ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಹೆಚ್ಚಿನ ಸರಕಾರಿ ಯೋಜನೆಗಳಲ್ಲಿ, ಕೆಲವೊಮ್ಮೆ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಇರುತ್ತವೆ, ಆದರೆ ಧರ್ಮಸ್ಥಳದ ಸಂಸ್ಥೆಗಳು ಸದಾ ಪರಿಶೀಲನೆ ಮಾಡುವುದರಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳಿತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶಕ್ಕೇ ಮಾದರಿಯಾಗಿದೆ. ದೇಶದಲ್ಲಿ ನಬಾರ್ಡ್ ಈ ಮಾದರಿಯನ್ನು ಅನುಷ್ಠಾನ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಮಾತನಾಡಿದರು.
ಕೇಂದ್ರ ಸರಕಾರವು ತನ್ನ ನೀತಿಗಳಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸುವತ್ತ ಚಿಂತಿಸಿದಲ್ಲಿ ನವ ಭಾರತದ ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.2047ರ ವೇಳೆಗೆ ಭಾರತವು ಸಂಪೂರ್ಣವಾಗಿ ಅಭಿವೃದ್ಧಿ ಭಾರತವಾಗಿ ಕಂಗೊಳಿಸಬೇಕು ಎಂಬ ಕನಸು ಪ್ರಧಾನಿ ನರೇಂದ್ರ ಮೋದಿಯವರದ್ದು. ಸರ್ಕಾರವು ಹಳ್ಳಿಗಳ ಸಶಕ್ತೀಕರಣಕ್ಕೆ ಆದ್ಯತೆ ನೀಡುತ್ತಿದೆ. ಇದಕ್ಕೆ ಮಹಿಳೆಯರ ಪಾಲು ಅಧಿಕವಾಗಬೇಕು. ಸ್ವಸಹಾಯ ಸಂಘಗಳ ಮಾದರಿ ಈಗ ಕೇವಲ ಕಲ್ಯಾಣದ ಅಥವಾ ಸಹಾಯ ನೀಡುವ ಕ್ರಮವಲ್ಲ. ಇದು ಮಹಿಳೆಯರಿಗೆ ತಮ್ಮ ಆದಾಯವನ್ನು ಗಳಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಲು ಬೇಕಾದ ಸಂಪನ್ಮೂಲಗಳನ್ನು ನೀಡುತ್ತದೆ. ಇಂತಹ ಗುಂಪುಗಳಲ್ಲಿ ಭಾಗವಹಿಸಿದ ಮಹಿಳೆಯರು ಗಳಿಸುತ್ತಿರುವ ಲಾಭ ಅವರಿಗೆ ಗೌರವ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಸರ್ಕಾರಿ ಯೋಜನೆಗಳು, ಧರ್ಮಸ್ಥಳ ಯೋಜನೆಯಂತಹ ಎನ್‌ಜಿಒಗಳು ಗ್ರಾಮೀಣ ಮಹಿಳೆಯರಿಗೆ ಪ್ರಗತಿಯ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಸಂಸ್ಥೆಗಳು ಕೇವಲ ಹಣಕಾಸು ಸಹಾಯವನ್ನಷ್ಟೆ ನೀಡುತ್ತವೆಯೆಂದು ಅಲ್ಲ, ಅವುಗಳು ಮಾರ್ಕೆಟ್‌ಗೆ ಪ್ರವೇಶ ಮತ್ತು ಸಾಲಗಳ ಸರಬರಾಜು ಮಾಡುತ್ತವೆ, ಇದು ಸಂಶಯವಿಲ್ಲದೆ ಸುಸ್ಥಿರ ಅಭಿವೃದ್ಧಿಗಾಗಿ ಅಗತ್ಯವಿದೆ ಎಂದರು.
ಈಗ ಗ್ರಾಮೀಣ ಮಹಿಳೆಯರಿಗೆ ಡಿಜಿಟಲ್ ಮೂಲಸೌಕರ್ಯಗಳ ಮೂಲಕ ತಮ್ಮ ಉತ್ಪನ್ನಗಳನ್ನು ಇ- ಮಾರ್ಕೆರ್ಟ್‌ಗಳಲ್ಲಿ ಪ್ರದರ್ಶಿಸಲು ಹಾಗೂ ಪಾವತಿಯನ್ನು ಡಿಜಿಟಲ್‌ನಲ್ಲಿ ಸ್ವೀಕರಿಸಲು ಅವಕಾಶ ದೊರಕಿದೆ. ಇದು ಗ್ರಾಮೀಣ ಮಹಿಳೆಯರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಗಳನ್ನು ಹುಟ್ಟು ಹಾಕುತ್ತದೆ, ಇದು ಆದಾಯ ಗಳಿಸಲು ಉತ್ತಮ ಅವಕಾಶಗಳನ್ನು ನೀಡುತ್ತದೆ. ಧರ್ಮಸ್ಥಳದ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಪೂರ್ವಭಾವಿಯಾಗಿ ಶ್ರಮಿಸುತ್ತಿದ್ದು, ಈ ಮಾದರಿ ಸರ್ಕಾರದ ನೀತಿಗಳಿಗೆ ಪ್ರಭಾವವನ್ನು ಬೀರುವುದರಲ್ಲಿ ನೆರವಾಗಿವೆ ಎಂದು ಸಚಿವೆ ನಿರ್ಮಲಾ ಹೇಳಿದರು.ಧರ್ಮಸ್ಥಳ ಯೋಜನೆಗಳ ಮಾದರಿಯ ಯಶಸ್ಸಿನಲ್ಲಿ ಒಂದು ಮುಖ್ಯ ಅಂಶವೇನೆಂದರೆ ನೈತಿಕ ಹೊಣೆ. ಧರ್ಮಸ್ಥಳದಂತಹ ಸಂಸ್ಥೆಗಳು ಈ ಪ್ರಕ್ರಿಯೆಯ ಮೇಲೆ ನೈತಿಕ ನಿಯಂತ್ರಣವನ್ನು ನಿರ್ವಹಿಸುತ್ತವೆ ಎಂದರು.ಧರ್ಮಸ್ಥಳ ಗ್ರಾಮೀಣ ಯೋಜನೆಯ ಪ್ರಯೋಗಾಲಯ: ಗ್ರಾಮಾಭಿವೃದ್ಧಿ ಯೋಜನೆಯಿಂದ ಫಲ ಪಡೆದು ಲಾಭಾಂಶವನ್ನು ಸ್ವೀಕರಿಸಿರುವ ಎಲ್ಲರಿಗೂ ವಂದನೆಗಳು. ಇಂಥ ಕಾರ್ಯಕ್ರಮಗಳಿಂದ ಇಂದು ಮಹಿಳೆಯರು ಸ್ವಯಂ ಗೌರವದಿಂದ ನಾವೂ ದುಡಿಯುತ್ತಿದ್ದೇವೆ ಎಂದು ಹೇಳಬಹುದಾಗಿದೆ. ನೀವು ಕೊಡುವ ಹಣ ಲಾಭದ ರೂಪದಲ್ಲಿ ಗೌರವಪೂರ್ವಕವಾಗಿ ನಿಮಗೆ ವಾಪಸ್ ಬಂದಿದೆ. ಗ್ರಾಮೀಣ ಅಭಿವೃದ್ಧಿಗೆ ಜನರ ಹಣ ಬಳಕೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಆತ್ಮನಿರ್ಭರ್ ಭಾರತ್ ಘೋಷಣೆ ಮಾಡಿದ ಬಳಿಕ 5 ಮಿನಿ ಬಜೆಟ್ ಗಳನ್ನು ರಾಷ್ಟ್ರಕ್ಕೆ ಅರ್ಪಿಸಿದ್ದೇವೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಗ್ರಾಮದ ಅಭಿವೃದ್ಧಿಗೆ ಕಾರಣರಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಕೂಡ ಇದೇ ಆಗಿದೆ. ಹೆಣ್ಮಕ್ಕಳು ನಾಯಕತ್ವ ವಹಿಸಿದರೆ ಏನಾಗುತ್ತೆ ಅನ್ನುವುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಉದಾಹರಣೆ. ಧರ್ಮಸ್ಥಳ ಗ್ರಾಮೀಣ ಯೋಜನೆಯ ಪ್ರಯೋಗಲಾಯ ಎಂದರೆ ತಪ್ಪಾಗದು ಎಂದು ಯೋಜನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಯೋಜನೆಯಲ್ಲಿ ಮಹಿಳೆಯರೇ ಹೆಚ್ಚು: ಬಳಿಕ ಮಾತಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಮಂತ್ರಿಯಾದರೆ ನಾವು ನಮ್ಮ ಸಂಘದ ಮಹಿಳೆಯರನ್ನು ಆರ್ಥಿಕ ಮಂತ್ರಿಯನ್ನಾಗಿ ಮಾಡಿದ್ದೇವೆ. ಯೋಜನೆಯಲ್ಲಿ ಶೇ.62 ಮಹಿಳೆಯರು ಇದ್ದರೆ ಶೇ. 38 ಮಂದಿ ಪುರುಷರು ಇದ್ದಾರೆ. ಮಹಿಳೆಯರನ್ನು ಮಾತ್ರವಲ್ಲದೆ ಗಂಡಸರನ್ನೂ ನಂಬಿ ಸಾಲ ಕೊಟ್ಟವರು ನಾವು. ಎಲ್ಲ ಸಂಘಗಳು ಶಿಸ್ತುಬದ್ಧವಾಗಿ ಕೆಲಸ ಮಾಡಿದರೆ ಏನು ಪ್ರಯೋಜನವಾಗುತ್ತದೆ ಅನ್ನುವುದಕ್ಕೆ ಲಾಭಾಂಶ ವಿತರಣೆ ಕಾರ್ಯಕ್ರಮ ಸಾಕ್ಷಿ. ಬ್ಯಾಂಕ್ ನಿಮ್ಮನ್ನು ನಂಬಿ ನಮಗೆ ಸಾಲ ಕೊಟ್ಟಿದೆ. ನಾವು ನಿಮ್ಮನ್ನು ನಂಬಿ ಸಾಲ ಕೊಟ್ಟಿದ್ದೇವೆ. ಹೆಣ್ಮಕ್ಕಳ ಕೈಗೆ ಹಣ ಕೊಟ್ಟಲ್ಲಿ ಹಣದ ಸರಿಯಾದ ಬಳಕೆಯಾಗುತ್ತದೆ. ನೀವು ಗೃಹಲಕ್ಷ್ಮಿಯಾಗಿದ್ದೀರಿ. ನಿಮ್ಮಿಂದ ಸಂಸ್ಥೆಗೆ ಕೀರ್ತಿ ಬಂದಿದೆ ಎಂದರು.ಬಳಿಕ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್‌ನ್ನು ವಿತರಿಸಲಾಯಿತು. ನಬಾರ್ಡ್ ಬ್ಯಾಂಕ್ ಅಧ್ಯಕ್ಷ ಶಾಜಿ ಕೆ.ವಿ. ಮಾತನಾಡಿ, 1992ರಲ್ಲಿ ನಬಾರ್ಡ್ ಪ್ರಾರಂಭಗೊಂಡಿದ್ದು ಅಂದಿನಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜೊತೆಗೂಡಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಈಗ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿ ನಡೆಯುತ್ತಿರುವುದು ಖುಷಿಯ ವಿಚಾರ. ಸಣ್ಣ ಮಧ್ಯಮ ಉದ್ಯಮಗಳಿಗೆ ಸ್ವ-ಸಹಾಯ ಸಂಘಗಳು ಬೆಂಬಲ ನೀಡುತ್ತಿರುವ ಕಾರಣ ಗ್ರಾಮೀಣ ಮಟ್ಟದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. 600 ಕೋಟಿ ರುಪಾಯಿಯಷ್ಟು ದೊಡ್ಡ ಮೊತ್ತ ಲಾಭವನ್ನು ಸ್ವ-ಸಹಾಯ ಸಂಘದ ಸದಸ್ಯರಿಗೆ ಹಂಚುವ ಸಂಘದ ಕ್ರಮ ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಂತಾರಾಮ್ ಆರ್. ಪೈ, ಪ್ರವೀಣ್ ಎಂ.ಸಿ. ಕಾರ್ಯಕ್ರಮ ನಿರೂಪಿಸಿದರು. ಆನಂದ ಸುವರ್ಣ ವಂದಿಸಿದರು. ಕೃತಕ ಬುದ್ಧಿಮತ್ತೆಯನ್ನು ಕೃಷಿಗೆ ಪೂರಕವಾಗಿ ಬಳಸುಕೊಳ್ಳುವತ್ತ ಯೋಚಿಸಬೇಕಾಗಿದೆ. ಧರ್ಮಸ್ಥಳ ಯೋಜನೆಯಿಂದ ಸಂಪೂರ್ಣ ಕರ್ನಾಟಕ ಲಾಭ ಪಡೆದಿದೆ. ಇದರ ಜ್ಞಾನ ಭಾರತಕ್ಕೆ ಲಾಭವಾಗಲಿದೆ
- ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ - ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶಂಕರ ಸಂಘ, ಆನೇಕಲ್ ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ ಹಾಗು ಹಾಸನದ ರೋಶನ್ ಸಂಘದ ಸದಸ್ಯೆಯರು ಲಾಭಾಂಶದ ಚೆಕ್‌ಗಳನ್ನು ಸಚಿವೆಯಿಂದ ಪಡೆದುಕೊಂಡರು. ರಾಜ್ಯದ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರಿಗೆ ತಕ್ಷಣವೇ ಡಿಜಿಟಲ್ ಪೇಮೆಂಟ್ ಮಾಡಲಾಗಿರುವುದನ್ನು ಘೋಷಿಸಲಾಯಿತು.ತಮ್ಮ ಭಾಷಣವನ್ನು ನಮಸ್ಕಾರ ಎಂದು ಹೇಳಿ ಆರಂಭಿಸಿದ ನಿರ್ಮಲಾ ಸೀತಾರಾಮನ್ ಅವರು ಸುಮಾರು 20 ನಿಮಿಷಗಳ ಕಾಲ ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿರುವಾಗ ಸಭೆ ಮೌನವಾಗಿ ಕೇಳಿಸಿಕೊಂಡಿತು.