ಬೆಳ್ತಂಗಡಿ: ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರ ವ್ಯವಸ್ಥಾಪಕತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನ.21 ಗುರುವಾರದಿಂದ ಪ್ರಸಕ್ತ ಸಾಲಿನ ತಿರುಗಾಟವನ್ನು ಆರಂಭಿಸಲಿದೆ.
ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಇತಿಹಾಸವಿರುವ ಯಕ್ಷಗಾನ ಮೇಳದಲ್ಲಿ ಪ್ರಸ್ತುತ ಕಾಲಮಿತಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಕಾಲಮಿತಿ ಪ್ರದರ್ಶನಗಳಿಗೆ ಪ್ರೇಕ್ಷಕರಿಂದ, ಸೇವಾಕರ್ತರಿಂದ ಉತ್ತಮ ಪ್ರಶಂಸೆಗಳು ಬಂದಿವೆ. ಯಕ್ಷಗಾನ ಕಾಲಮಿತಿ ಪ್ರದರ್ಶನವು ಸಮಾಜದ ಎಲ್ಲ ವರ್ಗದವರನ್ನು, ಎಲ್ಲ ವಯಸ್ಸಿನವರನ್ನು ಮತ್ತು ಯಕ್ಷಗಾನ ಪ್ರೇಮಿಗಳನ್ನು ಆಕರ್ಷಿಸುತ್ತಿವೆ.ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬರುವ ಕೆಲವು ಸನ್ನಿವೇಶಗಳಲ್ಲಿದ್ದ ಪ್ರಾತಿನಿಧಿಕ ವರ್ಣ- ವರ್ಗಗಳ ಕಥೆಯನ್ನು ಬಿಟ್ಟು, ಪ್ರಸ್ತುತ ವಿದ್ಯಮಾನಕ್ಕೆ ಹೊಂದಿಕೆಯಾಗುವಂತೆ ಅದೇ ಗುಣ ಸ್ವಭಾವದ ಕಥೆಗಳ ಬದಲಾವಣೆ ತರಲಾಗಿದೆ.
ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಹಾಡುಗಾರಿಕೆಯಲ್ಲಿ, ಚಂದ್ರಶೇಖರ ಸರಪಾಡಿ, ಹಿರಣ್ಮಯ ಹಿರಿಯಡ್ಕ, ಬೆಳಾಲು ಗಣೇಶ್ ಭಟ್ ಚೆಂಡೆ- ಮೃದಂಗದಲ್ಲಿ, ಪಿ.ಟಿ. ಪ್ರಸಾದ ಕುಕ್ಕಾವು ಸಂಗೀತದಲ್ಲಿ, ಜಗದೀಶ್ ಆಚಾರ್ಯ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.ಮಹೇಶ್ ಮಣಿಯಾಣಿ ದೊಡ್ಡತೋಟ ವಿದೂಷಕನಾಗಿ, ಮುರಳೀಧರ ಕನ್ನಡಿಕಟ್ಟೆ, ಶರತ್ ಶೆಟ್ಟಿ ತೀರ್ಥಹಳ್ಳಿ ಕುಮಾರಸ್ವಾಮಿ, ಸಚಿನ್ ಬೆಳ್ಳೂರು ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಚಿದಂಬರ ಬಾಬು ಕೋಣಂದೂರು, ವಸಂತ ಗೌಡ ಕಾರ್ಯತಡ್ಕ, ಶಂಭಯ್ಯ ಕಂಜರ್ಪಣೆ, ಚಂದ್ರಶೇಖರ ಧರ್ಮಸ್ಥಳ, ಹರೀಶ್ ಶೆಟ್ಟಿ ಮಣ್ಣಾಪು, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಮಂಜುನಾಥ ರೈ ಪೆರ್ಲ, ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಗೌತಮ್ ಶೆಟ್ಟಿ ಬೆಳ್ಳಾರೆ, ಚರಣ್ ಗೌಡ ಕಾಣಿಯೂರು, ಸುನಿಲ್ ಪದ್ಮುಂಜ, ಅಶೋಕ್, ಮಧುಸೂದನ್ ಹಾಗೂ ನಿತಿನ್ ಕಲಾವಿದರಾಗಿದ್ದಾರೆ ಎಂದು ಮೇಳದ ವ್ಯವಸ್ಥಾಪಕ ಬಿ.ಎನ್. ಗಿರೀಶ್ ಹೆಗ್ಡೆ ಹಾಗೂ ಪುಷ್ಪರಾಜ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.