ಅಮರೇಶ್ವರಸ್ವಾಮಿ ಕಂದಗಲ್ಲಮಠ
ಹೌದು. ಕುಕನೂರು ತಾಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ಹಾಗೂ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಪ್ರತಿ ಶಾಲೆಗೆ ₹5 ಸಾವಿರ ನೀಡಿ, ಅದನ್ನು ಠೇವಣಿ ರೂಪದಲ್ಲಿ ಇರಿಸಿ, ಬಂದ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಬಹುಮಾನ ನೀಡಬೇಕು ಎಂದು ಶಿಕ್ಷಕರಿಗೆ ಹೇಳುತ್ತಾರೆ. ಅದಕ್ಕಾಗಿಯೇ ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ ಆರಂಭಿಸಿದ್ದಾರೆ.
ತಾಲೂಕಿನ ರಾಜೂರು, ಅಡ್ನೂರು, ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶದ ಹೆಚ್ಚಳದ ಕನಸು ಕಂಡಿದ್ದಾರೆ.ಸರ್ಕಾರಿ ಪ್ರೌಢಶಾಲೆಗೆ ತೆರಳಿ, ಆ ಶಾಲೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದಾರೆ. ನೀವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕು. ಎಲ್ಲರೂ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಬೇಕು. ನೀವು ಯಾರೂ ದಡ್ಡರಲ್ಲ. ನಿಮ್ಮಲ್ಲಿ ಉತ್ತಮ ಅಂಕ ಗಳಿಸುವ ಶಕ್ತಿ ಇದೆ. ಎದೆಗುಂದಬೇಡಿ ಎಂದು ಹೇಳುತ್ತಾರೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ದೂರ ಮಾಡಿ, ಉತ್ತಮ ಅಂಕ ಗಳಿಸುವ ಚೈತನ್ಯದ ನುಡಿ ಹೇಳುತ್ತಿದ್ದಾರೆ. ಒಂದು ಸರ್ಕಾರಿ ಪ್ರೌಢಶಾಲೆಗೆ ₹5 ಸಾವಿರ ನಗದು ನೀಡುತ್ತಿದ್ದಾರೆ.
ಏನಿದು ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ?:2025ರ ಸೆ. 17, 18ನೇ ದಿನ ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ಗದಗಿನ ಪುಟ್ಟರಾಜ ಗವಾಯಿಗಳ ಕ್ರಿಯಾಮೂರ್ತಿಗಳಾಗಿದ್ದ ಲಿಂ. ಪಂಚಾಕ್ಷರ ಶಿವಾಚಾರ್ಯರ ಗದ್ದುಗೆಯ ಶಿಲಾಮಂಟಪ ದೇವಸ್ಥಾನದ ಉದ್ಘಾಟನೆ ಜರುಗಿತು. ಈ ದೇವಸ್ಥಾನ ಉದ್ಘಾಟನೆ ಸವಿನೆನಪು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ ಲಿಂ. ಪಂಚಾಕ್ಷರ ಶಿವಾಚಾರ್ಯರ ನೆನಪಿಗಾಗಿ ಅಭಿನವ ಪಂಚಾಕ್ಷರ ಶಿವಾಚಾರ್ಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ ಸ್ಥಾಪಿಸಿ, ಶಾಲೆಗಳಿಗೆ ವಿತರಣೆ ಮಾಡುತ್ತಿದ್ದಾರೆ.ಭಕ್ತರು ನೀಡಿದ ದಕ್ಷಿಣೆ ಹಣ ವಿನಿಯೋಗ:ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಭಕ್ತರು ನೀಡಿದ ಕಾಣಿಕೆಯನ್ನು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೂಡಿಡುತ್ತಾ ಬಂದಿದ್ದಾರೆ. ₹5 ಸಾವಿರ ಸಂಗ್ರಹವಾದ ಕೂಡಲೇ ಯಾವುದಾದರೂ ಶಾಲೆಗೆ ತೆರಳಿ ಆ ಹಣ ಶಾಲೆಗೆ ನೀಡಿ, ತಮ್ಮ ಕಾರ್ಯ ಹೇಳಿ ಬರುತ್ತಿದ್ದಾರೆ.
80 ಶಾಲೆಗಳಿಗೆ ಠೇವಣಿ: ಈಗಾಗಲೇ ಶ್ರೀಗಳು ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ 40 ಸರ್ಕಾರಿ ಪ್ರೌಢಶಾಲೆ ಹಾಗೂ ಗದಗ ಜಿಲ್ಲೆಯಲ್ಲಿ 40 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ ಠೇವಣಿ ಇರಿಸಿದ್ದಾರೆ. ಆ ಹಣದ ಬಡ್ಡಿಯನ್ನು ನಗದು ಅಥವಾ ಬಹುಮಾನದ ರೂಪದಲ್ಲಿ ನೀಡುವಂತೆ ಶಾಲೆ ಶಿಕ್ಷಕರಿಗೆ ಶ್ರೀಗಳು ತಿಳಿಸಿದ್ದಾರೆ.ಈ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಕುಂಠಿತವಾಗುವುದನ್ನು ಗಮನಿಸಿ ಮಕ್ಕಳ ಪ್ರೌಢ ಶಿಕ್ಷಣದ ಉತ್ತೇಜನಕ್ಕೆ ಸಂಕಲ್ಪ ಮಾಡಿದೆವು. ನಮ್ಮ ಗುರುಗಳಾದ ಶ್ರೀ ಲಿಂ. ಪಂಚಾಕ್ಷರ ಶಿವಾಚಾರ್ಯರು ಆಡ್ನೂರು ಗ್ರಾಮದಲ್ಲಿ ಪ್ರೌಢಶಾಲೆ ತೆರೆದು, ಮಕ್ಕಳ ಪ್ರೌಢ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಅವರ ಶಿಕ್ಷಣಪ್ರೇಮ ಮುಂದುವರಿಸಲು ಹಾಗೂ ಅವರ ಗದ್ದುಗೆಯ ಶಿಲಾಮಂಟಪ ಉದ್ಘಾಟನೆ ನೆನಪಿಗಾಗಿ ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ ಠೇವಣಿ ಆರಂಭಿಸಿದ್ದೇನೆ. ಭಕ್ತರು ನೀಡುವ ಕಾಣಿಕೆಯನ್ನು ಈ ನಿಧಿಗೆ ಬಳಕೆ ಮಾಡಲಾಗುತ್ತಿದೆ ಎಂದು ಬೃಹನ್ಮಠ, ರಾಜೂರು-ಅಡ್ನೂರು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ತಿಳಿಸಿದ್ದಾರೆ.