ಹಾವೇರಿ: ಭಕ್ತಿಯು ಆತ್ಮಸಂತೋಷ, ಆತ್ಮವಿಕಾಸಕ್ಕೆ ದಾರಿಯಾಗಬೇಕೇ ವಿನಾ ಬೀದಿಯ ಸರಕಾಗಬಾರದು ಎಂದು ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಭಿಪ್ರಾಯಪಟ್ಟರು.ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಭಕ್ತಿ ಪರಂಪರೆ ಮತ್ತು ಕರ್ನಾಟಕ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಭಕ್ತಿ ಪರಂಪರೆಯು ಶಾಸ್ತ್ರಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ನೋಡುವ ಬದಲು ಜನ ಮೀಮಾಂಸೆಯ ಹಿನ್ನೆಲೆಯಲ್ಲಿ ಅವಲೋಕಿಸಬೇಕಾಗಿದೆ. ಸಮಾಜದಲ್ಲಿನ ತಾರತಮ್ಯ, ಶ್ರೇಷ್ಠ- ಕನಿಷ್ಠ, ಮೇಲು- ಕೀಳು, ಯುದ್ಧದಂತಹ ಸಂದಿಗ್ಧ ಸ್ಥಿತಿಯಲ್ಲಿ ಭಾರತೀಯ ಭಕ್ತಿಪಂಥವು ಎದುರುಗೊಂಡಿತ್ತು ಎಂದರು.
ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳಲು ಆಗ್ರಹ
ಹಾನಗಲ್ಲ: ತಾಲೂಕಿನ ವಿವಿಧೆಡೆ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ತಾಲೂಕು ಆಡಳಿತ ವಿಳಂಬವಿಲ್ಲದೆ ಇದನ್ನು ತಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಒತ್ತಾಯಿಸಿತು.ಮಂಗಳವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಅವರು, ಪಟ್ಟಣದಲ್ಲಿ ಕಾನೂನುಬಾಹಿರವಾಗಿ ಗೋವುಗಳನ್ನು ಹತ್ಯೆ ಮಾಡಿ, ಅನಧಿಕೃತವಾಗಿ ಮಾಂಸ ಮಾರಾಟ ನಡೆಯುತ್ತಿದೆ. ಇದನ್ನು ಸುತ್ತಮುತ್ತಲಿನವರು ವಿರೋಧಿಸಿದರೆ ಅವರಿಗೇ ಬೆದರಿಕೆ ಹಾಕುವ ಪ್ರಕರಣಗಳು ನಡೆಯುತ್ತಿವೆ. ಕೂಡಲೇ ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಜಂಟಿಯಾಗಿ ಈ ಅನಧಿಕೃತ ಕಸಾಯಿಖಾನೆಗಳಿಗೆ ದಾಳಿ ಮಾಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಅಧ್ಯಕ್ಷ ಎಂ.ಎಸ್. ಪಾಟೀಲ, ನಗರ ಘಟಕದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ಇಕ್ಬಾಲ ಉಪ್ಪಿನ, ನಾಗಪ್ಪ ಬಿದರಗಡ್ಡಿ, ನಾಗನಗೌಡ ಪಾಟೀಲ, ಮಾಲತೇಶ ಸೊಪ್ಪಿನ, ಅಡಿವೆಪ್ಪ ಆಲದಕಟ್ಟಿ, ಎಸ್.ಎಂ. ಕೋತಂಬರಿ ಮೊದಲಾದವರು ಇದ್ದರು.