ ಗುರುಭವನ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ರಾಜ್ಯದಲ್ಲಿ ಇಂದು ಮಠಗಳು ಸಾಂಪ್ರದಾಯಿಕ ಆಚರಣೆಗಳ ನಿರ್ವಹಣೆಯಿಲ್ಲದೇ ಮತ್ತು ಆರ್ಥಿಕ ಕ್ಷಮತೆ ಕೊರತೆ ಕಾರಣಕ್ಕೆ ಕ್ಷೀಣಿಸುತ್ತಿವೆ. ಆದರೆ ನಿರಾಭಾರಿ ಶ್ರೀಗುರುದೇವ ಬ್ರಹ್ಮಾನಂದರ ತಪೋಬಲ ಮತ್ತು ಶ್ರೀಸಿದ್ದೇಶ್ವರ ಗುರುವರೇಣ್ಯರ ಕಾಯಕಶ್ರದ್ಧೆ ಕಾರಣ ಆಶ್ರಮದ ಸರ್ವಾಂಗೀಣ ಪ್ರಗತಿ ನಡೆಯುತ್ತಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾಸ್ವಾಮೀಜಿ ಆಶಯದಂತೆ, ಭಕ್ತರೆಲ್ಲರ ಒಕ್ಕೊರಲಿನ ನಿರ್ಧಾರದಂತೆ ೨೦೨೧ರ ಡಿಸೆಂಬರ್ ೨೯ರಂದು ನಡೆದ ಪೀಠಾರೋಹಣ ಕಾರ್ಯಕ್ರಮ ಸಂದು ೧೨ವರ್ಷಗಳೇ ಗತಿಸಿವೆ ಎಂದರು.

ಈ ಅವಧಿಯಲ್ಲಿ ಭಕ್ತರ ಮತ್ತು ದಾನಿಗಳ ನೆರವಿನಿಂದ ಶ್ರೀಮಠ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಗುರು ದೊಡ್ಡವರಲ್ಲ, ಬದಲಾಗಿ ಭಕ್ತರೇ ದೊಡ್ಡವರು ಏಕೆಂದರೆ ಭಕ್ತರು ಗುರುವನ್ನು ಜಗದ್ಗುರುವಾಗಿಸುತ್ತಾರೆ. ಈ ಶಕ್ತಿ ಇರುವ ಸದ್ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ. ಅನುಭಾವದಂಗಳ, ಲಿಂಗದೀಕ್ಷೆ, ೧೦ ಸಾವಿರಕ್ಕೂ ಹೆಚ್ಚಿ ದೀಕ್ಷಾಧಾರಿಗಳು, ೨೫ ಶಾಲೆಗಳಲ್ಲಿ ಬೆಳೆಯುವ ಸಿರಿ, ಸುತ್ತಲಿನ ೬ ನಗರ, ಪಟ್ಟಣಗಳಲ್ಲಿ ವ್ಯಸನಮುಕ್ತ ಪಾದಯಾತ್ರೆಗಳು, ಶ್ರಾವಣಮಾಸದ ಮತ್ತು ಸಂಕ್ರಮಣದ ಪ್ರವಚನ, ವಿಶೇಷ ಕಾರ್ಯಕ್ರಮಗಳು, ಗುರುಭವನ ಕಟ್ಟಡ ನಿರ್ಮಾಣ ಇವೆಲ್ಲವೂ ಭಕ್ತರ ಸಹಕಾರದಿಂದಲೇ ಪೂರ್ಣಗೊಂಡಿವೆ. ದ್ವಾದಶ ಪೀಠಾರೋಹಣ ಮತ್ತು ಗುರುಭವನ ಲೋಕಾರ್ಪಣೆ ಕಾರ್ಯಕ್ರಮಗಳು ಡಿ.೧೯ರಿಂದ ಆರಂಭಗೊಂಡು ಜನವರಿ ೧೪ರ ವರೆಗೆ ನಿರಂತರ ಸಾಗಲಿದ್ದು ಎಲ್ಲರ ಸಹಕಾರ ಅಗತ್ಯವೆಂದರು.

ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳಾಡಿದ ಗಿರೀಶ ಮುತ್ತೂರ ಲೋಕಾರ್ಪಣೆ ಕಾರ್ಯಕ್ರಮದ ವಿವರಗಳನ್ನು ಸಭೆಯ ಮುಂದಿಟ್ಟರು. ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ಸಿದ್ಧರಾಜ ಪೂಜಾರಿ ಮತ್ತು ಸದಾಶಿವ ಗಾಯಕವಾಡ ದ್ವಾದಶ ಪೀಠಾವರೋಹಣ ನಿಮಿತ್ತ ಗುರುಸಿದ್ದೇಶ್ವರಶ್ರೀಗಳನ್ನು ಷಟಸ್ಥಳ ಸಿಂಹಾಸನದಲ್ಲಿ ಕೂರಿಸಿ ಭಕ್ತವೃಂದ ಗೌರವಿಸುವ ಕೆಲಸದೊಡನೆ ಶ್ರೀಮಲ್ಲಿಕಾರ್ಜುನ ಸಮಸ್ತ ದೈವ ಮಂಡಳದ ವತಿಯಿಂದ ೧೭ ದಿನಗಳ ಕಾಲ ಎಲ್ಲ ವಿಧದ ನೆರವು ನೀಡುವುದಾಗಿ ಘೋಷಿಸಿದರು. ಗುರುದೇವ ಬ್ರಹ್ಮಾನಂದಶ್ರೀಗಳ ರಜತ ವಿಗ್ರಹ, ಶ್ರೀಮಠದ ಎಲ್ಲ ೩೪ ಕಳಶಗಳನ್ನು ರಾಮಪೂರದ ಶ್ರೀನೀಲಕಂಠೇಶ್ವರ ಮಠದಿಂದ ಸಕಲ ಮಂಗಲವಾದ್ಯಗಳೊಡನೆ ಆರುತಿ, ಕುಂಭಮೇಳ ಜೊತೆ ಪಾದಯಾತ್ರೆ ಮೂಲಕ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತರಲಾಗುವುದು. ಪ್ರತಿದಿನ ಪ್ರವಚನ, ಶಾಸ್ತ್ರೀಯ ಸಂಗೀತ, ಜನಪದ ಸಂಗೀತ ಮತ್ತು ರಬಕವಿಯ ಎಲ್ಲ ಶಿಕ್ಷಣ ಸಂಸ್ಥೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಬಕವಿ-ಬನಹಟ್ಟಿ, ರಾಮಪೂರ, ಹೊಸೂರ, ತೇರದಾಳ, ಕಾಲತಿಪ್ಪಿ, ಚಿಮ್ಮಡ, ಮಹಾಲಿಂಗಪೂರ, ಯರಗಟ್ಟಿ, ಗೋಲಭಾಂವಿ ಸೇರಿದಂತೆ ಸುತ್ತಲಿನ ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ನಿರೂಪಕ ಮಹಾದೇವ ಕವಿಶೆಟ್ಟಿ ವಿವರಿಸಿದರು. ಪೂರ್ವಭಾವಿ ಸಭೆಯಲ್ಲಿ ರಬಕವಿ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Share this article