ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಕೊಡಿಸಿದ ಧರ್ಮಸ್ಥಳ ಸಂಸ್ಥೆ: ಸುರೇಶಗೌಡ ಪಾಟೀಲ

KannadaprabhaNewsNetwork |  
Published : Dec 20, 2024, 12:47 AM IST
ಮ | Kannada Prabha

ಸಾರಾಂಶ

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿತ್ತು. ಪ್ರಾಚೀನ ಕಾಲದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಗೌರವ ಅನುಭವಿಸುತ್ತಿದ್ದರು ಎಂಬುದು ಸ್ಪಷ್ಟ, ಆದರೆ ಮಧ್ಯಯುಗದಲ್ಲಿ ಹುಟ್ಟಿದ ‘ಮಹಿಳಾ ಸಬಲೀಕರಣ’ ಎಂಬ ಪದವು ಮಹಿಳೆ ಸಾಕಷ್ಟು ಶಕ್ತಿಶಾಲಿಯಲ್ಲ ಎಂಬುದನ್ನು ಸೂಚಿಸಲಾರಂಭಿಸಿತು ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

ಬ್ಯಾಡಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಳೆದ ಆರೇಳು ದಶಕಗಳಲ್ಲಿಯೇ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಕೊಡಿಸುವಲ್ಲಿ ಸಫಲವಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಪಟ್ಟಣದ ಬಿಇಎಸ್‌ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜ್ಞಾನ ವಿಕಾಸ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ವೈದಿಕ ಯುಗದಲ್ಲಿ ‘ಸಹಧರ್ಮಿಣಿ’ ಎಂಬ ಪದ ಉಲ್ಲೇಖಿಸಲಾಗಿದೆ. ಆದಾಗ್ಯೂ ಸಂಪ್ರದಾಯವಾದಿ ರಾಷ್ಟ್ರ ಭಾರತದಲ್ಲಿ ಮಹಿಳೆಗೆ ಶಿಕ್ಷಣ, ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ, ಜೀವನದ ಭದ್ರತೆಗಳನ್ನು ಕೊಡಿಸಲು ಸಾವಿರಾರು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದಿವೆ ಎಂದು ಹೇಳಿದರು.ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿತ್ತು. ಸಹಧರ್ಮಿಣಿ ಎಂದರೆ ಸಮಾನ ಪಾಲುದಾರಳು ಎಂದರ್ಥ. ಪ್ರಾಚೀನ ಕಾಲದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಗೌರವ ಅನುಭವಿಸುತ್ತಿದ್ದರು ಎಂಬುದು ಸ್ಪಷ್ಟ, ಆದರೆ ಮಧ್ಯಯುಗದಲ್ಲಿ ಹುಟ್ಟಿದ ‘ಮಹಿಳಾ ಸಬಲೀಕರಣ’ ಎಂಬ ಪದವು ಮಹಿಳೆ ಸಾಕಷ್ಟು ಶಕ್ತಿಶಾಲಿಯಲ್ಲ ಎಂಬುದನ್ನು ಸೂಚಿಸಲಾರಂಭಿಸಿತು. ಹೀಗಾಗಿ ಅವರು ಅನುಭವಿಸುತ್ತಿರುವ ನೋವಿನ ಸತ್ಯವನ್ನು ಹೊರತೆಗೆಯಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಮುಖ್ಯವಾಹಿನಿಗೆ ತಂದ ಎಸ್‌ಡಿಎಂ: ಸಂಪನ್ಮೂಲ ವ್ಯಕ್ತಿ ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿ, ಪುರುಷ ಪ್ರಧಾನ ಸಮಾಜ ಪ್ರಪಂಚದಾದ್ಯಂತ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುತ್ತಾ ಬಂದಿದೆ. ಮಹಿಳೆಯರು ತಮ್ಮ ಮನೆಗಳಿಗೆ ಮಾತ್ರ ಸೀಮಿತರಾಗಿದ್ದರು. ಸಮಯ ಬದಲಾದಂತೆ ಕುಟುಂಬ ನಿರ್ಮಿತ ಅಡೆತಡೆ ದಾಟಲು ಮಹಿಳೆಯರು ಪ್ರಾರಂಭಿಸಿದರು. ಇಂತಹ ವೇಳೆ ಅವರ ನೆರವಿಗೆ ಬಂದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಎಂದರೆ ತಪ್ಪಾಗಲಾರದು ಎಂದರು.

ಇದೊಂದು ಸಂಚಿತ ಪ್ರಜ್ಞೆ: ಪಿಎಸ್‌ಐ ಅರವಿಂದ ಮಾತನಾಡಿ, ಮಹಿಳಾ ಸಬಲೀಕರಣದ ಆರಂಭಕ್ಕೆ ಇತಿಹಾಸದಲ್ಲಿ ನಿಖರವಾದ ವರ್ಷವಿಲ್ಲ. ಆದರೆ ಇದೊಂದು ಸಂಚಿತ ಪ್ರಜ್ಞೆಯಾಗಿದೆ. ಆದಾಗ್ಯೂ ಕ್ರಾಂತಿಗಳು, ಚಳವಳಿಗಳು, ಪ್ರತಿಭಟನೆಗಳು, ಮಹಿಳಾ ಸಬಲೀಕರಣದ ವೇಗವನ್ನು ಹೆಚ್ಚಿಸಿವೆ. ಇದರ ಪರಿಣಾಮ ಮಹಿಳೆಯರು ಇದೀಗ ಅಡೆತಡೆಯಿಲ್ಲದೇ ಶಿಕ್ಷಣ ಮತ್ತು ಉದ್ಯೋಗ ಆನಂದಿಸುತ್ತಿದ್ದಾರೆ ಎಂದರು.

ಮಹಿಳಾ ಸಬಲತೆಗೆ ಸಾಕ್ಷಿ: ಯೋಜನಾಧಿಕಾರಿ ಜಿ. ರಘುಪತಿ ಮಾತನಾಡಿ, ಎಸ್‌ಡಿಎಂ ಸಂಸ್ಥೆ ಪ್ರಚುರಪಡಿಸಿದ ಗುಂಪು ಸಾಲಯೋಜನೆ (ಮಹಿಳೆಯರಿಗೆ) ಅವರಿಗೆ ಆರ್ಥಿಕ ಸ್ವಾತಂತ್ರ್ಯ ಕೊಡಿಸಿದೆಯಲ್ಲದೇ ಅಸಮಾನತೆಯ ಪ್ರಪಾತದಲ್ಲಿ ಬಿದ್ದಿದ್ದ ಮಹಿಳೆಯರನ್ನು ಮೇಲೆತ್ತುವ ಗಮನಾರ್ಹ ಕೆಲಸವನ್ನು ಮಾಡಿದೆ. ಇದರ ಪರಿಣಾಮ ಯೋಜನೆಯಡಿ ಬರುವ ಮಹಿಳೆಯರು ಇಂದಲ್ಲ ನಾಳೆ ಪ್ರಪಂಚದಲ್ಲಿಯೇ ಮಹಿಳಾ ಸಬಲತೆಗೆ ಸಾಕ್ಷಿಯಾದರೂ ಆಶ್ಚರ್ಯವಿಲ್ಲ ಎಂದರು.

ಮುಖ್ಯಶಿಕ್ಷಕಿ ಎಸ್.ಬಿ. ಸವಕ್ಕನವರ, ಮೇಲ್ವಿಚಾರಕಿ ಶೀತಲ್ ಬೇಕಲ್, ಕೃಷಿ ಅಧಿಕಾರಿ, ವಿಚಕ್ಷಣಾಧಿಕಾರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ