ಧರ್ಮಸ್ಥಳ ಸಂಸ್ಥೆ ಬಡವರನ್ನು ಮುಖ್ಯವಾಹಿನಿಗೆ ಕರೆತರುತ್ತಿದೆ: ದಯಾಶೀಲಾ

KannadaprabhaNewsNetwork | Published : Feb 25, 2024 1:52 AM

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ಕೊಡುವುದಕ್ಕಷ್ಟೇ ಸೀಮಿತವಾಗಿಲ್ಲದೆ ಬಡ ಹಾಗೂ ಮಧ್ಯಮ ಜನರನ್ನು ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಡೆ ಅವರು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ಕೊಡುವುದಕ್ಕಷ್ಟೇ ಸೀಮಿತವಾಗಿಲ್ಲದೆ ಬಡ ಹಾಗೂ ಮಧ್ಯಮ ಜನರನ್ನು ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಡೆ ಅವರು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು.

ನಗರದ ಸೀತಾರಾಮಯ್ಯ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಮತ್ತು ಶಾರದಾ ಪೂಜೆ, ಧಾರ್ಮಿಕ ಸಭೆ ಹಾಗೂ ಸಂಗಮ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಷ್ಟಗಳನ್ನು ದೇವರು ಕೊಡುತ್ತಾನೆ. ಆದರೆ ಕಷ್ಟಗಳನ್ನು ಸಹಿಸುವ ಶಕ್ತಿ ಕೊಡುವುದು ಇಂತಹ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಮಾನಸಿಕ ಆರೋಗ್ಯ, ಶಾಂತಿ, ನೆಮ್ಮದಿಗಾಗಿ ಪೂಜೆ ಮಾಡಲಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಪುರುಷರಿಂದ ಪ್ರಾರಂಭವಾದ ಈ ಸಂಸ್ಥೆ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.

ಕೃಷಿ, ಕೆರೆ ಅಭಿವೃದ್ಧಿ, ವಾತ್ಸಲ್ಯ ಮನೆ ನಿರ್ಮಾಣ, ದೇವಸ್ಥಾನ ಅಭಿವೃದ್ಧಿ, ಸುಜ್ಞಾನ ಶಿಷ್ಯವೇತನ, ಶುದ್ಧ ಕುಡಿಯುವ ನೀರಿನ ಘಟಕ, ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಸಾಲಸೌಲಭ್ಯ, ತರಬೇತಿ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಪೂಜ್ಯರು ಕೈಗೊಳ್ಳುವ ಮೂಲಕ ಸಂಪಾದನೆಗೆ ದಾರಿ ತೋರಿಸಿಕೊಟ್ಟು ನೆಮ್ಮದಿಯ ಜೀವನ ಸಹಕಾರಿಯಾಗಿದ್ದಾರೆ ಎಂದರು.

ಸಾನಿಧ್ಯ ವಹಿಸಿದ್ದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಆಶೀವರ್ಚನ ನೀಡಿ, ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿಲ್ಲ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ. ಅದೆಷ್ಟೋ ಮಹಿಳೆಯರು ನಿಸ್ವಾರ್ಥ ಬದುಕನ್ನು ಕಟ್ಟಿಕೊಂಡು ಆರ್ಥಿಕ ಮಟ್ಟ ಸುಧಾರಣೆಯಾಗಿದೆ. ಅದೇ ರೀತಿ ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದರು.

ತಾಲೂಕು ಯೋಜನಾಧಿಕಾರಿ ಕೆ. ಉದಯ್ ಪ್ರಾಸ್ತಾವಿಕ ನುಡಿಗಳನ್ನಾಡಿ, ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ನಗರ ಮತ್ತು ತಾಲೂಕು ಎಂಬುದಾಗಿ ಎರಡು ವಿಭಾಗ ಮಾಡಿ ಉತ್ತಮ ಕೆಲಸ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 2035 ಗುಂಪುಗಳಿದ್ದು 16ಸಾವಿರ ಪಾಲುದಾರ ಬಂಧುಗಳಿದ್ದಾರೆ. ಈಗಾಗಲೇ 73ಕೋಟಿ ರು ಸಾಲವನ್ನು ಬ್ಯಾಂಕ್ ಮೂಲಕ ಕೊಡಿಸಲಾಗಿದೆ. ಅಷ್ಟೇ ವೇಗದಲ್ಲಿ ಮರುಪಾವತಿಯೂ ಆಗುತ್ತಿದೆ. ಸಾಲವನ್ನು ವಿವಿಧ ಕೆಲಸಗಳಿಗೆ ಸದ್ವಿವಿನಿಯೋಗಪಡಿಸಿಕೊಂಡು ಆರ್ಥಿಕ ಸದೃಢರಾಗುತ್ತಿದ್ದಾರೆ ಎಂದರು.

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಮತ್ತು ಶಾರದಾ ಪೂಜೆಯ ನೂರಾರು ಮಹಿಳೆಯರ ಸಮ್ಮುಖದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಟಿ.ಕೆ. ಮಂಜುನಾಥ್ ವಹಿಸಿದ್ದರು. ಸಾಹಿತಿ ದಿಬ್ಬದಹಳ್ಳಿ ಶ್ಯಾಮಸುಂದರ್‌ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್‌.ಡಿ. ಬಾಬು, ಕಲ್ಯಾಣ ಮಂಟಪದ ಪಂಚಾಕ್ಷರಿ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಸಂತೋಷ್ ಸೇರಿದಂತೆ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

Share this article