ಮಂಗಳೂರು : ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಹೊರವಲಯದ ಕೋಟೆಕಾರು ಸಹಕಾರಿ ಬ್ಯಾಂಕ್‌ನಿಂದ 12 ಕೋಟಿ ರು. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣವನ್ನು ಕೇವಲ ನಾಲ್ಕೇ ದಿನದಲ್ಲಿ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈನ ಡೆಡ್ಲಿ ಧಾರಾವಿ ಗ್ಯಾಂಗ್ ಸೇರಿದ ಮೂವರು ಆರೋಪಿಗಳನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಿರುವ ಪೊಲೀಸರು, ಬಂಧಿತರಿಂದ ಫಿಯೆಟ್ ಕಾರು, ಎರಡು ಗೋಣಿಚೀಲದಲ್ಲಿದ್ದ ಚಿನ್ನ, ತಲ್ವಾರ್, 2 ಪಿಸ್ತೂಲ್ ಹಾಗೂ ಇತರ ಸ್ವತ್ತು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ಪ್ರಕರಣದ ಕಿಂಗ್‌ಪಿನ್ ಮುರುಗಂಡಿ ತೇವರ್(36), ರಾಜೇಂದ್ರನ್ (35) ಹಾಗೂ ಕಣ್ಣನ್ ಮಣಿ (36) ಎಂದು ಗುರುತಿಸಲಾಗಿದೆ.
ದರೋಡೆಗಾಗಿ ಬಂದಿದ್ದರು:
ದರೋಡೆಗೆಂದೇ ಮಂಗಳೂರಿಗೆ ಬಂದಿದ್ದ ಆರೋಪಿಗಳು, ದರೋಡೆ ನಂತರ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಪರಾರಿಯಾಗಲು ಮಹಾರಾಷ್ಟ್ರ ಮೂಲದ ಫಿಯೆಟ್ ಕಾರು ಬಳಸಿದ್ದರು. ಆರೋಪಿ ಮುರುಗಂಡಿ ಕಾರನ್ನು ತಿರುವನ್ವೇಲಿವರೆಗೆ ತೆಗೆದುಕೊಂಡು ಹೋಗಿದ್ದನು. ಗುಪ್ತಚರ ಇಲಾಖೆ ನೆರವಿನಿಂದ ಈ ಪ್ರಕರಣ ಬೇಧಿಸಲು ಸಾಧ್ಯವಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.ಸ್ಥಳೀಯರ ನೆರವು:
ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಏನಾಗಿತ್ತು?:
ಜ.17ರಂದು ಮಧ್ಯಾಹ್ನ ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಕೋಟೆಕಾರು ಸಹಕಾರಿ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿತ್ತು. ಅಂದಾಜು 4 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆಯಾಗಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿದ ಅಧಿಕೃತ ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಮರುದಿನ ಮಹಜರ್ ನಡೆಸಿದ ತರುವಾಯ ಬ್ಯಾಂಕ್ ಅಧ್ಯಕ್ಷರು 12 ಕೋಟಿ ರು.ಗೂ ಅಧಿಕ ಮೌಲ್ಯದ ಚನ್ನಾಭರಣ ಹಾಗೂ ನಗದು ದರೋಡೆಯಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.