- ಚಿಕ್ಕಮಗಳೂರಿನ ಸಂತ ಅಂದ್ರೇಯ ಚರ್ಚ್‌ನಲ್ಲಿ ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದುರ್ಬಲರ, ದೀನ ದಲಿತರ ಕರುಣೆಯಿಂದ ಕಂಡು ಮಾತೃ ಪ್ರೇಮ ತೋರಿಸಿ ಅವರನ್ನು ಸಂತೈಸುವುದೇ ಧರ್ಮ ಎಂದು ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ನಗರದ ಬೇಲೂರು ರಸ್ತೆಯ ಸಂತ ಅಂದ್ರೇಯ ಚರ್ಚ್‌ನಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋರಂ ಫಾರ್ ಹ್ಯೂಮನ್ ರೈಟ್ಸ್ ನಿಂದ ಏರ್ಪಡಿಸಲಾಗಿದ್ದ ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವು ಧರ್ಮಗಳ ಸಾರ ಒಂದೇ. ಬಡವರನ್ನು ಎತ್ತಿ ಸಂತೈಸುವುದು ಧರ್ಮವಾಗಿದ್ದು, ಬೀಳುವವರನ್ನು ತಡೆದು ನಿಲ್ಲಿಸುವುದೇ ಧರ್ಮ ಎಂದು ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಸೇರಿಸಿ ಸೌಹಾರ್ಧ ಕ್ರಿಸ್‌ಮಸ್ ಆಚರಣೆ ಈ ಸಂದರ್ಭದಲ್ಲಿ ಏಸು ಕ್ರಿಸ್ತನ ಸಂದೇಶ ಗಳನ್ನು ಸಾರುವ ಕೆಲಸ ಅತ್ಯಂತ ಸ್ತುತ್ಯಾರ್ಹ ಹಾಗೂ ಗೌರವ ಎಂಬ ಭಾವನೆ ಮೂಡುತ್ತದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜೀವನದಲ್ಲಿ ಆನಂದವಾಗಿರ ಬೇಕಾದರೆ ಆ ಗ್ರಾಮದಲ್ಲಿ ಶಾಂತಿ, ಸೌಹಾರ್ಧತೆ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಸಾರ್ವಜನಿಕರ ಬದುಕಿಗೆ ದಾರಿ ದೀಪವಾಗುತ್ತದೆ ಎಂದರು.ಇಲ್ಲಿ ಸೇರಿರುವ ಧರ್ಮಾಭಿಮಾನಿಗಳು ಅವರವರ ಧರ್ಮವನ್ನು ಪ್ರೀತಿಸಿ, ಮಾನವ ಕುಲ ಒಂದೇ ಎಂದು ಭಾವಿಸಿ ಶಾಂತಿ ಸೌಹಾರ್ಧತೆ ಕಾಪಾಡುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸೌಹಾರ್ಧ ಎಂಬುದು ಬಹಳ ಅರ್ಥಗರ್ಭಿತವಾಗಿದೆ, ಇಂದು ನಾವು ಸಾಮರಸ್ಯ ಮರೆತಿದ್ದೇವೆ, ಸ್ವಾರ್ಥದ ಬದುಕಿನಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ವಿಷಾಧಿಸಿದ ಅವರು, ದೇವರು ಎಲ್ಲಾ ಧರ್ಮದವರನ್ನು ಪ್ರೀತಿಸಿದಂತೆ ನಾವು ಅನ್ಯ ಧರ್ಮದವರನ್ನು ಪ್ರೀತಿಸಿದಾಗ ಮಾತ್ರ ಶಾಂತಿ, ಸಾಮರಸ್ಯ, ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಎಲ್ಲಾ ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಈ ಸೌಹಾರ್ಧ ಕಾರ್ಯಕ್ರಮ ಕ್ರಿಸ್‌ಮಸ್ ಪೂರ್ವ ಆಚರಣೆಗೆ ಅರ್ಥ ಬರುತ್ತದೆ ಎಂದು ಶ್ಲಾಘಿಸಿದರು.
ಯುವಕರಲ್ಲಿ ಗುರು ಹಿರಿಯರ ಬಗ್ಗೆ ಗೌರವ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಕಣ್ಣು ತೆರೆಸುವಂತಾಗಲಿ ಎಂದು ಹಾರೈಸಿದರು.ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಈ ಬಾರಿ ದತ್ತಜಯಂತಿ ಮತ್ತು ಕ್ರಿಸ್‌ಮಸ್ ಆಚರಣೆ ಒಟ್ಟಿಗೆ ಬಂದಿರುವುದು ಒಂದು ರೀತಿ ಸೌಹಾರ್ಧವೇ. ಏಸುಕ್ರಿಸ್ತ ಹುಟ್ಟಿದ ದಿನವೇ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನಿಸಿದ್ದರು. ಈ ನಿಟ್ಟಿನಲ್ಲಿ ಸೌಹಾರ್ಧ ಬೆಸೆದುಕೊಂಡು ಬಂದಿದೆ ಎಂದು ಹೇಳಿದರು.
ಭಗವಂತನನ್ನು ಕಾಣಲು ಹಲವು ಮಾರ್ಗಗಳಿವೆ. ಎಲ್ಲರ ದಾರಿ ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ. ಜಗತ್ತಿನಲ್ಲಿ ಸರ್ವಶ್ರೇಷ್ಠನಾದ ಭಗವಂತನೇ ಆಗಿದ್ದು, ಆದರೆ ನಾವು ಬೇರೆ ಬೇರೆ ಹೆಸರಿನಲ್ಲಿ ಪೂಜಿಸುತ್ತಿದ್ದೇವೆ. ಏಕತೆಯ ಸೂತ್ರದ ಮೂಲಕ ನಾವೆಲ್ಲಾ ಒಂದಾಗಿ ಹೋಗೋಣ. ಏಸುಕ್ರಿಸ್ತ ಜಗತ್ ಹಿತ ಸೇವೆ ಮೂಲಕ ನನ್ನನ್ನು ತಲುಪಿ ಎಂದು ಹೇಳಿದ್ದಾರೆ. ಸೇವೇಯೇ ಧರ್ಮವಾಗಲಿ, ಆ ಮೂಲಕ ನಾವು ಭಗವಂತನ ಸಾಕ್ಷಾತ್ಕರಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.ಕ್ರೈಸ್ತ ಸಮುದಾಯದ ಮುಖಂಡ ಜೇಮ್ಸ್ ಡಿಸೋಜ ಮಾತನಾಡಿ, ಕ್ರೈಸ್ತ ಸಮುದಾಯಕ್ಕೆ ಸೇರಿದ ಅನೇಕ ಪಂಗಡಗಳು ಒಟ್ಟುಗೂಡಿಸಿಕೊಂಡು ಹೋಗಲು ನಮ್ಮ ಸಮುದಾಯದ ಕ್ರೈಸ್ತರ ಐಕ್ಯತಾ ವೇದಿಕೆ ಸ್ಥಾಪನೆ ಮಾಡಲಾಗಿದೆ. ಶಾಂತಿ ಮತ್ತು ಐಕ್ಯತೆ ಸಾಮರಸ್ಯಕ್ಕೆ ಹಿಂದುಳಿದ ಚಿಕ್ಕ ಚಿಕ್ಕ ಸಮುದಾಯಗಳು, ಅಲ್ಪಸಂಖ್ಯಾತರು ಒಗ್ಗೂಡಬೇಕೆಂಬ ಉದ್ದೇಶ ದಿಂದ ಈ ವೇದಿಕೆ ಸ್ಥಾಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಅಂತೋಣಿಸ್ವಾಮಿ, ಕೆ.ಕೆ. ವರ್ಗೀಸ್, ವಿನೋದ್‌ಕುಮಾರ್, ಹೇಮಚಂದ್ರಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮ್ಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲ ಕೃಷ್ಣ ಉಪಸ್ಥಿತರಿದ್ದರು.21 ಕೆಸಿಕೆಎಂ 4
ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸಂತ ಅಂದ್ರೇಯ ಚರ್ಚ್‌ನಲ್ಲಿ ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮ ನಡೆಯಿತು. ಡಾ. ಅಂತೋಣಿಸ್ವಾಮಿ, ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಇದ್ದರು.