ಕನ್ನಡಪ್ರಭ ವಾರ್ತೆ ಮೂಲ್ಕಿ
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಅಪಾರ ಸಾಧನೆ ಮಾಡಿದ್ದು, ಅಸಹಾಯಕರಿಗೆ ಸಹಾಯ ಹಸ್ತದ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಹೇಳಿದರು.ಮೂಲ್ಕಿ ಸೀಮೆಯ ಸಮಸ್ತರ ಪರವಾಗಿ ಇತ್ತೀಚೆಗೆ ಕರ್ಮಯೋಗಿ ಗೌರವವನ್ನು ಸ್ವೀಕರಿಸಿರುವ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಕರ್ಮಯೋಗಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರನ್ನು ಧರ್ಮಪತ್ನಿ ಉಷಾ ರಾಣಿ ಅವರ ಜೊತೆ ಸೀಮೆಯ ಪರವಾಗಿ ಗೌರವಿಸಲಾಯಿತು.ಶ್ರೀ ದೇವರ ಸನ್ನಿಧಿಯಲ್ಲಿ ಭಕ್ತವೃಂದ ಹಾಗೂ ಆಡಳಿತ ಮಂಡಳಿಯ ಕೂಡುವಿಕೆಯಲ್ಲಿ ಶ್ರೀದೇವರ ವಿಶೇಷ ಪ್ರಸಾದ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು, ನಾನು ನನ್ನ ಕರ್ತವ್ಯವನ್ನು ಮಾತ್ರ ಮಾಡಿದ್ದು, ದೇವಿಯ ಸನ್ನಿಧಿಯಲ್ಲಿ ನಡೆದ ಗೌರವಾರ್ಪಣೆ ನನಗೆ ಅತೀವ ಸಂತೋಷ ತಂದಿದೆ ಎಂದು ಹೇಳಿದರು.ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ ಆಶೀರ್ವಚನ ನೀಡಿದರು. ಕಿನ್ನಿಗೋಳಿಯ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಬಪ್ಪನಾಡು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ವೇತ ಪಳ್ಳಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಶುಭಹಾರೈಸಿದರು.
ಮೂಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು, ಮೂಲ್ಕಿ ಬಿಲ್ಲವ ಸಂಘ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಮೂಲ್ಕಿ ನಾಲ್ಕು ಪಟ್ನ ಮೊಗವೀರ ಸಭಾ ಅಧ್ಯಕ್ಷ ಸುಜಿತ್ ಸಾಲ್ಯಾನ್, ಮೂಲ್ಕಿಯ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ರಾಮಚಂದ್ರ ನಾಯಕ್ ಕೋಲ್ನಾಡು ಗುತ್ತು, ಸುಕುಮಾರ್ ಶೆಟ್ಟಿ, ನ್ಯಾಯವಾದಿ ಭಾಸ್ಕರ ಹೆಗ್ಡೆ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.