ಕಮಲಾಪುರ: ದೇವರಿಗೆ ಜನ ನೂರಾರು ರೀತಿ ಹರಕೆ ಕಟ್ಟುತ್ತಾರೆ. ಕೆಲವು ಕಡೆ ದಾರ ಕಟ್ಟಿದರೆ, ಕೆಲವು ಕಡೆ ಬೀಗ ಹಾಗೂ ಪುಟ್ಟ ತೊಟ್ಟಿಲುಗಳ ಮೂಲಕವೂ ಹರಕೆ ಕಟ್ಟುತ್ತಾರೆ. ಆದರೆ ಗೊಳಾ ಬಿ ಗ್ರಾಮದಲ್ಲಿ ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಭಕ್ತರು ಪಾದರಕ್ಷೆಗಳನ್ನೇ ಹರಕೆ ರೂಪದಲ್ಲಿ ದೇವಿಗೆ ಅರ್ಪಿಸುತ್ತಾರೆ.
ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕು ಹಾಗೂ ಕಲ್ಬುರ್ಗಿ ಗ್ರಾಮೀಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಕ್ಷೇತ್ರ ಗೊಳಾ ಬಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ಲಕ್ಕಮ್ಮ ದೇವಿ ಜಾತ್ರೆ ಜರುಗಿತು. ಪ್ರತಿ ಬಾರಿಯಂತೆ ಜಾತ್ರೆಯಲ್ಲಿ ಭಕ್ತರು ಪಾದರಕ್ಷೆಗಳನ್ನೇ ಹರಕೆ ರೂಪದಲ್ಲಿ ದೇವಿಗೆ ಅರ್ಪಿಸಿದರು.ಇಂತಹ ಭಿನ್ನ ಹರಕೆಯ ದೇವಿ ಜಾತ್ರೆಯೂ ಇಲ್ಲಿ ಮಾತ್ರ ತುಂಬಾ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿ ದೇವಿಗೆ ಸಲ್ಲಿಸುವ ಹರಕೆಯ ವಸ್ತುವೇ ಕಾಲಿಗೆ ಧರಿಸುವ ಚಪ್ಪಲಿಯಾಗಿರುತ್ತದೆ. ಚಪ್ಪಲಿಗೆ ನಮಸ್ಕಾರ, ಚಪ್ಪಲಿಗೆ ಪೂಜೆ, ಚಪ್ಪಲಿಗೆ ದೇವರು, ಪಾದರಕ್ಷೆವೇ ಇಲ್ಲಿ ಎಲ್ಲವೂ ಆಗಿದೆ. ಜಾತ್ರೆಗೆ ಬಂದಿರುವ ಸಾವಿರಾರು ಭಕ್ತರು ಹರಕೆ ಕಟ್ಟಿರುವ ಪಾದರಕ್ಷೆಗೆ ನಮಸ್ಕರಿಸುತ್ತಾರೆ. ಸಂಭ್ರಮದಿಂದ ಕುಣಿಯುತ್ತಲೇ ಅದ್ಧೂರಿ ಉತ್ಸವ ಮಾಡುತ್ತಾರೆ. ಜಾತ್ರೆಯಲ್ಲಿ ದೇಗುಲ ಮುಂದೆ ಪಾದರಕ್ಷೆಗಳನ್ನು ಕಟ್ಟುವ ಮೂಲಕ ಭಕ್ತರು ತಮ್ಮ ಹರಕೆಯ ತೀರಿಸುತ್ತಾರೆ. ಇಲ್ಲಿ ಪಾದರಕ್ಷೆ ಕಟ್ಟುವುದು ಕಾರಣವೂ ಇದೆ. ಲಕ್ಕಮ್ಮದೇವಿ ರಾತ್ರಿ ಹೊತ್ತಲ್ಲಿ ದೇಗುಲ ಬಿಟ್ಟು ಹೊರಗೆ ಸಂಚಾರ ಮಾಡುತ್ತಾರೆ. ಆಗ ಈ ಚಪ್ಪಲಿ ಧರಿಸಿಕೊಂಡು ಅಡ್ಡಾಡುತ್ತಾರೆ ಎಂದು ಬರುವ ಸಾವಿರಾರು ಭಕ್ತರ ನಂಬಿಕೆಯಾಗಿದೆ.ಹೀಗಾಗಿ ಜಾತ್ರೆಗೂ ಮುಂಚಿತವಾಗಿ ಒಂದು ದಿನ ಚಪ್ಪಲಿಗಳನ್ನು ಕಟ್ಟಲಾಗುತ್ತಿದೆ. ಆಶ್ಚರ್ಯ ಏನೆಂದರೆ ಆ ಚಪ್ಪಲಿಗಳು ಬೆಳಗ್ಗೆ ನೋಡುವಷ್ಟರಲ್ಲಿ ಸವೆದಿರುತ್ತವೆ. ಇದನ್ನೆಲ್ಲ ದೇವಿಯ ಶಕ್ತಿಯಿಂದಲೇ ನಡೆಯುತ್ತದೆ ಎಂದು ಬರುವ ಭಕ್ತರು ಹಾಗೂ ಜನರ ನಂಬಿಕೆಯಾಗಿದೆ.ಇನ್ನೊಂದು ದೇವಿಯ ವಿಶೇಷತೆ ಏನೆಂದರೆ ಈ ದೇಗುಲದಲ್ಲಿ ದೇವಿಯ ಮುಖ ಕಾಣುವುದಿಲ್ಲ. ಬದಲಿಗೆ ದೇವರ ಬೆನ್ನಿಗೆ ಎಲ್ಲರೂ ನಮಸ್ಕರಿಸುತ್ತಾರೆ. ಆಳಂದ ತಾಲೂಕಿನ ದತ್ತುರಗಾಂವ್ ಗ್ರಾಮದಿಂದ ಬಂದು ದೇವಿ ಇಲ್ಲಿ ಬೆನ್ನು ಮಾಡಿ ನೆಲೆಸಿದ್ದಾಳೆ ಹೀಗಾಗಿ ಇಲ್ಲಿ ದೇವಿಯ ಮುಖ ಕಾಣಲ್ಲ ದೇವಿಯ ಬೆನ್ನಿಗೆ ಭಕ್ತರು ನಮಸ್ಕರಿಸಿ ಪೂಜಿಸುತ್ತಾರೆ. ಇನ್ನು ಈ ಜಾತ್ರೆಗೆ ಅಕ್ಕಪಕ್ಕದ ಜಿಲ್ಲೆ ಮಾತ್ರವಲ್ಲದೆ ಮಹಾರಾಷ್ಟ್ರ,ತೆಲಂಗಾಣ, ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಒಟ್ಟಿನಲ್ಲಿ ದೇಗುಲಗಳಿಗೆ ಪಾದರಕ್ಷೆಗಳು ಬಿಟ್ಟು ಬರುವುದು ಸಂಪ್ರದಾಯ ಆದರೆ ಇಲ್ಲಿ ಮಾತ್ರ ಪಾದರಕ್ಷೆಗಳೇ ಭಕ್ತರು ಪೂಜೆ ಮಾಡುತ್ತಾರೆ.ಶುಕ್ರವಾರ ಬೆಳಗಿನ ಜಾವ 4ಕ್ಕೆ ಎದ್ದು ದೇವಿಯ ಉಡುಪು ಧರಿಸಿ ಮುಖಕ್ಕೆ ಬಣ್ಣ ಹಚ್ಚಿ ಎರಡು ದಿನಗಳ ಕಾಲ ತಮಟೆ ಬಡಿತ ಕುಣಿದು ಕೊಪ್ಪಳಿಸುತ್ತೇವೆ. ದೇವಿಯ ಉಡುಪು ಧರಿಸಿದ ಮೇಲೆ ಶೌಚ ಮಾಡುವುದು ಸೇರಿದಂತೆ ಎನನ್ನೂ ಮಾಡೋದಿಲ್ಲ. ದೇವಿಯ ಸಮವಸ್ತ್ರ ಮೈಮೇಲೆ ಇರೋವರೆಗೂ ತುಂಬ ಪವಿತ್ರರಾಗಿರುತ್ತೇವೆ. ಈ ದೇವಿಯ ಪವಾಡವೇ ಅಂತದ್ದಾಗಿದೆ.
ಲಖನ್ ಕೊಡಲ್ಲ, ದೇವಿಯ ಆರಾಧಕ, ಗೋಳಾ