ಕನ್ನಡಪ್ರಭ ವಾರ್ತೆ ವಿಜಯಪುರ
ಮಕರ ಸಂಕ್ರಮಣ ನಿಮಿತ್ತ ಜ.12 ರಿಂದ 18ರವರಗೆ ನಡೆಯುವ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರಿಗೆ ಮಳಿಗೆ ಹಾಕಲು ಹಾಗೂ ವ್ಯಾಪಾರ-ವಹಿವಾಟು ಮಾಡಲು ಅವಕಾಶ ಕಲ್ಪಿಸಬಾರದು ಎಂದು ಹಿಂದುಪರ ಸಂಘಟನೆಗಳು ಸಿದ್ದೇಶ್ವರ ದೇವಸ್ಥಾನ ಎದುರು ಅಳವಡಿಸಿದ್ದ ಬ್ಯಾನರ್ ಅನ್ನು ಶ್ರೀ ಸಿದ್ದೇಶ್ವರ ಸಂಸ್ಥೆಯವರು ಭಾನುವಾರ ತೆರವುಗೊಳಿಸಲು ಮುಂದಾದಾಗ ಹಿಂದುಪರ ಸಂಘಟನೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರೆಯಲ್ಲಿ ಹಿಂದುಯೇತರರಿಗೆ ಮಳಿಗೆ ಹಾಕಲು ಹಾಗೂ ಯಾವುದೇ ರೀತಿಯ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಬಾರದೆಂದು ಹಿಂದು ಸಂಘಟನೆಗಳ ಒಕ್ಕೂಟದಿಂದ ಶ್ರೀ ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ)ಗೆ ಹಾಗೂ ಸಂಸ್ಥೆಗೆ ಮನವಿ ಮಾಡಿಕೊಂಡಿತ್ತು. ಅಲ್ಲದೆ ದೇವಸ್ಥಾನ ಎದುರಿಗೆ ಮತಾಂಧರಿಗೆ, ಗೋವು ಹಂತಕರಿಗೆ, ಲವ್ ಜಿಹಾದ್ ಮಾಡುವವರಿಗೆ ಜಾತ್ರೆಯಲ್ಲಿ ಅವಕಾಶ ಇಲ್ಲ ಎಂಬ ಬರಹದ ಬೃಹತ್ ಬ್ಯಾನರ್ ಅಳವಡಿಸಿದ್ದರು.
ಭಾನುವಾರ ದೇವಸ್ಥಾನ ಆಡಳಿತ ಮಂಡಳಿಯವರು ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಇದಕ್ಕೆ ಹಿಂದು ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಹಿಂದು ಸಂಘಟನೆ ಮುಖಂಡರು ಹಾಗೂ ಸಂಸ್ಥೆ ಪದಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು.ಶ್ರೀ ಸಿದ್ದೇಶ್ವರ ಸಂಸ್ಥೆ ಹಿಂದುಗಳ ಧಾರ್ಮಿಕ ಸಂಸ್ಥೆಯಾಗಿದ್ದು, ಅದರ ಅಧ್ಯಕ್ಷರೂ ಕೂಡ ಪ್ರಖರ ಹಿಂದುತ್ವವಾದಿಯಾಗಿದ್ದಾರೆ. ಆದರೆ ಹಿಂದು ಸಂಘಟನೆಗಳ ಬ್ಯಾನರ್ ಕಿತ್ತುಹಾಕುತ್ತಿರುವ ಉದ್ದೇಶವೇನು ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹಿಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಹಿಂದು ಸಂಘಟನೆಗಳ ಭಾವನೆಗೆ ಬೆಲೆ ಕೊಡದ ಯಾರೇ ಪದಾಧಿಕಾರಿಗಳಾಗಿರಲಿ ಅವರನ್ನು ಸಿದ್ದೇಶ್ವರ ಸಂಸ್ಥೆಯಲ್ಲಿ ಇರಲು ಅವಕಾಶ ಕೊಡಬೇಡಿ. ಅಂತವರನ್ನು ಸಂಸ್ಥೆಯಿಂದ ತೆಗೆದು ಹಾಕಬೇಕು ಎಂದು ಶ್ರೀರಾಮ ಸೇನೆ ಪ್ರಮುಖ ನೀಲಕಂಠ ಕಂದಗಲ್ , ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸಿದ್ಧು ಹೂಗಾರ, ಭಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ ಹಿರೇಮಠ, ಹಿಂದು ಜಾಗರಣ ವೇದಿಕೆಯ ವಿ.ಎನ್. ಪಾಟೀಲ, ನೀಲಕಂಠ ವಾಲೀಕಾರ, ಹಿಂದು ಜನಜಾಗೃತಿ ಸಮಿತಿ ಅಜೀತ್‌ಕುಮಾರ ವಠಾರ, ಯುವ ಬ್ರಿಗೇಡ್ ಅಧ್ಯಕ್ಷ ರಾಜು ಪಾಟೀಲ ಒತ್ತಾಯಿಸಿದ್ದಾರೆ.