ಶಿರಸಿ: ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಹತ್ತಿರವಾಗುತ್ತಿದ್ದಂತೆಯೇ ಮರಾಠಿಕೊಪ್ಪದಲ್ಲಿರುವ ರಾಮ ದೇವಾಲಯಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ. ಮರಾಠಿಕೊಪ್ಪದ ದ್ವಾರದಲ್ಲಿ ಬೃಹತ್ ರಾಮನ ಕಟೌಟ್‌ಗಳು, ಆಕರ್ಷಕ ಧ್ವಜ, ಕಮಾನುಗಳೂ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ನಿತ್ಯಾನಂದ ಮಂದಿರದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ದೇವರ ಮೂರ್ತಿಯನ್ನು ಹೊಂದಿರುವ ಶ್ರೀರಾಮಾಂಜನೇಯ ಮಂದಿರ ಶನೀಶ್ವರ ಮಂದಿರ, ಸುಬ್ರಹ್ಮಣೇಶ್ವರ ಮಂದಿರ, ಶಿವ ಪಾರ್ವತಿ ಗಣಪತಿ ಹಾಗೂ ಶಿವಲಿಂಗವನ್ನು ಹೊಂದಿರುವ ಶ್ರೀ ಉಮಾ ಮಹೇಶ್ವರ ಮಂದಿರವಿದೆ. ಭಕ್ತರ ಪಾಲಿಗೆ ಮಂದಿರಗಳ ಬೀಡಾಗಿ ಹೊರಹೊಮ್ಮುತ್ತಿದೆ. ಈ ಕಾರಣದಿಂದಲೇ ಈ ಮಂದಿರದಲ್ಲಿ ಪ್ರತಿನಿತ್ಯವೂ ಭಕ್ತರಿಂದ ತುಂಬಿರುತ್ತಾರೆ. ಶ್ರೀ ನಿತ್ಯಾನಂದ ಹಾಗೂ ಶ್ರೀ ಮಹಾಬಲಾನಂದ ಸಮಾಧಿ ಮಂದಿರವು ಬೆಳ್ಳಕ್ಕಿ ಕೆರೆ ಹಿಂಭಾಗದಲ್ಲಿರುವ ಮರಾಠಿಕೊಪ್ಪದಲ್ಲಿ ೧೯೫೯ರಲ್ಲಿ ಸ್ಥಾಪನೆಗೊಂಡಿತು. ನಂತರ ೧೯೬೪ರಲ್ಲಿ ಶ್ರೀರಾಮಾಂಜನೇಯ ಮಂದಿರ, ಶನೀಶ್ವರ ಮಂದಿರ ಹಾಗೂ ೧೯೮೧ರಲ್ಲಿ ಉಮಾ ಮಹೇಶ್ವರ ಮಂದಿರವನ್ನು ಸ್ಥಾಪನೆ ಮಾಡಲಾಯಿತು. ಈ ಎಲ್ಲ ಮಂದಿರಗಳು ಶ್ರೀ ನಿತ್ಯಾನಂದ ಗುರುಗಳ ಶಿಷ್ಯರಾಗಿದ್ದ ಶ್ರೀ ಮಹಾಬಲಾನಂದ ಶ್ರೀಗಳಿಂದ ಸ್ಥಾಪನೆಗೊಂಡಿತು. ಈ ಮಠದಲ್ಲಿ ಪ್ರತಿವರ್ಷವೂ ಕಾಲಕ್ಕೆ ತಕ್ಕಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿರುತ್ತದೆ. ಶ್ರೀರಾಮ ನವಮಿ, ಭಗವಾನ ಶ್ರೀ ಸದ್ಗುರು ನಿತ್ಯಾನಂದ ಹಾಗೂ ಶ್ರೀ ಮಹಾಬಲಾನಂದರ ಪುಣ್ಯಾರಾಧನೆ, ರಥೋತ್ಸವ, ಶನೀಶ್ವರ ಜಯಂತಿ, ದತ್ತಾತ್ರೇಯ ಜಯಂತಿಯಂತಹ ಕಾರ್ಯಕ್ರಮಗಳು ಸಾರ್ವಜನಿಕ ಅನ್ನಪ್ರಸಾದದೊಂದಿಗೆ ಅದ್ಧೂರಿಯಾಗಿ ನಡೆಯುತ್ತಿರುತ್ತದೆ.ಈ ಮಂದಿರದಲ್ಲಿರುವ ಶ್ರೀ ರಾಮಾಂಜನೇಯ ಮಂದಿರದಲ್ಲಿ ಕಲ್ಲಿನಿಂದ ಕೆತ್ತಿರುವ ರಾಮ, ಸೀತೆ ಲಕ್ಷ್ಮಣ ಹಾಗೂ ಆಂಜನೇಯ ದೇವರ ಮೂರ್ತಿಗಳು ಆಕರ್ಷಕವಾಗಿ ಮೂಡಿ ಬಂದಿದ್ದು, ೬೦ ವರ್ಷವಾದರೂ ಜೀವಕಳೆಯಿಂದ ತುಂಬಿ ಭಕ್ತರಲ್ಲಿ ಭಕ್ತಿ ಹೆಚ್ಚಿಸುವಂತೆ ಮಾಡುತ್ತಿದೆ.
ಜ. ೨೨ರಂದು ಅಯೋದ್ಯದಲ್ಲಿ ರಾಮ ಮಂದಿರದ ಉದ್ಘಾಟನೆಗೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಎಲ್ಲೂ ಇಲ್ಲದ ವಿಶಿಷ್ಟ ರೀತಿಯ ಕಲ್ಲಿನ ಮೂರ್ತಿಯನ್ನು ಹೊಂದಿರುವ ಶ್ರೀರಾಮನ ಮಂದಿರದಿಂದ ಜ. ೨೨ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಗಾಟನೆಗೊಳ್ಳುತ್ತಿದ್ದರೆ ಶಿರಸಿಯಲ್ಲಿರುವ ಶ್ರೀ ರಾಮಾಂಜನೇಯ ಮಂದಿರದಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ಮರಾಠಿಕೊಪ್ಪದ ಯುವಕರ ತಂಡ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತ್ರದಲ್ಲಿ ಶ್ರಮಿಸಿದ್ದಾರೆ. ನಿತ್ಯಾನಂದ ಮಂದಿರ ಹಾಗೂ ಶ್ರೀ ಮಹಾಬಲಾನಂದರ ಸಮಾಧಿ ಮಂದಿರದ ಅದ್ಯಕ್ಷರಾದ ವಿಷ್ಣು ಹರಿಕಾಂತ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದಾರೆ.ರಾಜ್ಯದಲ್ಲಿ ಎಲ್ಲೂ ಕಾಣಸಿಗದ ಶ್ರೀ ರಾಮಾಂಜನೇಯ ಮಂದಿರ ಇಲ್ಲಿದೆ. ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಸ್ಮರಣೀಯವಾಗಿರಿಸಲು ನಮ್ಮ ಆಡಳಿತ ಮಂಡಳಿ ಸೇರಿದಂತೆ ಜೀವಜಲ ಕಾರ್ಯಪಡೆಯ ಶ್ರಮಿಸುತ್ತಿದೆ ಎಂದು ಭಗವಾನ್ ಶ್ರೀ ಸದ್ಗುರು ನಿತ್ಯಾನಂದ ಮಂದಿರ ಹಾಗೂ ಶ್ರೀ ಮಹಾಬಲಾನಂದರ ಸಮಾಧಿ ಮಂದಿರದ ಅಧ್ಯಕ್ಷ ವಿಷ್ಣು ಹರಿಕಾಂತ ಹೇಳಿದರು.