ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಳೆದ ತಿಂಗಳ ಇವರು ಭದ್ರಗಿರಿ ಬೆಟ್ಟದ 108 ಆಚಾರ್ಯ ಕುಲರತ್ನಭೂಷಣ ಮಹಾರಾಜರಿಂದ ನಿಯಮ ಸಲ್ಲೇಖನ ಸ್ವೀಕರಿಸಿದ್ದರು. ಜೀವದ ಅಂತಿಮ ಘಟ್ಟ ಸಮೀಪಿಸುತ್ತಿದ್ದಂತೆ ಶುಕ್ರವಾರ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. 108 ಆಚಾರ್ಯ ಕುಲರತ್ನಭೂಷಣ ಮಹಾರಾಜರ ಶಿಷ್ಯರಾದ ಶಾಂತಿಧರ್ಮ ಭೂಷಣ ಮಹಾರಾಜರಿಗೆ ಶುಕ್ರವಾರ ಯಮಸಲ್ಲೇಖನ ವ್ರತ ನೀಡಲಾಗಿತ್ತು. ಶುಕ್ರವಾರ ಸಂಜೆ ಶಾಂತಿಧರ್ಮ ಭೂಷಣ ಮಹಾರಾಜರ ಸಮಾಧಿಯ ಅಂತಿಮ ಘಟ್ಟ ಸಮೀಪಿಸಿದ್ದು, ಎರಡು ದಿನಗಳಲ್ಲಿ ಸಮಾಧಿಸ್ಥರಾಗುವ ನಿರೀಕ್ಷೆ ಇತ್ತು. ತಿಂಗಳ ಹಿಂದೆ ಸಲ್ಲೇಖನ ವ್ರತದ ಬಳಿಕ ಆರೋಗ್ಯದಲ್ಲಿ ತುಂಬಾ ಏರುಪೇರಾಗಿತ್ತು. ಅವರಿಗೆ ನಿರಂತರವಾಗಿ ಣಮೋಕಾರ ಮಹಾಮಂತ್ರ ಜಪಮಾಡಿಸಲಾಗುತ್ತಿತ್ತು.
ಪ್ರ‍್ರತಿಯೊಬ್ಬರ ಮೇಲಿನ ಆಸಕ್ತಿ ತೊರೆದು, ಪೂರ್ಣ ಧ್ಯಾನಸ್ಥ ಹಾಗೂ ಶಾಂತ ಚಿತ್ತದಿಂದ ಇರುವವರನ್ನು ಮಾತ್ರ ಗುರುತಿಸಿ ಸಲ್ಲೇಖನ ವೃತ ನೀಡಲಾಗುತ್ತದೆ. ಹೀಗೆ ಅನೇಕರು ಸಲ್ಲೇಖನ ವೃತ ಬೇಕೆಂದು ಜೈನಧರ್ಮಿಯರು ಬರುತ್ತಾರೆ. ಆದರೆ ಎಲ್ಲರಿಗೂ ಈ ವ್ರತವನ್ನು ನಾವು ನೀಡುವುದಿಲ್ಲ ಎಂದು ಆಚಾರ್ಯರು ತಿಳಿಸಿದರು.ಯಮ ಸಲ್ಲೇಖನ ವ್ರತವು ಜೈನ ಧರ್ಮದಲ್ಲಿ ಆಚರಿಸಲ್ಪಡುವ ಅತ್ಯಂತ ಕಠಿಣವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಾಗಿದೆ. ವೃದ್ಧಾಪ್ಯ, ತೀವ್ರ ಕಾಯಿಲೆ ಅಥವಾ ಉಪಸರ್ಗಗಳು ಎದುರಾದಾಗ, ಮೋಕ್ಷದ ಹಾದಿಯಲ್ಲಿ ಶಾಂತಿಯುತವಾಗಿ ಮತ್ತು ಇಚ್ಛಾಪೂರ್ವಕವಾಗಿ ದೇಹವನ್ನು ತ್ಯಜಿಸಲು ಸಲ್ಲೇಖನ ವ್ರತವನ್ನು ಕೈಗೊಳ್ಳಲಾಗುತ್ತದೆ ಎಂದು ಕುಲರತ್ನ ಭೂಷಣ ಮಹಾರಾಜರು ತಿಳಿಸಿದರು.
ಜೀವನದ ಅಂತಿಮ ಘಟ್ಟದಲ್ಲಿರುವಾಗಲೇ ಶಾಂತಿಧರ್ಮ ಭೂಷಣ ಮಹಾರಾಜರ ದರ್ಶನಕ್ಕೆ ಹಾಗೂ ಜರುಗುವ ಅನೇಕ ಧಾರ್ಮಿಕ ಕ್ರೀಯೆಗಳಲ್ಲಿ ಪಾಲ್ಗೊಂಡು ಪುನೀತರಾಗಲು ಸಾವಿರಾರು ಜನ ಸಾಗರೋಪಾದಿಯಲ್ಲಿ ಜೈನಕಾಶಿ ಭದ್ರಗಿರಿಗೆ ಆಗಮಿಸುತ್ತಿದ್ದರು. ಶನಿವಾರ ಬೆಳಗಿನ 5.26ಕ್ಕೆ ಜಿನ ಸಾಮಿಪ್ಯದ ಅಂತಿಮ ಘಟ್ಟ ತಲುಪಿದರು.