ಭಟ್ಕಳದ ಸೋಡಿಗದ್ದೆಯಲ್ಲಿ ಭಕ್ತರಿಂದ ಕೆಂಡ ಸೇವೆ

KannadaprabhaNewsNetwork |  
Published : Jan 25, 2024, 02:02 AM IST
ಫೋಠೊ ಪೈಲ್ : 24ಬಿಕೆಲ್1: ಭಟ್ಕಳದ ಸೋಡಿಗದ್ದೆಯಲ್ಲಿ ಮಹಿಳೆಯೊಬ್ಬಳು ಕೆಂಡದ ಮೇಲೆ ನಡೆಯುವುದರ ಮೂಲಕ ಕೆಂಡಸೇವೆ ಮಾಡಿರುವುದು. ಪೊಟೋ 24ಬಿಕೆಲ್2:ಸೋಡಿಗದ್ದೆಯಲ್ಲಿ ಮಹಾಸತಿ ದೇ್ವಿ ದರ್ಶನಕ್ಕೆ ಆಗಮಿಸಿದ ಭಕ್ತರು  | Kannada Prabha

ಸಾರಾಂಶ

ಭಟ್ಕಳದ ಸುಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಎರಡನೇ ದಿನವಾದ ಬುಧವಾರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕೆಂಡ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಭಟ್ಕಳ:

ಇಲ್ಲಿನ ಸುಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಎರಡನೇ ದಿನವಾದ ಬುಧವಾರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕೆಂಡ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಬೆಳಗ್ಗೆ ೧೧.೩೦ಕ್ಕೆ ಆರಂಭವಾದ ಕೆಂಡ ಸೇವೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಕೆಂಡ ಹಾಯುವ ಮೂಲಕ ತಮ್ಮ ಹರಿಕೆ ತೀರಿಸಿದರು. ಚಿಕ್ಕ ಮಕ್ಕಳನ್ನು ತಾಯಂದಿರು ಹಾಗೂ ಪೂಜಾರಿಗಳು ಎತ್ತಿಕೊಂಡು ಕೆಂಡ ಹಾಯ್ದರು. ಹಲವು ಭಕ್ತರು ಭಾವಪರವಶರಾಗಿ ಕೆಂಡದ ಮೇಲೆ ನಡೆದು ತಮ್ಮ ಹರಿಕೆ ತೀರಿಸಿದರು. ಜಾತ್ರೆಯ ಎರಡನೇ ದಿನವೂ ಕೂಡಾ ಜನರ ಉದ್ದನೆಯ ಸರತಿ ಸಾಲು ನೆರೆದಿದ್ದು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು.

ಉಡುಪಿ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ದೇವಿಗೆ ಪೂಜೆ, ಹರಕೆ ಸಲ್ಲಿಸಿದರು. ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸ್ವಯಂ ಸೇವಕರು, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ಭದ್ರತಾ ವ್ಯವಸ್ಥೆ ಕಲಿಸಿದ್ದರು. ಶ್ರೀ ದೇವರ ದರ್ಶನ ಪಡೆದ ಭಕ್ತರು ಪ್ರಸಾದ ಭೋಜನದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ತಿಪ್ಪೇಸ್ವಾಮಿ, ಆಡಳಿತ ಕಮಿಟಿ ಅಧ್ಯಕ್ಷ ಭಾಸ್ಕರ ಮೊಗೇರ, ಉಪಾಧ್ಯಕ್ಷ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕಾರ್ಯದರ್ಶಿ ರಮೇಶ ದೇವಡಿಗ, ಈರಪ್ಪ ನಾಯ್ಕ, ಹನುಮಂತ ನಾಯ್ಕ, ಡಿ.ಎಲ್‌. ನಾಯ್ಕ ಸೇರಿದಂತೆ ಹಲವು ಪ್ರಮುಖರು ಭಕ್ತರಿಗೆ ದೇವಿ ದರ್ಶನ ಮತ್ತು ಸುಸೂತ್ರ ಪೂಜೆಗೆ ಸಹಕರಿಸಿದರು.ಸೋಡಿಗದ್ದೆಯ ದೇವಸ್ಥಾನದ ಸುತ್ತಮುತ್ತ ಅಂಗಡಿಗಳ ಭರಾಟೆ ಹೆಚ್ಚಿದ್ದು, ಜಾತ್ರೆಗೆ ಮೆರಗು ತಂದಿದೆ. ಗುರುವಾರ, ಶುಕ್ರವಾರ, ಶನಿವಾರ ತುಲಾಭಾರ ಸೇವೆ ನಡೆಯಲಿದ್ದು, ನೂರಾರು ಭಕ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜಾತ್ರೆ ಮುಗಿಯವ ದಿನವಾದ ಜ. 31ರ ವರೆಗೂ ರಾತ್ರಿ ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ