ಶ್ರೀಕ್ಷೇತ್ರದ ಧರ್ಮಸ್ಥಳ, ಡಿ.ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅಪಪ್ರಚಾರಕ್ಕೆ ಖಂಡನೆ

KannadaprabhaNewsNetwork |  
Published : Aug 24, 2025, 02:00 AM IST
23ಕೆಎಂಎನ್ ಡಿ15 | Kannada Prabha

ಸಾರಾಂಶ

ಸುಳ್ಳು ಆರೋಪಗಳು ಹಾಗೂ ಅಪಪ್ರಚಾರಗಳ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜ ಒಡೆಯುವ ಕೆಲಸ ಮಾಡಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶ್ರೀಕ್ಷೇತ್ರ ಧರ್ಮಸ್ಥಳದ ಹಾಗೂ ಡಿ.ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಧಿಕ್ಕಾರ ಕೂಗುತ್ತಾ ಅನಂತ್ ರಾಂ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕುಂದೂರು ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ ಮಾತನಾಡಿ, ಸುಳ್ಳು ಆರೋಪಗಳು ಹಾಗೂ ಅಪಪ್ರಚಾರಗಳ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜ ಒಡೆಯುವ ಕೆಲಸ ಮಾಡಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳನ್ನು ಕೀಳಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಜನರು ಬೀದಿಗಿಳಿದು ಹೋರಾಟ ನಡೆಸುವ ಮುನ್ನ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಇಂಥ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ ಹಾಗೂ ಕ್ಯಾತನಹಳ್ಳಿ ಅಶೋಕ್ ಮಾತನಾಡಿ, ಹಿಂದೂ ರಾಷ್ಟ್ರವಾಗಿರುವ ಭಾರತದಲ್ಲಿ ಹಿಂದೂ ಧರ್ಮ, ಶ್ರದ್ಧಾ ಕೇಂದ್ರಗಳ ರಕ್ಷಣೆಗೆ ಜನರು ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ಈ ಹಿಂದೆ, ಶಬರಿಮಲೆ, ತಿರುಪತಿ ಈಗ ಧರ್ಮಸ್ಥಳ ಕ್ಷೇತ್ರವನ್ನು ಮತಾಂಧರು ಟಾರ್ಗೆಟ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿರುವ ವೀರೇಂದ್ರ ಹೆಗ್ಗಡೆ ಅವರು ಹಾಗೂ ಗ್ರಾಮಾಭಿವೃದ್ಧಿ ಸಂಸ್ಥೆಯನ್ನು ಮುಗಿಸುವ ಸಂಚು ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಣಕೊಳ ಮಠದ ಸ್ವಾಮೀಜಿ ಮಾತನಾಡಿ, ಹಿಂದೂಗಳ ಶ್ರದ್ಧೆ ಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೂಡಲೇ ನಿಲ್ಲಿಸಬೇಕು. ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕಚೇರಿ ಬಳಿ ಆಗಮಿಸಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಿದ ನಂತರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ಪುರಸಭೆ ಸದಸ್ಯ ಟಿ.ನಂದಕುಮಾರ್ ಹಾಗೂ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಮಾತನಾಡಿದರು. ವಿವಿಧ ಮಠಗಳ ಷಡಕ್ಷರ ಸ್ವಾಮೀಜಿ, ಶಂಭುಲಿಂಗಸ್ವಾಮಿ, ಸಿದ್ಧಗಂಗಾ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯ ರವಿ, ಮುಖಂಡರಾದ ಯಮದೂರು ಸಿದ್ದರಾಜು, ಮಧು ಗಂಗಾಧರ್, ಮೋಹನ್, ಕೆ.ಸಿ.ನಾಗೇಗೌಡ, ಎನ್.ಕೆ.ಕುಮಾರ್, ಎಂ.ಎನ್. ಮಹೇಶ್ ಕುಮಾರ್, ಮೂರ್ತಿ, ಚಿಕ್ಕಮರಿ, ರಾಜೀವ್, ಸುಂದ್ರಪ್ಪ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸ್ಥಿತವಾಗಿ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌
ಉದ್ಯೋಗ ಖಾತ್ರಿ ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರದ ಕ್ರಮಕ್ಕೆ ಶಾಸಕ ಮಾನೆ ಆಕ್ರೋಶ