ಕನ್ನಡಪ್ರಭ ವಾರ್ತೆ ಮಂಗಳೂರುಸದಾ ಉಲ್ಲಾಸದಿಂದಿದ್ದ ಉತ್ಕೃಷ್ಟ ಭಾಗವತರಾಗಿ ಸಜ್ಜನಿಕೆಯಿಂದ ಸುಬ್ರಹ್ಮಣ್ಯ ಧಾರೇಶ್ವರರು ತನ್ನದೇ ಹಾದಿಯಲ್ಲಿ ಪ್ರಸಿದ್ದರಾದವರು. ಅವರ ಅಕಾಲಿಕ ನಿಧನ ಸಮಗ್ರ ಗಾನ ಲೋಕಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ ಎಂದು ಪ್ರಸಿದ್ದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಹೇಳಿದರು.
ಅನೇಕ ಹೊಸ ಪ್ರಸಂಗಗಳಿಗೆ ಜೀವ ತುಂಬಿ ಮೆರೆಸಿದ ಪ್ರಯೋಗ ಶೀಲರೂ ಆಗಿದ್ದ ದಿವಂಗತ ಧಾರೇಶ್ವರರು ಓರ್ವ ಅಪೂರ್ವ ಭಾಗವತರು ಎಂದು ಅವರು ಸ್ಮರಿಸಿದರು.
ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಾ, ದಿವಂಗತ ಕಾಳಿಂಗ ನಾವಡರ ನಿಧನದ ಬಳಿಕ ಅಷ್ಟೇ ಯೋಗ್ಯತೆಯ ಕಲಾವಿದನಾಗಿ ಬಡಗು ತಿಟ್ಟಿನಲ್ಲಿ ಹೆಸರು ಗಳಿಸಿದ ಭಾಗವತರ ಸಾಲಿನಲ್ಲಿ ಧಾರೇಶ್ವರರು ಅಗ್ರಗಣ್ಯರೆನಿಸುತ್ತಾರೆ ಎಂದರು.ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ಶತಮಾನದ ಧ್ವನಿಯಾಗಿ ಕಾಣಿಸಿಕೊಂಡ ಬೆರಳೆಣಿಕೆಯ ಭಾಗವತರರ ಪೈಕಿ ಧಾರೇಶ್ವರರು ಪ್ರಮುಖರು ಎಂದರು.
ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು, ಯಕ್ಷಗಾನ ಕಲಾವಿದ ಸಂಜಯ ಕುಮಾರ ಶೆಟ್ಟಿ ಗೋಣಿಬೀಡು, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಯಕ್ಷಗುರು ಅಶೋಕ್ ಬೋಳೂರು,ರವಿ ಅಲೆವೂರಾಯ, ಶಿವಪ್ರಸಾದ್ ಪ್ರಭು, ಮಧುಸೂದನ ಅಲೆವೂರಾಯ, ಪೂರ್ಣಿಮಾ ರಾವ್ ಪೇಜಾವರ, ಜೂ.ರಾಜ್ ಕುಮಾರ್ ಜಗದೀಶ್ ಶಿವಪುರ, ಎಡ್ವರ್ಡ್ ಲೋಬೊ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.