ನಾಯಕನಹಟ್ಟಿ ಕಾಯಕಯೋಗಿಗೆ ಭಕ್ತಿ‌ ಭಾವ ಸಮರ್ಪಣೆ

KannadaprabhaNewsNetwork |  
Published : Mar 27, 2024, 01:01 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಅವಧೂತ ಪರಂಪರೆಯ ಕಾಯಕಯೋಗಿ ಖ್ಯಾತಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬಿಸಿಲಧಗೆಯನ್ನೂ ಲೆಕ್ಕಿಸದೇ ಭಕ್ತರು ಪಾಲ್ಗೊಂಡು ತೇರು ಎಳೆದು ಧನ್ಯತಾಭಾವ ಪ್ರದರ್ಶಿಸಿದರು.

ಮಧ್ಯಾಹ್ನದ ಹೊತ್ತಿಗೆ ಸರ್ವಲಂಕೃತಗೊಂಡು ನಿಂತಿದ್ದ ಮಹಾರಥ ಸುತ್ತಲೂ ಭಕ್ತರ ದಂಡು ನೆರೆದಿತ್ತು. ಒಳಮಠದಿಂದ ಶ್ರೀಗುರುತಿಪ್ಪೇರುದ್ರಸ್ವಾಮಿ ಪ್ರಭಾವಳಿ ಮದಕರಿ ನಾಯಕ ವೃತ್ತದ ಮೂಲಕ ರಥದ ಸಮ್ಮುಖಕ್ಕೆ ಬಂದು ನಿಂತಾದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸಂಪ್ರದಾಯದಂತೆ ದೇವರ ಪ್ರಭಾವಳಿ ರಥ ಸಿಂಹಾಸನ ಅಲಂಕರಿಸುವ ಮುನ್ನಾ ಮುಕ್ತಿಬಾವುಟ ಹರಾಜು ಸೇರಿದಂತೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳನ್ನು ಅರ್ಚಕರು ನೆರವೇರಿಸಿದರು.

ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಭಕ್ತರು ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬಿಡುವಿಲ್ಲದಂತೆ ದೇವರ ದರ್ಶನ‌ ಪಡೆದರು. ಭಕ್ತರ ಸಾಲು ಉದ್ದವಾಗಿತ್ತು. ಮಠಗಳ ಅಂಗಳದಲ್ಲಿ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಧ್ಯಾಹ್ನ 2 ಗಂಟೆಯಿಂದಲೇ ಒಳಮಠದಲ್ಲಿ ಮುಖ್ಯ ಅರ್ಚಕ ನೇತೃತ್ವದಲ್ಲಿ ಉತ್ಸವಮೂರ್ತಿ ಹೊತ್ತು ತರುವ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಸಿಂಗರಿಸಲಾಯಿತು. ನಂತರ 2:45 ಸುಮಾರಿಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ, ರಥೋತ್ಸವದ ಬಳಿ ತಂದು ಸಜ್ಜುಗೊಳಿಸಲಾಯಿತು. ಮಧ್ಯಾಹ್ನ 3.34ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ತೇರುಬೀದಿಯಿಂದ ಹೊರಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಠಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ‘ ಶ್ರೀತಿಪ್ಪೇರುದ್ರಸ್ವಾಮಿಗೆ ಜಯವಾಗಲಿ, ‘ಕಾಯಕ ಯೋಗಿಗೆ ಜಯವಾಗಲಿ’ ತಿಪ್ಪೇರುದ್ರ ಸ್ವಾಮಿ ಮಹಾರಾಜ್ ಕಿ ಜೈ ಎನ್ನುವ ಜಯಘೋಷ ಕೂಗುತ್ತಾ ರಥದ ದೊಡ್ಡ ಗಾತ್ರದ ಮಣಿ ಹಗ್ಗ ಎಳೆದು ಧನ್ಯರಾದರು.ನಾಡಿನ ಸುಭೀಕ್ಷೆ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ಸುಡು ಬಿಸಿಲ ನಡುವೆಯೂ, ಕುಂಡದಲ್ಲಿ ಒಣ ಕೊಬ್ಬರಿ ಜ್ವಲಿಸಿ ಲಕ್ಷಾಂತರ ಭಕ್ತರು ಭಕ್ತಿ ಭಾವ ಸಮರ್ಪಿಸುತ್ತಿದ್ದ ದೃಶ್ಯ ಗಮನ ಸೆಳೆಯುತ್ತಿತ್ತು. ನೆರೆಯ ಆಂದ್ರ, ತೆಲಂಗಾಣದಿಂದ ಬಂದಿದ್ದ ಭಕ್ತರು ಬೆಂಡು ಬತ್ತಾಸ್ ಖರೀದಿಯಲ್ಲಿ ಮುಳುಗಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಇತರರು ಇದ್ದರು.

₹61 ಲಕ್ಷಕ್ಕೆ ಮುಕ್ತಿಭಾವುಟ ಹರಾಜು

ರಥೋತ್ಸವಕ್ಕೂ ಮುನ್ನ ಶ್ರೀ.ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ನಡೆಸಲಾಯಿತು. ಸರ್ಕಾರಿ ಸವಾಲು ರು.1 ಕೋಟಿಯಿಂದ ಪ್ರಾರಂಭವಾಯಿತು. ಆರಂಭದಲ್ಲಿ ಹೀರೆಹಳ್ಳಿ ಮಲ್ಲೇಶ್ ರೂ.5 ಲಕ್ಷಕ್ಕೆ ಮುಕ್ತಿ ಭಾವುಟದ ಹರಾಜು ಕೂಗಿದರು. ನಂತರದಲ್ಲಿ ತಿಮ್ಮನಹಳ್ಳಿ ರಾಜಣ್ಣ, ಚಿತ್ರದುರ್ಗ ಮಹಾಂತೇಶ್, ದಾವಣಗೆರೆ ವಜ್ರ ಮಹೇಶ್, ಹೊನ್ನಾಳಿ ನಾಗೇಶ್ ಅವರು ತುರುಸಿನ ಹರಾಜು ಕೂಗಿದರು. ಕೊನೆಯಲ್ಲಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರೂ.61 ಲಕ್ಷಕ್ಕೆ ಹರಾಜು ಕೂಗಿ ಮುಕ್ತಿ ಬಾವುಟ ಪಡೆದುಕೊಂಡಿದ್ದರು. ಕಳೆದ ವರ್ಷವೂ ರು.55 ಲಕ್ಷಕ್ಕೆ ಡಿ.ಸುಧಾಕರ್ ಮುಕ್ತಿ ಬಾವುಟ ಪಡೆದುಕೊಂಡಿದ್ದನ್ನು ಸ್ಮರಿಸಬಹುದು. ಹರಾಜಿನ ನಂತರ ದೊಡ್ಡ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ