ನರಗುಂದ: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಧರ್ಮಸ್ಥಳ ಸಂಸ್ಥೆ ಸಮಾಜದ ಸುಧಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಚ್.ಬಿ. ಅಸೂಟಿ ಹೇಳಿದರು.
ಕ್ಷೇತ್ರ ಯೋಜನಾಧಿಕಾರಿ ಮಾಲತಿ ದಿನೇಶ ಮಾತನಾಡಿ, ಯೋಜನೆಯ ಹಲವಾರು ಕಾರ್ಯಕ್ರಮಗಳಲ್ಲಿ ವಿಶೇಷವಾದುದು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಜ್ಞಾನವಿಕಾಸ ಕಾರ್ಯಕ್ರಮ. ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ನಡೆಸಲ್ಪಡುವ ಕಾರ್ಯಕ್ರಮ ಇದಾಗಿದೆ. ಆರೋಗ್ಯದ ಬಗ್ಗೆ, ಶುಚಿತ್ವದ ಬಗ್ಗೆ, ಸ್ವಉದ್ಯೋಗ ತರಬೇತಿ, ಕಾನೂನಿನ ಅರಿವು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಮಾಸಿಕ ಸಭೆಯಲ್ಲಿ ಆಯೋಜಿಸಲಾಗುತ್ತದೆ. ಶೌಚಾಲಯ ಅರಿವು ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಆಯೋಜಿಸಿದ್ದು, ಪ್ರತಿಯೊಬ್ಬರೂ ಶೌಚಾಲಯಗಳ ಬಳಕೆ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದರು.
ಆದಿಶಕ್ತಿ ಕಲಾ ತಂಡದವರಿಂದ ಶೌಚಾಲಯದ ಬಳಕೆಯ ಮಾಡುವ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಿ, ಅರಿವು ಮೂಡಿಸಲಾಯಿತು. ಪಾರ್ವತಿ ಜಗಲಿ, ಶಂಕರಗೌಡ ಪಾಟೀಲ, ಸಂಗಪ್ಪ ಬಿರಾದರ, ಸೇವಾ ಪ್ರತಿನಿಧಿಗಳು ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.ರಾಜೇಸಾಬ ಎಚ್.ಟಿ. ಸ್ವಾಗತಿಸಿದರು. ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸರೋಜಾ ಹಡಪದ ವಂದಿಸಿದರು.