ತಿರುಪತಿ, ಶಬರಿಮಲೆ ಬಳಿಕ ಧರ್ಮಸ್ಥಳ ಟಾರ್ಗೆಟ್ । ಅನಾಮಿಕ ವ್ಯಕ್ತಿ ವಶಕ್ಕೆ ಪಡೆದು, ಉತ್ಖನನದ ವೆಚ್ಚ ವಸೂಲಿ ಮಾಡಿಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಇಡೀ ದೇಶದಲ್ಲಿ ಇಂದು ನಡೆಯುತ್ತಿರುವ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಷಡ್ಯಂತ್ರದ ಮುಂದುವರಿದ ಭಾಗವಾಗಿ ಧರ್ಮಸ್ಥಳ ಘಟನೆ ಸೃಷ್ಟಿ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಆರೋಪಿಸಿದ್ದಾರೆ. ಎಡಪಂಥೀಯರು, ವಿಚಾರವಾದಿಗಳು, ಪ್ರಚಾರ ಗಿಟ್ಟಿಸಲು ಇಳಿದ ವ್ಯಕ್ತಿಗಳು ಮತ್ತು ಈ ವಿಚಾರ ಇಟ್ಟುಕೊಂಡು ಹಣ ಮಾಡುವ ಒಂದು ತಂಡ ವ್ಯವಸ್ಥಿತವಾಗಿ ಯೋಜನಾಬದ್ಧವಾಗಿ ರೂಪುರೇಷೆ ತಯಾರು ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.ಧರ್ಮಸ್ಥಳ ಯಾವುದೇ ಒಂದು ಜಾತಿ, ಗುಂಪಿಗೆ, ಕೇವಲ ಶ್ರದ್ಧಾ ಕೇಂದ್ರವಾಗಿ ಸೀಮಿತಗೊಳ್ಳದೆ ಇಡೀ ಸಮಾಜದಲ್ಲಿ ಸೇವಾ ಚಟುವಟಿಕೆ, ಶಿಕ್ಷಣ, ಆರೋಗ್ಯ, ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ಮಹಿಳೆಯರು ಮನೆಗೆ ಸೀಮಿತವಾದ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಸ್ವ ಸಹಾಯ ಸಂಘಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಂದ ದೊಡ್ಡ ಹೆಗ್ಗಳಿಕೆ ಇದೆ.ಧರ್ಮಸ್ಥಳ ಪ್ರಕರಣದ ಕುರಿತು ದೊಡ್ಡ ಲಾಬಿ ನಡೆಯುತ್ತಿದ್ದು, ಇತ್ತೀಚಿನ ಘಟನೆ ಗಮನಿಸಿದಾಗ ಇದು ಕೇವಲ ಧರ್ಮಸ್ಥಳಕ್ಕೆ ಮಾತ್ರ ಸೀಮಿತ ಘಟನೆಗಳಲ್ಲ ಎಂಬುದು ಸ್ಪಷ್ಟ. ಹಿಂದೂಗಳ ಶ್ರದ್ಧಾ ಕೇಂದ್ರವಾದ ತಿರುಪತಿಯ ಏಳೂ ಬೆಟ್ಟಗಳಲ್ಲೂ ಕೆಲವು ತಂಡಗಳನ್ನು ರಚನೆ ಮಾಡಿ ತಿರುಪತಿ ಭಾವನೆಗೆ ಧಕ್ಕೆ ತರುವ, ಮತಾಂತರದ ಷಡ್ಯಂತ್ರ ನಡೆಯಿತು. ತಿರುಪತಿಯ ಪವಿತ್ರ ಲಡ್ಡು ಪ್ರಸಾದದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ ಮಾಡಲಾಯಿತು. ಇದನ್ನು ಇಡೀ ಹಿಂದೂ ಸಮಾಜ ಒಗ್ಗೂಡಿ ವಿರೋಧಿಸಿ ಪ್ರಸ್ತುತ ಅಲ್ಲಿನ ಸ್ವಾಸ್ಥ್ಯ ಕಾಪಾಡಲಾಗಿದೆ.ಶಬರಿಮಲೆ ನಂಬಿಕೆ, ಪರಂಪರೆ ಹಾಗೂ ವ್ಯವಸ್ಥೆ ಗಳನ್ನು ಅಲ್ಲಿನ ಎಡಪಂಥೀಯರು ವಿರೋಧಿಸಿದ್ದಲ್ಲದೇ, ಶಿಷ್ಟಾಚಾರಗಳನ್ನು ನಾಲ್ಕೈದು ವರ್ಷಗಳ ಹಿಂದೆ ಉಲ್ಲಂಘಿಸಿದ್ದನ್ನೂ ನಾವು ನೋಡಿದ್ದೇವೆ. ಹಿಂದೂ ಸಮಾಜ ಅಲ್ಲಿಯೂ ತಕ್ಕ ಉತ್ತರ ಕೊಡುವ ಮೂಲಕ ಇಂದೂ ಶ್ರದ್ಧಾ ಕೇಂದ್ರವಾಗಿಯೇ ಉಳಿದಿದೆ.ಅದೇ ರೀತಿ ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸದ ಧರ್ಮಸ್ಥಳಕ್ಕೆ ಹಿಂದೆ ಸಾರಿಗೆ ವ್ಯವಸ್ಥೆ ಇಲ್ಲದಾಗಲೂ ನೂರಾರು ಕಿ.ಮೀ. ಪಾದಯಾತ್ರೆ ಮಾಡಿ ದರ್ಶನ ಮಾಡುವ ಶ್ರದ್ಧೆ ಇತ್ತು. ಆ ಪರಂಪರೆ ಇಂದಿಗೂ ಇದ್ದು, ಧರ್ಮಸ್ಥಳದ ಹೆಸರು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಪರಂಪರೆ ಕ್ಷೇತ್ರಕ್ಕೆ ಸೌಜನ್ಯ ಕೇಸ್ ಮುಂದಿಟ್ಟು ಕೊಂಡು, ಧರ್ಮಸ್ಥಳ ಹಾಗೂ ಆಡಳಿತ ವ್ಯವಸ್ಥೆಗೆ ಕಳಂಕ ಹೊರಿಸುವ ಕಾರ್ಯ ನಡೆದಿದೆ. ಹೀನ ಮನಃಸ್ಥಿತಿಯ ಕೆಲ ವ್ಯಕ್ತಿಗಳು, ಅನಾಮಿಕ ವ್ಯಕ್ತಿ ಸುಳ್ಳು ಹೇಳಿಕೆ ನೀಡಿ ಕಾನೂನು ವ್ಯವಸ್ಥೆ ತಲೆತಗ್ಗಿಸುವಂತಹ ಕೆಲಸ ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಅನಾಮಿಕನ ಹೇಳಿಕೆಯಂತೆ ಭೂಮಿ ಅಗೆಯುವ ಕಾರ್ಯ ಮಾಡಲಾಗುತ್ತಿದೆ.
ವಿಚಾರ ವ್ಯಕ್ತಪಡಿಸಲು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಅದನ್ನು ದುರುಪ ಯೋಗಪಡಿಸಿ ಕೀಳುಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇದನ್ನು ಸರ್ಕಾರ, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅನಾಮಿಕ ಹಾಗೂ ಸಮಾಜದಲ್ಲಿ ಶಾಂತಿ ಕದಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿದೆ.ಇಂದು ಹಿಂದೂ ಸಮಾಜವನ್ನು ಅವಹೇಳನ ಮಾಡುವುದು, ಹಿಂದೂ ದೇವರನ್ನು ಅಪಮಾನಕಾರಿಯಾಗಿ ಚಿತ್ರಿಸುವುದು ನಡೆಯುತ್ತಿದೆ. ಸಮಾಜದ ಕಾರ್ಯಕರ್ತರು ಇಂದಿನ ಕೆಲ ವ್ಯವಸ್ಥೆಗಳ ವಿರುದ್ಧ, ಹಿಂದೂ ಸಮಾಜದ ಅವಹೇಳನ ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ಕೂಡಲೇ ಸುಮೋಟೋ ಪ್ರಕರಣ ದಾಖಲಿಸುತ್ತಾರೆ. ಆದರೆ ಧರ್ಮಸ್ಥಳ ಹಾಗೂ ಅಲ್ಲಿನ ಪಾವಿತ್ರ್ಯತೆ ಬಗ್ಗೆ ವಿರೋಧಿಸುವ ವ್ಯಕ್ತಿ, ಕೆಲವು ಸೋಷಿಯಲ್ ಮೀಡಿಯಾಗಳ ವಿರುದ್ಧ ಜಿಲ್ಲಾಡಳಿತ, ಸರ್ಕಾರ ಯಾವುದೇ ಕ್ರಮತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದೆ. ಈ ಬಗ್ಗೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮವಹಿಸಿ ಎಂದು ಆಗ್ರಹಿಸಿದರು.ಧರ್ಮಸ್ಥಳದ ಹತ್ತಾರು ಎಕರೆ ಪ್ರದೇಶದಲ್ಲಿ ಭೂಮಿ ಅಗೆಯಲಾಗಿದೆ. ಕ್ಷೇತ್ರದ ವಿವಿಧ ಸ್ಥಳಗಳು, ನೇತ್ರಾವತಿ ನದಿ ತೀರ, ಬಾಹುಬಲಿ ಸ್ವಾಮಿ ಬೆಟ್ಟ ಎಲ್ಲ ಪ್ರದೇಶ ಮುಗಿದಾಗಿದೆ. ಇನ್ನೂ ಆ ವ್ಯಕ್ತಿ ದೇವಾಲಯದ ಗರ್ಭಗುಡಿ ಮಾತ್ರ ಉಳಿದಿದೆ ಎಂದು ಹೇಳಿದರೂ ಆಶ್ಚರ್ಯವಿಲ್ಲ. ಎಸ್‌ಐಟಿ ಅಧಿಕಾರಿಗಳು ಅನಾಮಿಕ ಮುಸುಕುದಾರಿಯನ್ನು ಕೂಡಲೇ ವಶಕ್ಕೆ ಪಡೆದು ವಿಚಾರಣೆ, ಮಂಪರು ಪರೀಕ್ಷೆ ಮಾಡ ಬೇಕು. ಆತನ ಮೇಲೂ ಸುಮೋಟೋ ಪ್ರಕರಣ ದಾಖಲಿಸಿ, ಆತನಿಗೆ ಕುಮ್ಮಕ್ಕು ನೀಡುತ್ತಿರುವ ತಂಡದ ಮೇಲೂ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಬೇಕು. ಈವರೆಗೆ ಭೂಮಿ ಅಗೆಯಲು ಸರ್ಕಾರಿ ಅಧಿಕಾರಿಗಳ ಸಮಯ ಹಾಳು ಮಾಡಿ ಸರ್ಕಾರಿ ಕೆಲಸಕ್ಕೆ ಭಂಗ ತಂದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸುವುದಲ್ಲದೇ, ಇದಕ್ಕೆ ಆದ ವೆಚ್ಚವನ್ನು ಆ ವ್ಯಕ್ತಿಯಿಂದಲೇ ವಸೂಲಿ ಮಾಡಬೇಕು.ಧರ್ಮಸ್ಥಳದ ಹೆಸರಿನಲ್ಲಿ ಹಣ, ಹೆಸರು ಮಾಡಲು ಹೊರಟಿರುವ ಕೆಲವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಹಾಗೂ ಸೌಜನ್ಯ ಹೋರಾಟಕ್ಕೂ ಮೊದಲು ಇದ್ದ ಈ ವ್ಯಕ್ತಿಗಳ ಸಂಪನ್ಮೂಲ, ಈಗಿನ ಸಂಪನ್ಮೂಲ ಹತ್ತು ಪಟ್ಟಿಗೂ ಮಿಕ್ಕಿ ದ್ವಿಗುಣ ಆಗಿದ್ದು ಹೇಗೆ, ಎಲ್ಲಿಂದ ಬಂದಿತು ಎಂದು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದರು.೧೨ಬಿಹೆಚ್‌ಆರ್ ೧: ಆರ್.ಡಿ.ಮಹೇಂದ್ರ