ದಲಿತ ಪೂಜಾರಿಯ ಪಾದಸ್ಪರ್ಶಕ್ಕೆ ಪುನೀತರಾದ ಭಕ್ತರು

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಭಕ್ತರ ಬೆನ್ನ ಮೇಲೆ ನಿಧಾನವಾಗಿ ಒಬ್ಬ ಕೋಲು ಹೊತ್ತ ಹರಿಜನ ಪೂಜಾರಿ ನಡೆಯುತ್ತಾ ಸಾಗಿದರು. ಇದೇ ರೀತಿ ದೇವಸ್ಥಾನದ ವರೆಗೆ ಅಂದರೆ ಅಂದಾಜು 2 ಕಿಲೋ ಮೀಟರ್ ಉದ್ದ ನಡಿಗೆ ಸಾಗಿತು.

ಬಿ. ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ದಲಿತ ಪೂಜಾರಿಯ ಪಾದಸ್ಪರ್ಶಕ್ಕೆ ಮೈಯೊಡ್ಡಿ ಹರಕೆ ತೀರಿಸಿ ಸರ್ವ ಜನಾಂಗದ ಭಕ್ತರು ಪುನೀತರಾದ ವಿಶಿಷ್ಟ ಸಂಪ್ರದಾಯ ತಾಲೂಕಿನ ಅರಸಿಕೇರಿ ದಂಡಿ ದುರುಗಮ್ಮನ ಜಾತ್ರೆಯಲ್ಲಿ ಭಾನುವಾರ ಜರುಗಿತು.

ಅರಸಿಕೇರಿ ಗ್ರಾಮ ಅಂದಾಜು 7 ಸಾವಿರ ಜನಸಂಖ್ಯೆಯುಳ್ಳ ಹೋಬಳಿ ಕೇಂದ್ರ. ಇಲ್ಲಿ ಪ್ರತಿವರ್ಷ ಡಿಸೆಂಬರ್‌ ಅಥವಾ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ದಂಡಿ ದುರುಗಮ್ಮನ ಜಾತ್ರೆ ಜರುಗುತ್ತದೆ. ಅದೇ ರೀತಿ ಈ ವರ್ಷವೂ ಜಾತ್ರೆಯು ವಿಶಿಷ್ಟವಾಗಿ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿತು.

ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರುಗಮ್ಮ ದೇವಿಯನ್ನು 2 ಕಿಮೀ ದೂರವಿರುವ ಹೊಳೆ (ಹೊಂಡ)ಗೆ ಗಂಗಾಪೂಜೆಗಾಗಿ ಕರೆತರಲಾಯಿತು. ಪೂಜೆ ಮುಗಿಸಿಕೊಂಡು ದೇವಿಯ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಕೆ) ಹೊತ್ತ ಹರಿಜನ ಪೂಜಾರಿ ದೇವಸ್ಥಾನದ ಕಡೆಗೆ ಹೋದರು.

ಆಗ ಲಿಂಗಾಯತ, ವಾಲ್ಮೀಕಿ, ಕುರುಬ, ಜಂಗಮ, ಭೋವಿ, ಬಾರಿಕರು, ಶೆಟ್ಟರು, ಬ್ರಾಹ್ಮಣರು, ಗೊಂದಳಿಯರು ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಸರ್ವ ಜಾತಿಯ ಭಕ್ತರು ಮಡಿಯಿಂದ ರಸ್ತೆ ಮಧ್ಯೆ ಬೋರಲಾಗಿ ಮಲಗಿಕೊಂಡರು. ಅವರ ಬೆನ್ನ ಮೇಲೆ ನಿಧಾನವಾಗಿ ಒಬ್ಬ ಕೋಲು ಹೊತ್ತ ಹರಿಜನ ಪೂಜಾರಿ ನಡೆಯುತ್ತಾ ಸಾಗಿದರು. ಇದೇ ರೀತಿ ದೇವಸ್ಥಾನದ ವರೆಗೆ ಅಂದರೆ ಅಂದಾಜು 2 ಕಿಲೋ ಮೀಟರ್ ಉದ್ದ ನಡಿಗೆ ಸಾಗಿತು.

ಕೆಲವು ಭಕ್ತರು ಒಂದು ಬಾರಿ ಬೆನ್ನು ತುಳಿಸಿಕೊಂಡರೂ ಮುಂದೆ ಪುನಃ ಹೋಗಿ ಇನ್ನೊಮ್ಮೆ ಸರತಿ ಸಾಲಿನಲ್ಲಿ ಮಲಗಿಕೊಂಡು ಪೂಜಾರಿ ಕಾಲನ್ನು ಬೆನ್ನ ಮೇಲೆ ತುಳಿಸಿಕೊಂಡರು.

ಈ ಸಂದರ್ಭದಲ್ಲಿ ಬೆನ್ನ ಮೇಲೆ ನಡೆಯುವವ ಸೇರಿ ಒಟ್ಟು 8 ಪೂಜಾರಿಗಳ ತಂಡ ಸಕಲ ವಾದ್ಯ, ಮೇಳಗಳ ಸದ್ದಿನೊಂದಿಗೆ ದೇವಿಯ ಮೂರ್ತಿಯೊಂದಿಗೆ ಹೊಳೆ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಸಾಗಿದರು. ಅದರಲ್ಲಿ ಒಬ್ಬ ಕೋಲು ಹೊತ್ತುಕೊಂಡ ಪೂಜಾರಿ ಮಾತ್ರ ಈ ರೀತಿ ಭಕ್ತರ ಮೈ ಮೇಲೆ ಹೋದರೆ ಉಳಿದವರು ಪಕ್ಕಕ್ಕೆ ನಡೆದು ಹೋದರು.

ಏಕೆ ಈ ಹರಕೆ?: ರೋಗ, ರುಜಿನ, ಕಷ್ಟ -ಕಾರ್ಪಣ್ಯಗಳು ಬಂದಾಗ ಜಾತ್ರೆಯಲ್ಲಿ ನಿನಗೆ ಅಡ್ಡ ಆಗುತ್ತೇವೆ ಎಂದು ದೇವಿಗೆ ಹರಕೆ ಹೊತ್ತಿರುತ್ತಾರೆ. ಅಲ್ಲದೇ ಹೀಗೆ ಮಲಗಿಕೊಂಡು ದುರುಗಮ್ಮ ದೇವಿಯ ಕೋಲನ್ನು ಹೊತ್ತು ಬರುವ ದಲಿತ ಪೂಜಾರಿಗಳ ಪಾದಸ್ಪರ್ಶ ಮಾಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಈ ಆಚರಣೆ ನಡೆಯುತ್ತದೆ ಎನ್ನುತ್ತಾರೆ ದಲಿತ ಮುಖಂಡರು.

ಈ ಹಿಂದೆ ಜಾತ್ರೆಯಲ್ಲಿ ಸಾವಿರಾರು ಕುರಿಮರಿಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ 5-6 ವರ್ಷಗಳಿಂದ ಪ್ರಾಣಿಬಲಿ ನಿಷೇಧ ಮಾಡಲಾಗಿದೆ.

ಒಟ್ಟಿನಲ್ಲಿ ಜಾತಿ- ಭೇದ ಎನ್ನದೇ ಸರ್ವ ಜನಾಂಗದವರು ಕೇಲನ್ನು ಹೊತ್ತ ಹರಿಜನ ಪೂಜಾರಿಗಳ ಪಾದಗಳನ್ನು ಮೈಯೊಡ್ಡಿ ದಂಡಿ ದುರುಗಮ್ಮಗೆ ಭಕ್ತಿ ಸಮರ್ಪಿಸುವುದು ವಿಶೇಷವಾಗಿದೆ.

Share this article