ಪುತ್ತಿಗೆ ಪರ್ಯಾಯ: ನಿರೀಕ್ಷೆಗೂ ಮೀರಿ ಹರಿದು ಬಂತು ಹೊರೆ ಕಾಣಿಕೆ...

KannadaprabhaNewsNetwork |  
Published : Jan 18, 2024, 02:05 AM IST
ಹಸಿರು ಸಂಗ್ರಹ | Kannada Prabha

ಸಾರಾಂಶ

ಭಕ್ತರು ದೂರದೂರುಗಳಿಂದ ಲಕ್ಷಲಕ್ಷ ಪ್ರಮಾಣದಲ್ಲಿ ಹಸಿರು ಹೊರೆಕಾಣಿಕೆಯನ್ನು ತಂದೊಪ್ಪಿಸಿದ್ದಾರೆ. ಜ.8ರಿಂದ 17ರ ವರೆಗೆ 10 ದಿನಗಳ ಕಾಲ ಮುಖ್ಯವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಸಹಕಾರಿ ಸಂಘಗಳು, ಕಟೀಲು ದೇವಾಲಯ, ಮಟ್ಟುವಿನ ಗುಳ್ಳು ಬೆಳೆಗಾರರು, ಮಲ್ಪೆಯ ಮೊಗವೀರರು ಹೀಗೆ ನೂರಕ್ಕೂ ಹೆಚ್ಚು ಕಡೆಗಳಿಂದ ಅಕ್ಕಿಬೇಳೆ ತರಕಾರಿಗಳು ಬಂದಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೃಷ್ಣಮಠದಲ್ಲಿ ಇಂದಿನಿಂದ ನಿತ್ಯ 8 - 10 ಸಾವಿರ ಮಂದಿಗೆ ಅನ್ನದಾನದ ಜವಾಬ್ದಾರಿ ಪುತ್ತಿಗೆ ಮಠದ್ದು, ಇಂದು ಮೊದಲ ದಿನ 20 - 25 ಸಾವಿರ ಮಂದಿ ಕೃಷ್ಣ ಅನ್ನಪ್ರಸಾದವನ್ನು ಸ್ವೀಕರಿಸಲಿದ್ದಾರೆ. ಇದು ಬಹುದೊಡ್ಡ ಮತ್ತು ಭಾರಿ ಸಂಪನ್ಮೂಲವನ್ನು ಬಯಸುವ ಸಾಹಸವಾಗಿದೆ.

ಅದಕ್ಕಾಗಿ ಭಕ್ತರು ದೂರದೂರುಗಳಿಂದ ಲಕ್ಷಲಕ್ಷ ಪ್ರಮಾಣದಲ್ಲಿ ಹಸಿರು ಹೊರೆಕಾಣಿಕೆಯನ್ನು ತಂದೊಪ್ಪಿಸಿದ್ದಾರೆ. ಜ.8ರಿಂದ 17ರ ವರೆಗೆ 10 ದಿನಗಳ ಕಾಲ ಮುಖ್ಯವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಸಹಕಾರಿ ಸಂಘಗಳು, ಕಟೀಲು ದೇವಾಲಯ, ಮಟ್ಟುವಿನ ಗುಳ್ಳು ಬೆಳೆಗಾರರು, ಮಲ್ಪೆಯ ಮೊಗವೀರರು ಹೀಗೆ ನೂರಕ್ಕೂ ಹೆಚ್ಚು ಕಡೆಗಳಿಂದ ಅಕ್ಕಿಬೇಳೆ ತರಕಾರಿಗಳು ಬಂದಿವೆ. ಹೊರೆಕಾಣಿಕೆ ಸಂಗ್ರಹದ ಉಸ್ತುವಾರಿ ಶ್ರೀನಿವಾಸ ಬಲ್ಲಾಳ್ ಅವರ ಪ್ರಕಾರ ಈ ಹಿಂದಿನ ಎಲ್ಲ ಪರ್ಯಾಯೋತ್ಸವಗಳಿಗಿಂತಲೂ ಈ ಬಾರಿಯ ಪುತ್ತಿಗೆ ಪರ್ಯಾಯಕ್ಕೆ ಹೆಚ್ಚು ಪ್ರಮಾಣದಲ್ಲಿ ಹೊರೆಕಾಣಿಕೆ ಬಂದಿದೆ. ಒಟ್ಟು ಅಂದಾಜು 1 ಲಕ್ಷಕ್ಕೂ ಹೆಚ್ಚು ತೆಂಗಿನಕಾಯಿಗಳು ಸಂಗ್ರಹವಾಗಿದ್ದರೆ, ಅಕ್ಕಿ ಬೇಳೆ, ತುಪ್ಪ, ಬೆಲ್ಲ, ತರಕಾರಿ, ಬಾಳೆಹಣ್ಣು ಇತ್ಯಾದಿ ಸುಮಾರು 3 ಕೋಟಿ ರು.ಗೂ ಹೆಚ್ಚು ಮೌಲ್ಯದ ಹೊರಕಾಣಿಕೆ ಬಂದಿದೆ. ಇಂದು ಅನ್ನದಾನಕ್ಕೆ ಅಗತ್ಯವಿರುವಷ್ಟನ್ನು ಬಳಸಿ, ಉಳಿದ ತರಾಕರಿ ಹಣ್ಣು ಕೊಳೆಯುವುದನ್ನು ತಪ್ಪಿಸಲು ಹರಾಜು ಹಾಕಲಾಗುತ್ತದೆ.

ದ.ಕ. ಜಿಲ್ಲೆಯಿಂದ ಹರಿದು ಬಂತು ಭಾರಿ ಹೊರೆ ಕಾಣಿಕೆ: ಉಡುಪಿಯೆಲ್ಲೆಡೆ ಪುತ್ತಿಗೆ ಪರ್ಯಾಯ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಗುರುವಾರ ನಡೆಯುವ ಪುತ್ತಿಗೆ ಮಠದ ಪರ್ಯಾಯೋತ್ಸವದ ಅನ್ನಸಂತರ್ಪಣೆಗೆ, ಕೊನೆಯ ದಿನ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ವತಿಯಿಂದ ಭಾರಿ ಪ್ರಮಾಣದಲ್ಲಿ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು.

ನಂತರ ದಕ್ಷಿಣ ಕನ್ನಡ ಜಿಲ್ಲೆ, ಮೂಲ್ಕಿ, ಮೂಡುಬಿದಿರೆ, ಕಟೀಲು, ಮಂಗಳೂರು ವಲಯದ ಕೃಷ್ಣ ಭಕ್ತರಿಂದ ಬೃಹತ್ ಹೊರೆಕಾಣಿಕೆಯನ್ನು ತಂದೊಪ್ಪಿಸಲಾಯಿತು.ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಪ್ರದೀಪ ಕುಮಾರ್ ಕಲ್ಕೂರರ ನೇತೃತ್ವದಲ್ಲಿ ಬಂದ ಈ ಹೊರೆಕಾಣಿಕೆಯನ್ನು ಪುತ್ತಿಗೆ ಮಠದ ದಿವಾಣ ನಾಗರಾಜ ಆಚಾರ್ಯ ಮತ್ತು ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ ಗೌರವಿಸಿದರು.

ರಾಮಾಯಣ ಸಂವಾದ: ಇದೇ ಸಂದರ್ಭದಲ್ಲಿ ರಥಬೀದಿಯ ಆನಂದ ತೀರ್ಥ ಮಂಟಪದಲ್ಲಿ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ‘ರಾಮಾಯಣದ ಪ್ರಸ್ತುತತೆ ಮತ್ತು ರಾಮ ರಾಜ್ಯ’ ಎಂಬ ಬಗ್ಗೆ ಖ್ಯಾತ ಚಿಂತಕ ರೋಹಿತ್ ಚಕ್ರ ತೀರ್ಥ, ಷಣ್ಮುಖ ಹೆಬ್ಬಾರ್ ಮತ್ತು ರಘುಪತಿ ಭಟ್ ಸಂವಾದ ನಡೆಸಿಕೊಟ್ಟರು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬುಧವಾರ ಇಲ್ಲಿನ ಬಡಗುಬೆಟ್ಟು ಕೋಆಪರೇಟಿವ್ ಬ್ಯಾಂಕಿಗೆ ಭೇಟಿ ನೀಡಿ ಗೌರವ ಸ್ವೀಕರಿಸಿದರು. ಶ್ರೀಗಳು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಗೌರವಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌