ಹೊಸಪೇಟೆ: ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರೆಯುವಷ್ಟು ಕಾಲ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿರುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಎನ್ನುವುದು ಸರ್ವಾಧಿಕಾರತ್ವವನ್ನು ತರುತ್ತದೆ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿದಿಬ್ಬಣ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರದು ಬಹುಮುಖ ವ್ಯಕ್ತಿತ್ವ. ಅವರನ್ನು ಯಾವುದೇ ಒಂದು ನಿಲುವಿಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ನಿಧನದ ನಂತರ ಅವರನ್ನು, ಅವರ ವಿಚಾರಗಳನ್ನು ಕಡೆಗಣಿಸುವ ಮೂಲಕ ವೈಚಾರಿಕ, ವೈಜ್ಞಾನಿಕತೆಗಳಿಗೆ ಬ್ರಾಹ್ಮಣಶಾಹಿಗಳು ವಿದಾಯ ಹೇಳಿದ್ದರು. 1990ರ ದಶಕದಲ್ಲಿ ಜಾಗೃತ ದಲಿತ ಪ್ರಜ್ಞೆಯ ಭಾಗವಾಗಿ ಅವರು ಮತ್ತೆ ಚರ್ಚೆಗೆ ಬಂದರು. ಅಂಬೇಡ್ಕರ್ ಅವರು ಬೌದ್ಧ ಧರ್ಮವು ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ನಿಂತಿರುವುದನ್ನು ತಿಳಿಸಿಕೊಟ್ಟರು. ಇಂದು ಧರ್ಮಗಳು ಈ ಬಹುಜನ ಹಿತಾಯ, ಬಹುಜನ ಸುಖಾಯ ತತ್ವದ ಮೇಲೆ ಪುನರ್ ರೂಪಿತವಾಗಬೇಕು ಎಂದರು.
ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿಗಳು ದೇಶದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವ ಸಾಮಾಜಿಕವಾಗಿ ಸಾಯುತ್ತಿದೆ. ಚುನಾವಣಾ ಪ್ರಜಾತಂತ್ರವನ್ನು ಟೊಳ್ಳು ಮಾಡುತ್ತಿದೆ. ಇದು ಜನರ ಬದುಕು ಅತಂತ್ರವಾಗಲು ಕಾರಣವಾಗುತ್ತಿದೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಯಾವ ಪಕ್ಷಗಳು ಕೂಡ ಸಮಾಜದ ಒಳತಿನ ಕಡೆಗೆ ಗಮನಹರಿಸುತ್ತಿಲ್ಲ. ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲರೂ ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದ ಮನೆ, ಬಳ್ಳಾರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪೀರ್ ಬಾಷಾ, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಇದ್ದರು.