ಕನ್ನಡಪ್ರಭ ವಾರ್ತೆ ನಂಜನಗೂಡು
ಮಹಾಶಿವರಾತ್ರಿಯ ಜಾಗರಣೆಯ ಪ್ರಯುಕ್ತ ರಾತ್ರಿಯಿಡೀ ಶಿವನಾಮ ಸ್ಮರಣೆ, ಜಾಗರಣೆ ಮಾಡುವ ಮೂಲಕ ಜನರು ಭಕ್ತಿ ಸಾಗರದಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.
ಶುಕ್ರವಾರ ಮುಂಜಾನೆ 4.30 ರಿಂದಲೇ ಕಪಿಲಾನದಿಯಲ್ಲಿ ಮಿಂದು ದೇವರ ದರ್ಶನಕ್ಕಾಗಿ ಸಾಲು ಗಟ್ಟಿ ನಿಂತಿದ್ದರು. ಮಹಾಶಿವರಾತ್ರಿ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ 5 ಕ್ಕೆ ಉಷಾಕಾಲದ ಪೂಜೆಯಲ್ಲಿ, ಕ್ಷೀರಾಭಿಷೇಕ, ಪದ್ಯಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಾಹಾನ್ಯಾಸಕ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಾಲ್ಯನ್ನ, ಮಹಾ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.ದೇವಾಲಯದ ಆವರಣದ ಮುಂಭಾಗದಲ್ಲಿ ಭಕ್ತರು ಉರುಳು ಸೇವೆ, ಧೂಪ ಸೇವೆ, ತಲಾಭಾರ ಸೇವೆಗಳನ್ನು ನೆರವೇರಿಸಿದರು. ಕಪಿಲಾ ನದಿಯಲ್ಲಿ ದೀಪಗಳನ್ನು ತೇಲಿ ಬಿಟ್ಟು ಹರ್ಷ ವ್ಯಕ್ತಪಡಿಸಿದರಲ್ಲದೆ ದೇವರ ಹುಂಡಿಗೆ ಹರಕೆ ಬೆಳ್ಳಿ, ಚಿನ್ನದ ಪದಾರ್ಥಗಳನ್ನು ಹಾಕಿ ಹರಕೆ ತೀರಿಸಿ ಭಕ್ತಿ ಮೆರೆದರು.
ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಮುಂಜಾನೆಯವರೆವಿಗೂ ದೇವಾಲಯದ ಬಾಗಿಲು ತೆರದಿದ್ದರಿಂದಾಗಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಶ್ರೀಕಂಠೇಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾಗಿ ಭಾವಪರವಶರಾದರು.
ದೇವಾಲಯದ ಮುಂಭಾಗದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಪ್ರಯುಕ್ತ ಸರ್ಕಾರದ ವತಿಯಿಂದ ಶಿವರಾತ್ರಿ ಸಂಗೀತ ಜಾಗರಣೆ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್, ಸರಿಗಮಪ ಖ್ಯಾತಿಯ ರವೀಂದ್ರ, ವಿನೋದ್, ವಿಹಾನ್ ಆರ್ಯ ತಂಡದ ವತಿಯಿಂದ ನಡೆಸಿಕೊಟ್ಟ ಗಾಯನ, ಶಿವನಾಮಸ್ಮರಣೆಯ ಭಕ್ತಿಗೀತೆಗಳು ಭಕ್ತರ ಮನಗೆದ್ದವು.
ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ದಾಸೋಹಭವನದಲ್ಲಿ ಬೆಳಗ್ಗೆಯಿಂದ ರಾತ್ರಿ 11 ಗಂಟೆಯವರೆಗೂ ಉಪಹಾರ, ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಲ್ಲದೆ ಸೇವಾರ್ಥದಾರರು ಕೇಸರಿ ಬಾತ್, ಖಾರಾ ಬಾತ್ ಪ್ರಸಾದ ವಿನಿಯೋಗ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಪೋಲೀಸರು ಬಿಗಿ ಪೋಲೀಸ್ ಬಂಧೋಬಸ್ತ್ಅನ್ನು ನಿಯೋಜಿಸಲಾಗಿತ್ತು. ದೇವಾಲಯಕ್ಕೆ 100 ರು. ವಿಶೇಷ ದರ್ಶನದ ಟಿಕೆಟ್ ನಿಂದಲೇ ಸುಮಾರು ಲಕ್ಷಾಂತರ ರು. ಆದಾಯ ಬಂದಿದೆ ಎಂದು ದೇವಾಲಯದ ಇಓ ಜಗದೀಶ್ ಪತ್ರಿಕೆಗೆ ಮಾಹಿತಿ ನೀಡಿದರು.
ತಾಲೂಕಿನ ದೇವಿರಮ್ಮನಹಳ್ಳಿಯ ಶ್ರೀ ಶರಣ ಸಂಘಮ ಮಠದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ 108 ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿ ಲಿಂಗಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಪಟ್ಟಣದ ಕಾಶಿ ವಿಶ್ವನಾಥ ದೇವಾಲಯ, ತಾಲೂಕಿನ ಸುತ್ತೂರು ಮಠದಲ್ಲೂ ಕೂಡ ಶಿವರಾತ್ರಿ ಜಾಗರಣೆಯ ಅಂಗವಾಗಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದಕ್ಷಿಣಕಾಶಿ ನಂಜನಗೂಡಿನ ಎಲ್ಲಾ ಶಿವ ದೇವಾಲಯಗಳಲ್ಲೂ ಕೂಡ ಭಕ್ತರು ದರ್ಶನ ಪಡೆಯುವ ಮೂಲಕ ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದರು.