ಧರ್ಮಸ್ಥಳ ಗ್ರಾಮ ಕೇಸ್‌: 15ನೇಪಾಯಿಂಟ್‌ನಲ್ಲಿ ಲಭಿಸದ ಕುರುಹು

KannadaprabhaNewsNetwork |  
Published : Aug 09, 2025, 12:00 AM ISTUpdated : Aug 09, 2025, 06:38 AM IST
ಕಥೆ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ದೂರುದಾರನ ಹೇಳಿಕೆಯಂತೆ, ನಿಗದಿತ 13ನೇ ಪಾಯಿಂಟ್ ಬದಲು ಹೊಸ ಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತು. ಆದರೆ, ಈ ಸ್ಥಳದಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

 ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ಸಾಕ್ಷಿ ದೂರುದಾರ ನೀಡಿರುವ ದೂರಿಗೆ ಸಂಬಂಧಿಸಿ ಶುಕ್ರವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಿತು. ದೂರುದಾರನ ಹೇಳಿಕೆಯಂತೆ, ನಿಗದಿತ 13ನೇ ಪಾಯಿಂಟ್ ಬದಲು ಹೊಸ ಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತು. ಆದರೆ, ಈ ಸ್ಥಳದಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಿಂದ 3 ಕಿ.ಮೀ. ಹಾಗೂ ಈ ಹಿಂದೆ ಶೋಧ ಕಾರ್ಯ ನಡೆದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆ ಗುಡ್ಡೆ ಪರಿಸರದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಬೊಳಿಯಾರು ಪ್ರದೇಶದ ಗೋಂಕ್ರತಾರ್ ಪರಿಸರದ ಮೀಸಲು ಅರಣ್ಯ ಭಾಗದಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಯಿತು. ಬುಧವಾರ ಬಂಗ್ಲೆಗುಡ್ಡೆ ಪರಿಸರದಲ್ಲಿ ಶೋಧ ನಡೆದ ಜಾಗವನ್ನು 14ನೇ ಸ್ಥಳ ಹಾಗೂ ಶುಕ್ರವಾರ ಬೊಳಿಯಾರು ಬಳಿ ಅರಣ್ಯದಲ್ಲಿ ಶೋಧ ನಡೆದ ಸ್ಥಳವನ್ನು 15ನೇ ಸ್ಥಳವೆಂದು ಗುರುತಿಸಲಾಗಿದೆ.

ಬೊಳಿಯಾರಿನಲ್ಲಿ ಶೋಧ ನಡೆದ ಸ್ಥಳವು ಉಜಿರೆ-ಕೊಕ್ಕಡ ಹೆದ್ದಾರಿ ಬದಿಯಿಂದ 500 ಮೀ. ದೂರದಲ್ಲಿದ್ದು, ಉಪ್ಪಿನ ಮೂಟೆ ಸಹಿತ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲಾಗಿತ್ತು.

ಬಹು ನಿರೀಕ್ಷಿತ, ಕ್ಲಿಷ್ಟಕರ ಸ್ಥಳದಲ್ಲಿರುವ 13ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಯದಿರುವುದು ಕುತೂಹಲ ಹೆಚ್ಚಿಸಿದೆ. ಇಲ್ಲಿ ಜಿಪಿಆರ್ ಬಳಸಿ ಬಳಿಕ ಶೋಧಕಾರ್ಯ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಬಾಕ್ಸ್...

ಮತ್ತೊಬ್ಬ ದೂರುದಾರಎಸ್‌ಐಟಿಗೆ ಹಾಜರು

ಧರ್ಮಸ್ಥಳ ಗ್ರಾಮದಲ್ಲಿ ಯಾವುದೇ ಮಹಜರು ನಡೆಸದೆ ಬಾಲಕಿಯೊಬ್ಬಳ ಶವವನ್ನು ಹಲವು ವರ್ಷಗಳ ಹಿಂದೆ ವಿಲೇವಾರಿ ಮಾಡಲಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿರುವ ಜಯಂತ ಟಿ. ಶುಕ್ರವಾರ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಎಸ್‌ಐಟಿ ಅಧಿಕಾರಿಗಳು ಇವರಿಂದ ಹೆಚ್ಚುವರಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.ಅನಾಮಿಕ ದೂರುದಾರನಿಗೆ ಎಸ್‌ಐಟಿ ಹೆಚ್ಚುವರಿ ಭದ್ರತೆ:

ಈ ಮಧ್ಯೆ, ಅನಾಮಿಕ ಸಾಕ್ಷಿ ದೂರುದಾರ ತನಗೆ ಹೆಚ್ಚುವರಿ ಭದ್ರತೆಯ ಅಗತ್ಯವಿದೆ ಎಂದು ಎಸ್‌ಐಟಿ ಮುಂದೆ ಬೇಡಿಕೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ, ಪೊಲೀಸ್‌ ಎಸ್ಕಾರ್ಟ್‌ನಲ್ಲಿ ಆತ ಎಸ್‌ಐಟಿ ಕಚೇರಿಗೆ ಆಗಮಿಸಿದ್ದ. ಜೊತೆಗೆ, ಬುಧವಾರ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಗ್ರಾಮದ ಆಯಕಟ್ಟಿನ ಸ್ಥಳ ಮತ್ತು ಶೋಧಕಾರ್ಯ ನಡೆಯುವ ಕಡೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿದೆ.ಎಸ್‌ಐಟಿಗೆ ಪೊಲೀಸ್‌ ಠಾಣೆಯ ಮಾನ್ಯತೆ:ದಶಕಗಳ ಹಿಂದೆ ಅನಧಿಕೃತವಾಗಿ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹೂತಿಟ್ಟಿದ್ದಾರೆ ಎನ್ನಲಾದ ಅಪರಿಚಿತ ಮೃತದೇಹಗಳ ಶೋಧನಾ ಕಾರ್ಯ ಮುಂದುವರಿದಿರುವ ನಡುವೆಯೇ ಪ್ರಕರಣದ ತನಿಖೆಗಿಳಿದಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪೊಲೀಸ್ ಠಾಣಾ ಮಾನ್ಯತೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಎಸ್ಐಟಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆ ಅಥವಾ ಮೇಲ್ಮಟ್ಟದ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್‌) 2023ರ ಕಲಂ 2 (1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿ ಎಂದು ಘೋಷಿಸಲಾಗಿದೆ. ಈ ಕಾಯ್ದೆಯನ್ವಯ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಅಧಿಸೂಚಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಒಳಾಡಳಿತ ಇಲಾಖೆಯ (ಅಪರಾಧಗಳು) ಎಸ್‌.ಅಂಬಿಕಾ ಆದೇಶಿಸಿದ್ದಾರೆ.

ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮುತ್ತ ನಡೆದಿದೆ ಎನ್ನಲಾಗಿರುವ ಅಪರಾಧ ಕೃತ್ಯಗಳು ಹಾಗೂ ಅನಧಿಕೃತ ಮೃತದೇಹಗಳ ಅಂತ್ಯಕ್ರಿಯೆ ಸಂಬಂಧ ಸಲ್ಲಿಕೆಯಾಗುವ ದೂರುಗಳನ್ವಯ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನು ಎಸ್‌ಐಟಿ ಪಡೆದಿದೆ. ಅಲ್ಲದೆ, ಪ್ರಕರಣದ ಕುರಿತು ತನಿಖೆ ನಡೆಸಿ ಆರೋಪಪಟ್ಟಿ ಅಥವಾ ಅಂತಿಮ ವರದಿ ಸಲ್ಲಿಸುವ ನಿರ್ಣಯದ ಅಧಿಕಾರವು ಎಸ್‌ಐಟಿ ಲಭಿಸಿದಂತಾಗಿದೆ. ಈವರೆಗೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿತ್ತು. ಇನ್ಮುಂದೆ ನೇರವಾಗಿಯೇ ದೂರು ದಾಖಲಿಸಿ ತನಿಖೆ ಕೈಗೆಕೊಳ್ಳುವ ಅವಕಾಶ ಎಸ್ಐಟಿಗೆ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪ ಪಟ್ಟಿಗಳಿಗೆ ಮಾನ್ಯತೆ:ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಅಧಿಕಾರವಿಲ್ಲದ ಕಾರಣಕ್ಕೆ ಸಿಸಿಬಿ ಸೇರಿ ಇತರೆ ವಿಭಾಗಗಳು ಸಲ್ಲಿಸಿದ್ದ ಆರೋಪಪಟ್ಟಿಗಳನ್ನು ನ್ಯಾಯಾಲಯವು ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಮುಂದೆ ಕಾನೂನು ತೊಡಕು ಎದುರಾಗದಂತೆ ಮುಂಜಾಗ್ರತೆವಹಿಸಿ ಎಸ್‌ಐಟಿಗೆ ಠಾಣಾ ಮಾನ್ಯತೆ ನೀಡಿದೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್