ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸಿದ್ದು 6 ಜನರ ಬುರುಡೆ ಗ್ಯಾಂಗ್‌!

KannadaprabhaNewsNetwork |  
Published : Dec 11, 2025, 02:00 AM ISTUpdated : Dec 11, 2025, 05:38 AM IST
Dharmasthala Burude Gang

ಸಾರಾಂಶ

ಧರ್ಮಸ್ಥಳ ಗ್ರಾಮದ ವಿರುದ್ಧ ಬುರುಡೆ ಗ್ಯಾಂಗ್‌ ಅಪರಾಧಿಕ ಒಳಸಂಚು ರೂಪಿಸಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ ಹಾಗೂ ಆರೋಪಿ ಚಿನ್ನಯ್ಯ ಹಾಗೂ ಉಳಿದ ಐದು ಮಂದಿ ಈ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ (ವಿಶೇಷ ತನಿಖಾ ತಂಡ) ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಮಂಗಳೂರು :  ರಾಜ್ಯ-ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣಕ್ಕೆ ಮಹತ್ವದ ತಿರುವು ಸುಕ್ಕಿದೆ. ಧರ್ಮಸ್ಥಳ ಗ್ರಾಮದ ವಿರುದ್ಧ ಬುರುಡೆ ಗ್ಯಾಂಗ್‌ ಅಪರಾಧಿಕ ಒಳಸಂಚು ರೂಪಿಸಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ ಹಾಗೂ ಆರೋಪಿ ಚಿನ್ನಯ್ಯ ಹಾಗೂ ಉಳಿದ ಐದು ಮಂದಿ ಈ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ (ವಿಶೇಷ ತನಿಖಾ ತಂಡ) ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಥಮಿಕ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ಇದರಲ್ಲಿ ಬುರುಡೆ ಗ್ಯಾಂಗ್ ಮಾಡಿರುವ ಷಡ್ಯಂತ್ರ ಬಯಲು ಮಾಡಲಾಗಿದೆ. ಎಸ್ಐಟಿಯ ಪ್ರಾಥಮಿಕ ವರದಿಯಲ್ಲೇ ಧರ್ಮಸ್ಥಳ ಮೇಲ್ವಿಚಾರಕರಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ಒಳಸಂಚು ರೂಪಿಸಿ ಹೀರೋಗಳಾಗಲು ಹೊರಟವರೇ ಈಗ ಆರೋಪಿಗಳ ಸ್ಥಾನದಲ್ಲಿ ನಿಲ್ಲುವಂತಾಗಿದೆ.

ಎಸ್‌ಐಟಿ ತನಿಖೆಯಲ್ಲಿ ಎ1 ಆರೋಪಿಯಾದ ‘ಮಾಸ್ಕ್‌ ಮ್ಯಾನ್’ (ಮುಸುಕುಧಾರಿ) ಚಿನ್ನಯ್ಯ, ಎ2 ಮಹೇಶ್ ಶೆಟ್ಟಿ ತಿಮರೋಡಿ, ಎ3 ಗಿರೀಶ್ ಮಟ್ಟೆಣ್ಣವರ್, ಎ4 ವಿಠ್ಠಲಗೌಡ, ಎ5 ಟಿ.ಜಯಂತ್ ಹಾಗೂ ಎ6 ಸುಜಾತಾ ಭಟ್ ಒಳಸಂಚಿನಲ್ಲಿ ಶಾಮೀಲಾಗಿದ್ದರು ಎಂದು ದೃಢಪಟ್ಟಿದೆ. ವರದಿಯಲ್ಲಿ ಇದರ ವಿವರವಾದ ಉಲ್ಲೇಖ ಮಾಡಲಾಗಿದೆ.

ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳಿದ್ದ ಚಿನ್ನಯ್ಯ:

ಎ1 ಆರೋಪಿ ಚಿನ್ನಯ್ಯನಿಗೆ ಹಣ ಕೊಟ್ಟು ಬುರುಡೆ ಗ್ಯಾಂಗ್ ಪುಸಲಾಯಿಸಿ ಇಡೀ ಪ್ರಕರಣದ ದಿಕ್ಕು ತಪ್ಪಿಸಿದೆ. ಚಿನ್ನಯ್ಯನಿಗೆ ವಿಠಲಗೌಡ ಮೊದಲೇ ಪರಿಚಯವಿದ್ದ. ಚಿನ್ನಯ್ಯನನ್ನು ಮಹೇಶ್ ತಿಮರೋಡಿ ಮನೆಗೆ ವಿಠಲಗೌಡ ಕರೆದೊಯ್ದಿದ್ದ. ಅಲ್ಲಿ ತಿಮರೋಡಿ, ಗಿರೀಶ್‌ ಮಟ್ಟಣ್ಣವರ್‌ ಸೇರಿಕೊಂಡು ಧರ್ಮಸ್ಥಳ ವಿರುದ್ಧ ಪಿತೂರಿಗೆ ಸಂಚು ರೂಪಿಸಿದ್ದರು. ಮಾತ್ರವಲ್ಲದೆ ಆತನಿಂದ ಸುಳ್ಳು ಹೇಳಿಸಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಅದರಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಸುಳ್ಳು ಹೇಳಿಕೆ ನೀಡಿದ್ದ. ಬುರುಡೆ ಗ್ಯಾಂಗ್‌ನಿಂದ ಚಿನ್ನಯ್ಯ ಹಣ ಪಡೆದು ಸುಳ್ಳು ಹೇಳಿದ್ದು ತನಿಖೆಯಲ್ಲಿ ಗೊತ್ತಾಗಿದೆ.

ಅಲ್ಲದೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು. ಅದರಂತೆ ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಚಿನ್ನಯ್ಯ ಸುಳ್ಳು ಹೇಳಿದ್ದಾನೆ. ಅಪರಿಚಿತ ಶವ ಅದರಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಶವಗಳನ್ನು ಹೂತಿರುವುದಾಗಿಯೂ, ತಲೆ ಬುರುಡೆಯೊಂದನ್ನು ತಂದು ತಾನೇ ಹೂತಿದ್ದ ತಲೆ ಬುರುಡೆ ಎಂಬುದಾಗಿಯೂ ಹಸಿ ಸುಳ್ಳು ಹೇಳಿದ್ದಾನೆ. ಸುಳ್ಳು ದೂರು ಕೊಟ್ಟಿರುವುದಲ್ಲದೆ, ನ್ಯಾಯಾಧೀಶರ ಮುಂದೆಯೂ ಕಥೆ ಕಟ್ಟಿದ್ದ. ಚಿನ್ನಯ್ಯ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ.

ಒಬ್ಬೊಬ್ಬರ ಸಂಚೂ ಬಯಲು:

ಒಳಸಂಚು ರೂಪಿಸಿರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣವರ್‌ ಹಾಗೂ ಇತರರ ಷಡ್ಯಂತ್ರದ ಬಗ್ಗೆಯೂ ಎಸ್‌ಐಟಿ ವಿವರವಾಗಿ ವರದಿಯಲ್ಲಿ ದಾಖಲು ಮಾಡಿದೆ.

ತಿಮರೋಡಿಯ ಪಿತೂರಿ ಏನು?:

ಮಹೇಶ್ ಶೆಟ್ಟಿ ತಿಮರೋಡಿಯ ಮನೆಯಲ್ಲೇ ಒಳಸಂಚು ನಡೆದಿದೆ ಎನ್ನುವುದು ಗಮನಾರ್ಹ. ಧರ್ಮಸ್ಥಳ ವಿರುದ್ಧ ದುರುದ್ದೇಶದಿಂದ ಚಿನ್ನಯ್ಯನಿಗೆ ಆಮಿಷವೊಡ್ಡಿ ದೂರು ಕೊಡಿಸಿರುವುದು, ಯಾವುದೋ ತಲೆಬುರುಡೆಯನ್ನು ಚಿನ್ನಯ್ಯನೇ ಹೂತಿದ್ದ ಬುರುಡೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದು, ಸುಜಾತಾ ಭಟ್ ಜತೆ ಸೇರಿ ಅನನ್ಯಾ ಭಟ್ ಪಾತ್ರ ಸೃಷ್ಟಿಯಲ್ಲಿ ತಿಮರೋಡಿ ಕೈವಾಡ ಬಯಲಾಗಿದೆ. ತಿಮರೋಡಿ ಮಾತು ಕೇಳಿಯೇ ಮಗಳು ಕಾಣೆಯಾಗಿದ್ದಾಳೆಂದು ಸುಜಾತಾ ಭಟ್ ಸುಳ್ಳು ದೂರು ಕೊಟ್ಟಿದ್ದರು. ಈ ಎಲ್ಲ ಕಪಟ ಕಾರ್ಯತಂತ್ರದ ರೂವಾರಿಯೇ ತಿಮರೋಡಿ ಎಂದು ತನಿಖೆಯಿಂದ ಸಾಬೀತಾಗಿದೆ. 

ಮಟ್ಟಣ್ಣವರ್ ಸಂಚೇನು?: 

ವಿಠ್ಠಲ ಗೌಡನ ಮೂಲಕ ತಲೆ ಬುರುಡೆ ತರಿಸಿಕೊಂಡಿದ್ದ ಮಟ್ಟಣ್ಣವರ್, ಬಳಿಕ ಅದನ್ನು ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ರೂಮಿನಲ್ಲಿ ಇಟ್ಟಿದ್ದ. ಬಳಿಕ ಬುರುಡೆಯನ್ನು ಜಯಂತ್‌ಗೆ ಕೊಟ್ಟು ದೆಹಲಿಗೆ ತರಿಸಿಕೊಂಡಿದ್ದ. ತಲೆ ಬುರುಡೆ ಸಮೇತ ಸುಪ್ರೀಂ ಕೋರ್ಟ್‌ಗೆ ದೂರು ಕೊಡಲು ಪ್ರಯತ್ನ ಮಾಡಿದ್ದು, ಅದರಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅದೇ ಬುರುಡೆಯನ್ನು ತಿಮರೋಡಿ ಮನೆಗೆ ತರಿಸಿದ್ದ. ಚಿನ್ನಯ್ಯನಿಗೆ ಸುಳ್ಳು ದೂರು ನೀಡುವಂತೆ ಹಣ ಕೊಟ್ಟಿರುವುದು, ಸುಜಾತಾ ಭಟ್ ಮಗಳ ಕಥೆ ಸೃಷ್ಟಿ ಮಾಡಿದ ಹಿಂದೆಯೂ ಈತನ ಕೈವಾಡ ಬಯಲಾಗಿದೆ.ತನಿಖೆಗೆ ಸಹಕರಿಸ್ತಿಲ್ಲ!:ಚಿನ್ನಯ್ಯ ಈಗಾಗಲೇ ನಂ.1 ಆರೋಪಿಯಾಗಿದ್ದು, ಉಳಿದ ಐವರನ್ನೂ ಎಸ್ಐಟಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದೂ ನ್ಯಾಯಾಲಯಕ್ಕೆ ಎಸ್ಐಟಿ ತಿಳಿಸಿದೆ. ಇನ್ನೂ ತನಿಖೆ ಬಾಕಿಯಿದ್ದು, ಕೆಲವೊಂದು ತಾಂತ್ರಿಕ ಸಾಕ್ಷಿಗಳ ವರದಿ ಬರಬೇಕಿದೆ. ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿಯನ್ನು ಎಸ್‌ಐಟಿ ಸಲ್ಲಿಸಲಿದೆ.

 ಯಾವ ಯಾವ ಸೆಕ್ಷನ್‌ ಅಡಿ ಕೇಸ್?

ಬುರುಡೆ ಗ್ಯಾಂಗ್ ವಿರುದ್ಧ ದೋಷಾರೋಪ ಮಾಡಿರುವ ಎಸ್ಐಟಿ ಬಿಎನ್ಎಸ್ ಕಾಯ್ದೆ ಪ್ರಕಾರ ಆರೋಪಗಳ ವಿವರ ನೀಡಿದೆ.

ಬಿಎನ್ಎಸ್ 211(ಎ) – ಅಪರಾಧಿಕ ಬೆದರಿಕೆ. ಬಿಎನ್ಎಸ್ 230- ಅನ್ಯಾಯವಾದ ನಿರ್ಬಂಧ, ಬಿಎನ್ಎಸ್ 231 –ಅನ್ಯಾಯವಾದ ಬಂಧನ, ಬಿಎನ್ಎಸ್ 229 –ಬಲ ಪ್ರಯೋಗ, ಬಿಎನ್ಎಸ್ 227 –ದಾಳಿ, ಬಿಎನ್ಎಸ್ 228 –ಅಪರಾಧಿಕ ಬಲ ಬಳಕೆ, ಬಿಎನ್ಎಸ್ 240 – ದಬ್ಬಾಳಿಕೆ ಮೂಲಕ ಹಣ/ಆಸ್ತಿ ಪಡೆಯುವುದು, ಬಿಎನ್ಎಸ್ 236 – ತಪ್ಪು ಘೋಷಣೆ ಸಲ್ಲಿಸುವುದು, ಬಿಎನ್ಎಸ್233 –ಮೋಸ, ಬಿಎನ್ಎಸ್ 248 – ನಂಬಿಕೆ ದ್ರೋಹ, ಬಿಎನ್ಎಸ್ 336(4) - ಸಾರ್ವಜನಿಕ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಕಿರಿಕಿರಿ, ಬಿಎನ್ಎಸ್ 61(2) ಆರ್/ಡಬ್ಲ್ಯೂ 3(8), ಬಿಎನ್ಎಸ್ 61(2) –ಸಹ ಉದ್ದೇಶ, ಬಿಎನ್ಎಸ್ 3(8)- ಪೂರ್ವ ಸಮಾಲೋಚನೆ ಅಥವಾ ಸಮಾನ ಉದ್ದೇಶದಿಂದ ನಡೆಸಿದ ಅಪರಾಧ ಇತ್ಯಾದಿ ಆರೋಪಗಳನ್ನು ಎಸ್ಐಟಿ ಬುರುಡೆ ಟೀಮ್ ಮೇಲೆ ಹೇರಿದೆ.

 ತೀರ್ಪು ಮುಂದೂಡಿಕೆ 

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ‌ ಸಲ್ಲಿಸಿರುವ ವರದಿಯ ಕುರಿತಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಎಸ್.ಐ.ಟಿ ಪರವಾಗಿ ವಾದ ಮಂಡನೆ ಮುಕ್ತಾಯವಾಗಿದ್ದು, ಅಪೂರ್ಣ ವರದಿಯ ಹಿನ್ನಲೆಯಲ್ಲಿ ಸುಳ್ಳು ಸಾಕ್ಷಿಯ ಕುರಿತು ಈ ಕೂಡಲೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಕರಣದ ತೀರ್ಪನ್ನು ಡಿ.26ಕ್ಕೆ ಮುಂದೂಡಿದೆ.ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರ್ಕಾರಿ ವಕೀಲರು ಮುಂದಿನ ತನಿಖೆಯ ಕುರಿತು ನ್ಯಾಯಾಲಯದಿಂದ ನಿರ್ದೇಶನ ನೀಡುವಂತೆ ಕೇಳಿಕೊಂಡಿತ್ತು. ವಾದ ಆಲಿಸಿದ ನ್ಯಾಯಾಲಯ ಎಸ್.ಐ.ಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿಯು ಪರಿಪೂರ್ಣ ವರದಿಯಲ್ಲ. ಇದರಿಂದಾಗಿ ಸುಳ್ಳು ಸಾಕ್ಷಿಯ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಸೂಕ್ತ ಕಾನೂನು ಸಲಹೆ ಪಡೆದು ಅಂತಿಮ ವರದಿ ಸಿದ್ಧಪಡಿಸುವಂತೆ ನ್ಯಾಯಾಲಯ ಎಸ್.ಐ.ಟಿಗೆ ಸೂಚಿಸಿದೆ. ಕೂಡಲೇ ಮುಂದಿನ ಕ್ರಮಕ್ಕೆ ಸೂಚನೆ ನೀಡಬೇಕು ಎಂಬ ವಕೀಲರು ವಾದ ಮಂಡಿಸಿದ್ದರೂ ತಕ್ಷಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು, ಪ್ರಕರಣದ ಬಗ್ಗೆ ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ಡಿ.26ಕ್ಕೆ ತೀರ್ಪು ನೀಡಲು ಮುಂದೂಡಿದ್ದಾರೆ. 

ಷಡ್ಯಂತ್ರ ನಡೆದಿದ್ದು ಸಾಬೀತು : ಧರ್ಮಸ್ಥಳ ಕ್ಷೇತ್ರದ ಹೇಳಿಕೆ

- ಮತ್ಯಾವ ಕ್ಷೇತ್ರದ ಮೇಲೂ ಇದು ಆಗಬಾರದು- ಸರ್ಕಾರ ಈ ಬಗ್ಗೆ ಕ್ರಮ ವಹಿಸಲಿ: ಕ್ಷೇತ್ರ ಮನವಿ

=ಬೆಳ್ತಂಗಡಿ: ಶ್ರೀ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿಕೆ ನೀಡಿದೆ. ಧರ್ಮಸ್ಥಳ ಗ್ರಾಮದ ವಿರುದ್ಧ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖೆಯ ಮಾಹಿತಿ ಒದಗಿಸಿದೆ ಎಂದು ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೇವೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲಿನ ವ್ಯವಸ್ಥಿತ ಷಡ್ಯಂತ್ರಗಳು ಮೇಲಿಂದ ಮೇಲೆ ನಡೆಯುತ್ತಾ ಬಂದಿದೆ ಎನ್ನುವುದಕ್ಕೆ ಇದೂ ಕೂಡ ಒಂದು ಉದಾಹರಣೆಯೇ.

ಇದೇ ರೀತಿಯ ಷಡ್ಯಂತ್ರ ಮುಂದೆಂದೂ ಮತ್ಯಾವ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಾಗದಂತೆ ತಡೆಯುವ ಅವಶ್ಯಕತೆಯಿದ್ದು ಸರ್ಕಾರ ಈ ವಿಚಾರವಾಗಿ ಗಮನವಹಿಸಬೇಕೆಂದು ವಿನಂತಿ ಮಾಡುತ್ತೇವೆ. ಈ ಷಡ್ಯಂತ್ರದ ಹಿಂದಿರುವ ಶಕ್ತಿಗಳಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದೆ. 

ಷಡ್ಯಂತ್ರದ ಬಗ್ಗೆ ಅಂದೇ ಹೇಳಿದ್ದೆ : ಡಿಕೆಶಿ

- ಯಾರೂ ಧರ್ಮಸ್ಥಳದಲ್ಲಿ ಹಾಗೆ ಮಾಡಲ್ಲ ಎಂದು ಗೊತ್ತಿತ್ತು- ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ: ಡಿಸಿಎಂ ಹರ್ಷ

ಕನ್ನಡಪ್ರಭ ವಾರ್ತೆ ಬೆಳಗಾವಿ‘ಬುರುಡೆ ಕೇಸ್‌ ಪ್ರಕರಣದಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ನಾನು ಆರಂಭದಲ್ಲೇ ಧೈರ್ಯದಿಂದ ಹೇಳಿದ್ದೆ. ಅಲ್ಲದೆ, ಡಾ.ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾವು ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದು, ಆ ನಿರ್ಧಾರ ಕೈಗೊಂಡಿದ್ದಕ್ಕೆ ಇಡೀ ಜೈನ ಸಮುದಾಯ ನನಗೆ ಬೆಂಬಲವಾಗಿ ನಿಂತು, ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿ,.‘ನನಗೆ ಧರ್ಮಸ್ಥಳದ ಇತಿಹಾಸ ಗೊತ್ತು. ಅವರು ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ಗೊತ್ತಿತ್ತು. ಹೀಗಾಗಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿರುವ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ. ಚಾರ್ಜ್‌ಶೀಟ್ ಪ್ರತಿಯಲ್ಲಿ ಏನಿದೆ ಎಂಬುದನ್ನು ನಾನು ಓದಿಲ್ಲ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವಿನ ಆಳವಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ’ ಎಂದು ಹೇಳಿದರು.‘ಡಾ। ಹೆಗ್ಗಡೆ ಅವರ ವಿರುದ್ಧ ಯಾವ ರೀತಿ ಷಡ್ಯಂತ್ರ ಆಯಿತು ಎಂಬುದನ್ನು ನಾವು ನೋಡಿದ್ದೇವೆ. ಆಗ ಅವರ ಕಷ್ಟಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಹಾಗೂ ಅನೇಕ ನಾಯಕರು ಪ್ರಶ್ನೆ ಮಾಡಿದರು. ಆದರೆ, ಪ್ರಕರಣದ ಆರಂಭದಲ್ಲಿಯೇ ಷಡ್ಯಂತ್ರ ನಡೆದಿದ್ದನ್ನು ನಾನು ಹೇಳಿದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ, ನನ್ನ ಅನುಭವ ಹಾಗೂ ನನಗೆ ತಿಳಿದಿದ್ದನ್ನು ಹೇಳಿದ್ದೇನೆ’ ಎಂದರು,

ಎಸ್ಐಟಿ ವರದಿಯಲ್ಲೇನಿದೆ?

- ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠ್ಠಲ ಗೌಡ, ಜಯಂತ್, ಸುಜಾತಾ ಭಟ್ ಶಾಮೀಲು

- ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಆರೋಪಿ ನಂ.1 ಚಿನ್ನಯ್ಯ ಅಲಿಯಾಸ್‌ ಮಾಸ್ಕ್‌ ಮ್ಯಾನ್‌

- ಚಿನ್ನಯ್ಯನಿಗೆ ಹಣ ಕೊಟ್ಟು ಧರ್ಮಸ್ಥಳಕ್ಕೆ ಕಳಂಕ ಹಚ್ಚಲು ಪುಸಲಾಯಿಸಿದ್ದ ಬುರುಡೆ ಗ್ಯಾಂಗ್‌

- ಇವರ ಮಾತಿಗೆ ಓಗೊಟ್ಟು ಧರ್ಮಸ್ಥಳದಲ್ಲಿ ಅಪರಿಚಿತ ಶವ ಹೂತಿದ್ದೇನೆಂದು ಚಿನ್ನಯ್ಯ ಸುಳ್ಳು

- ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ