ಸೂಲಿಬೆಲೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು ಸಾಮಾಜಿಕ ಕಾಳಜಿಯಿಂದ ಕೂಡಿದ್ದು ಸಮಾಜಕ್ಕೆ ಅರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
ಹೋಬಳಿಯ ಗುಳ್ಳಹಳ್ಳಿ ಗ್ರಾಮದಲ್ಲಿ ಕೆರೆ ಪೂಜೆ ಹಾಗೂ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಳ್ಳಹಳ್ಳಿ ಕೆರೆಯನ್ನು ೧೯ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿರುವುದು ಶ್ಲಾಘನೀಯ ಎಂದರು.ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಕೆರೆ ಅಭಿವೃದ್ಧಿ ಮಾಡಲಾಗಿದೆ. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡರು ವೈಯಕ್ತಿಕವಾಗಿ ೧ ಲಕ್ಷ ದೇಣಿಗೆ ನೀಡಿದ್ದಾರೆ ಎಂದರು.
ತಾಪಂ ಇಒ ಡಾ.ನಾರಾಯಣಸ್ವಾಮಿ ಮಾತನಾಡಿ, ಕೆರೆಗಳ ಪುನಃಚ್ಚೇತನದಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರಿಯಾಗಲಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಉಮರಬ್ಬ ಮಾತನಾಡಿ, ಸಂಸ್ಥೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ೨೦೧೬ ರಲ್ಲಿ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಕೆರೆಗಳ ಪುನಃಚ್ಚೇತನ ಕಾರ್ಯ ಸಾಗುತ್ತಿದೆ. ಪ್ರಸ್ತಕ ಸಾಲಿನಲ್ಲಿ ರಾಜ್ಯದಲ್ಲಿ ೧೬೦ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಕಾಯಕಲ್ಪ ನೀಡಲಾಗಿದೆ ಎಂದರು.
ದಾನಿಗಳ ಸಹಕಾರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮಿತಿ ರಚನೆ ಮಾಡಿಕೊಂಡು ಗ್ರಾಮೀಣ ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಹೂಳು ತೆಗೆಯುವ ಮೂಲಕ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ಏರಿ ಭದ್ರಪಡಿಸುವುದು ಹಾಗೂ ವೈಜ್ಞಾನಿಕವಾಗಿ ಸುಂದರವಾಗಿ ಮರು ನಿರ್ಮಾಣ ಮಾಡುವ ದೃಷ್ಟಿಕೋನದಲ್ಲಿ ಕಾರ್ಯ ನಡೆಸಲಾಗುತ್ತದೆ ಎಂದರು.ತಾಲೂಕು ಯೋಜನಾಧಿಕಾರಿ ಹರೀಶ್ ಮಾತನಾಡಿ, ರಾಜ್ಯಾದ್ಯಂತ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಾರೆ. ರೈತ ಮುಖಂಡರು ಹಾಗೂ ಗ್ರಾಪಂ ಸಹಕಾರ ನಿರಂತರವಾಗಿ ದೊರೆಯುತ್ತದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ನರಸಮ್ಮ, ಕೆರೆ ಸಮಿತಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ಜಡಿಯಪ್ಪ, ಪಿಡಿಒ ಮಂಜುನಾಥ್, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಗ್ರಾಪಂ ಸದಸ್ಯ ಶಿವಕುಮಾರ್, ರತ್ನಮ್ಮ, ಮರಿಯಪ್ಪ, ಕೃಷಿ ಮೇಲ್ವಿಚಾರಕ, ಹೋಬಳಿ ಮೇಲ್ವಿಚಾರಕ ಚಂದನ್, ಇಂಜನಿಯರ್ ಭರತ್,ಮುನಿರಾಜು, ರಫೀಕ್ ಇತರರಿದ್ದರು.