ಧರ್ಮಸ್ಥಳದಲ್ಲಿ ನಾಳೆ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ವೈಭವ

KannadaprabhaNewsNetwork |  
Published : May 02, 2025, 12:08 AM IST
ಧರ್ಮಸ್ಥಳ ಸಾಮೂಹಿಕ ವಿವಾಹ ಕಡತ ಚಿತ್ರ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಮದುವೆಯಾಗಲು ಈಗಾಗಲೇ 90ಕ್ಕೂ ಹೆಚ್ಚು ವಧು-ವರರು ಹೆಸರು ನೋಂದಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಮದುವೆಯಾಗಲು ಈಗಾಗಲೇ 90ಕ್ಕೂ ಹೆಚ್ಚು ವಧು-ವರರು ಹೆಸರು ನೋಂದಾಯಿಸಿದ್ದಾರೆ.

ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸುವರು.ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚ ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದರು. ಅಲ್ಲಿಂದ ಪ್ರತಿ ವರ್ಷ ಏಪ್ರಿಲ್/ಮೇ ತಿಂಗಳಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ವರ್ಷದವರೆಗೆ 12,900 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದಾರೆ. ಇಲ್ಲಿಯವರೆಗೂ ಇಲ್ಲಿ ಸಾಮೂಹಿಕ ವಿವಾಹವಾದವರ ಪೈಕಿ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.

ವಿವಾಹ ಸಮಾರಂಭ:

ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಎಲ್ಲ ಜಾತಿಯವರ ಸಂಪ್ರದಾಯದಂತೆ ಅಮೃತವರ್ಷಿಣಿ ಸಭಾಭವದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುವುದು.ಶುಕ್ರವಾರವೇ ವಧು-ವರರು ಹಾಗೂ ಅವರ ಹಿರಿಯರು ಧರ್ಮಸ್ಥಳಕ್ಕೆ ಆಗಮಿಸಬೇಕು. ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅವರು ನೀಡಿದ ಪ್ರಮಾಣಪತ್ರ ಹಾಗೂ ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಿ, ಎಲ್ಲವೂ ಕ್ರಮಬದ್ಧವಾಗಿದ್ದಲ್ಲಿ ಅವರಿಗೆ ಮದುವೆಯಾಗಲು ಅವಕಾಶ ನೀಡಲಾಗುವುದು.ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆ ಶನಿವಾರ ಬೆಳಗ್ಗೆಯಿಂದಲೇ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮೂಗುತಿ ವಿತರಿಸುವರು. ಮಂಗಳಸೂತ್ರವನ್ನು ವಿವಾಹದ ಶುಭ ಮುಹೂರ್ತದಲ್ಲಿ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ವಿತರಿಸಿ ಶುಭ ಹಾರೈಸುವರು.ಶನಿವಾರ ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು, ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು. ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆ ವಿತರಣೆಯೊಂದಿಗೆ 6.48ರ ಶುಭಮುಹೂರ್ತದಲ್ಲಿ ಹಾರ ವಿನಿಮಯ, ಮಾಂಗಲ್ಯಧಾರಣೆ ನಡೆಯುತ್ತದೆ. ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ನೂತನ ದಂಪತಿಗಳಿಗೆ ಶುಭ ಹಾರೈಸಿದ ಬಳಿಕ ನೂತನ ದಂಪತಿಗಳು ದಾಂಪತ್ಯ ದೀಕ್ಷೆ ಸ್ವೀಕರಿಸುವರು. ಬಳಿಕ, ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ದಂಪತಿಗಳು ಊರಿಗೆ ತೆರಳುವರು.ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಮುಂದೆ ಅಧಿಕೃತ ವಿವಾಹ ನೋಂದಣಿ ಪ್ರಮಾಣಪತ್ರವನ್ನು ದಂಪತಿಗಳಿಗೆ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ