ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಬಾಗೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಘಗಳ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬಿದ್ದಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್. ಶಿವಣ್ಣ ಹೇಳಿದರು. ಹೋಬಳಿ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಯೋಜನಾ ಕಚೇರಿ ವತಿಯಿಂದ ಹೋಬಳಿ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಜನೆ ವತಿಯಿಂದ ಕೆರೆಗಳ ಪುನಶ್ಚೇತನಕ್ಕಾಗಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯಕ್ರಮ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಜನಸ್ನೇಹಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ನೆರವಾಗಿದ್ದಾರೆ ಎಂದರು. ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಂಗ ಮಾತನಾಡಿ, ಪರಮಪೂಜ್ಯ ಡಾ. ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಹೈನೋಧ್ಯಮದ ಬೆಳವಣಿಗೆಗಾಗಿ ಡೈರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಮತ್ತು ದೇವಾಲಯ ಜೀರ್ಣೋದ್ಧಾರಕ್ಕೆ ಹೆಚ್ಚಿನ ಆರ್ಥಿಕ ನೆರವು ಸೇರಿದಂತೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಶ್ರವಣಬೆಳಗೊಳ ಯೋಜನಾಧಿಕಾರಿ ಸದಾಶಿವ ಕುಲಾಲ್ ಮಾತನಾಡಿದರು. ಹೋಬಳಿ ಮೇಲ್ವಿಚಾರಕ ಸುರೇಶ್ ಗೌಡ, ಪ್ರತಿನಿಧಿ ಮಂಜುಳಾ ಪ್ರದೀಪ್, ನಂಜುಂಡಿ, ನಂದಿನಿ, ನಳಿನಾ , ರಾಜಕುಮಾರ್, ಶಶಿಕಲಾ, ಶುಭ, ಪವಿತ್ರ, ಹೋಬಳಿ ಅರ್ಚಕರ ಸಂಘದ ಅಧ್ಯಕ್ಷ ವೆಂಕಟರಾಮಯ್ಯ, ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.