ಸಂತೋಷ ದೈವಜ್ಞ ಮುಂಡಗೋಡ
ಸುಮಾರು ೨೭ ಸಾವಿರ ಎಕರೆ ಭೂಪ್ರದೇಶಕ್ಕೆ ನೀರುಣಿಸುವ, ಹಾನಗಲ್ ತಾಲೂಕಿನ ರೈತರ ಜೀವನಾಡಿಯಾಗಿರುವ ತಾಲೂಕಿನ ಮಳಗಿಯ ಧರ್ಮಾ ಜಲಾಶಯವೀಗ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾದ ತಾಲೂಕಿನ ಮೊದಲ ಜಲಾಶಯ ಇದಾಗಿದ್ದು, ಹಿಂದೆಲ್ಲ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿದ್ದ ಈ ಜಲಾಶಯ ಈ ಬಾರಿ ಜುಲೈ ಮೊದಲ ವಾರದಲ್ಲಿಯೇ ಭರ್ತಿಯಾಗಿ ಅಚ್ಚರಿ ಮೂಡಿಸಿರುವುದು ಒಂದು ಕಡೆಯಾದರೆ, ಇಷ್ಟು ಬೇಗ ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಿಸಿದೆ.
ಯಮಗಳ್ಳಿ, ಕ್ಯಾದಗಿಕೊಪ್ಪ ಗ್ರಾಮದ ನೂರಾರು ಎಕರೆ ಭೂಪ್ರದೇಶ ಮುಳುಗಡೆಗೊಳಿಸುವ ಮೂಲಕ ೧೯೬೫ ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿರುವ ಸುಮಾರು ೧೬೦೦ ಎಕರೆ ಪ್ರದೇಶ ವಿಸ್ತಿರ್ಣವುಳ್ಳ ೨೯ ಅಡಿ ಆಳ. ೭೭ ಟಿಎಂಸಿ (೮೫೦೦) ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯವುಳ್ಳ ಧರ್ಮಾ ಜಲಾಶಯ ನಿರ್ಮಾಣಕ್ಕಾಗಿ ಸುತ್ತಮುತ್ತಲಿನ ನೂರಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂಬುವುದು ಬಿಟ್ಟರೆ ಸ್ಥಳೀಯರಿಗೆ ಬೇರೆ ಯಾವುದೇ ರೀತಿ ಅನುಕೂಲವಿಲ್ಲದಂತಾಗಿದೆ.ಹಾನಗಲ್ ತಾಲೂಕಿನ ರೈತರಲ್ಲಿ ಹರ್ಷ: ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಇದರ ಸಂಪೂರ್ಣ ಉಪಯೋಗ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿಗೆ ಆಗುತ್ತಿದೆ. ಅಲ್ಲಿನ ೯೬ ಕೆರೆಗಳು ಈ ಡ್ಯಾಮ್ ವ್ಯಾಪ್ತಿಗೆ ಬರುತ್ತವೆ. ಅಲ್ಲದೇ ಸುಮಾರು ೨೭ ಸಾವಿರ ಎಕರೆ ಭೂಪ್ರದೇಶಕ್ಕೆ ಈ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಆದರೆ ಜಲಾಶಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ರೈತರ ಸುತ್ತಮುತ್ತವಿರುವ ಕೇವಲ ೧೮೦ ಎಕರೆ ಭೂಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಯದಿರುವುದು ವಿಪರ್ಯಾಸವೇ ಸರಿ. ಸ್ಥಳೀಯ ರೈತರಿಗೆ ಸಂಪೂರ್ಣ ಅನ್ಯಾಯವಾಗುತ್ತಿರುವುದಂತೂ ಸುಳ್ಳಲ್ಲ. ತಾಲೂಕಿನ ಜನತೆಗೆ ಧರ್ಮಾ ಜಲಾಶಯ ಹಿತ್ತಲ ಗಿಡ ಮದ್ದಲ್ಲ ಎಂಬಂತಹ ಭಾವನೆ ಮೂಡಿದೆ.`
ಅಧಿಕಾರಿಗಳ ನಿರ್ಲಕ್ಷ್ಯ: ಜಲಾಶಯದ ಸುತ್ತ ರಮಣೀಯ ವಾತಾವರಣದಿಂದ ಕೂಡಿದೆ. ಪ್ರವಾಸಿ ತಾಣ ನಿರ್ಮಾಣ ಮಾಡಲು ಉತ್ತಮ ಅವಕಾಶವಿದ್ದರೂ ಕೂಡ ಇಂದಿಗೂ ಯಾವುದೇ ರೀತಿ ಪ್ರಯತ್ನ ಮಾಡದ ಅಧಿಕಾರಿಗಳು ನೀರು ಬಿಡುವುದು ಬಂದ್ ಮಾಡುವುದೊಂದು ಬಿಟ್ಟರೆ ಈ ಜಲಾಶಯದ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುವುದಿಲ್ಲ ಎಂಬುವುದು ರೈತರ ಅಂಬೋಣ.ಪ್ರವಾಸಿ ತಾಣ ನಿರ್ಮಾಣ ಮಾಡುವ ಉದ್ದೇಶದಿಂದ ಜಲಾಶಯದ ಸುತ್ತ ಹತ್ತಾರು ಎಕರೆ ಭೂಮಿ ಇತ್ತು. ಆದರೆ ಸದ್ಯ ಇಲ್ಲಿ ಗಮನಿಸುವುದಾದರೆ ಯಾವುದೇ ರೀತಿ ಹೆಚ್ಚುವರಿ ಭೂಮಿ ಕಾಣಿಸುತ್ತಿಲ್ಲ. ಜಲಾಶಯಕ್ಕೆ ಸಂಬಂಧಿಸಿದ ಭೂಮಿ ಕೂಡ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ.
ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಾಶಯಕ್ಕೆ ಬರುತ್ತಾರೆ. ಆದರೆ ಪ್ರವಾಸಿಗರಿಗೆ ಯಾವುದೇ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ.