ಮಂಗಳೂರು/ ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಮಧೇಯ ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ರಾಜ್ಯ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಅನಾಮಿಕ ಮುಸುಕುಧಾರಿಯನ್ನು ಕೊನೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಬಂಧಿಸಿದೆ.
ಈತ ಸುಳ್ಳು ಹೇಳಿ ವಂಚಿಸಿರುವುದಕ್ಕೆ ಸಾಕ್ಷ್ಯ ಲಭಿಸಿದ ಬಳಿಕ ಸಕ್ಷಮ ಪ್ರಾಧಿಕಾರದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಪಡಿಸಿದ ನಂತರ ಈತನ ಹೆಸರನ್ನು ತನಿಖಾ ತಂಡ ಬಹಿರಂಗಗೊಳಿಸಿದೆ. ಮಂಡ್ಯ ಮೂಲದ ಸಿ.ಎನ್.ಚಿನ್ನಯ್ಯ (45) ಎಂಬಾತನೇ ತಲೆಬುರುಡೆ ಪ್ರಕರಣದ ಪಾತ್ರಧಾರಿ ಎಂಬುದು ಬಯಲಾಗಿದೆ. ಇದೇ ವೇಳೆ ಬಂಧಿತ ಚಿನ್ನಯ್ಯ ನೀಡಿದ ಮಾಹಿತಿಯಂತೆ ಆತನ ಅಣ್ಣ ತಾನಾಸಿಯನ್ನೂ ವಶಕ್ಕೆ ಪಡೆಯಲಾಗಿದೆ. ಚಿನ್ನಯ್ಯನಿಗೆ ಸಹಕರಿಸಿದ ಹಾಗೂ ಬುರುಡೆ ಪ್ರಹಸನಕ್ಕೆ ಸಂಚು ರೂಪಿಸಿದ ಸೂತ್ರಧಾರಿಗಳನ್ನು ಕೂಡ ತನಿಖಾ ತಂಡ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ.
ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಶನಿವಾರ ಬೆಳಗ್ಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಚಿನ್ನಯ್ಯನನ್ನು ನ್ಯಾಯಾಲಯ 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದೆ.
ನನ್ನ ಪುತ್ರಿ ಅನನ್ಯಾ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದವಳು ಕಾಣೆಯಾಗಿದ್ದಾರೆ ಎಂದು ಎಸ್‌ಐಟಿಗೆ ದೂರು ನೀಡಿದ್ದ ಸುಜಾತಾ ಭಟ್ ಎಂಬಾಕೆ ಆ.22 ರಂದು ಅನನ್ಯಾ ಭಟ್ ನನ್ನ ಮಗಳೇ ಇಲ್ಲ, ಇವೆಲ್ಲ ಸುಳ್ಳು ಎಂದು ಮಾಧ್ಯಮದ ಮುಂದೆ ತಪ್ಪೊಪ್ಪಿಗೆ ನೀಡಿದ ಬೆನ್ನಿಗೇ ಬುರುಡೆ ಆರೋಪದ ರಹಸ್ಯ ಬೇಧಿಸಲಾಗಿದೆ.
ಆ.22 ರಂದು ಬೆಳಗ್ಗೆಯಿಂದ ಆ.23 ರ ಮುಂಜಾನೆ 5 ಗಂಟೆ ವರೆಗೆ ಎಸ್‌ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಂತಿಯವರು ಅನಾಮಿಕನನ್ನು ತನಿಖೆಗೆ ಒಳಪಡಿಸಿದ್ದಾರೆ. ರಾತ್ರಿ ಇಡೀ ತನಿಖೆ ನಡೆಸಿದ ಬಳಿಕ ಶನಿವಾರ ನಸುಕಿನ ಜಾವ ಅನಾಮಿಕನ್ನು ಎಸ್‌ಐಟಿ ಕಚೇರಿಯಲ್ಲೇ ಪೊಲೀಸರು ವಶಕ್ಕೆ ತೆಗೆದುಕೊಂಡು ಬಂಧಿಸುವ ಪ್ರಕ್ರಿಯೆ ನಡೆಸಿದರು.
10 ದಿನ ಪೊಲೀಸ್ ಕಸ್ಟಡಿ:
ಎಸ್‌ಐಟಿ ಬಂಧನ ಬಳಿಕ ಬೆಳಗ್ಗೆ 10.30 ಕ್ಕೆ ಮುಸುಕುಧಾರಿ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ 11 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶ ವಿಜಯೇಂದ್ರ ಅವರು ಅನಾಮಿಕನನ್ನು 10 ದಿನಗಳ ಕಾಲ ಅಂದರೆ ಸೆ.3ರ ವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ನೀಡಿದರು. ಬಳಿಕ ಮತ್ತೆ ಆರೋಪಿ ಮುಸುಕುಧಾರಿಯನ್ನು ವೈದ್ಯಕೀಯ ತಪಾಸಣೆ ನಡೆಸಿ ಎಸ್‌ಐಟಿ ಸುಪರ್ದಿಗೆ ನ್ಯಾಯಾಲಯ ಹಸ್ತಾಂತರಿಸಿತು. ಬಾಕ್ಸ್‌ಗಳು---
ಕೋರ್ಟ್‌ನಲ್ಲಿ ಆರೋಪಿ ಹೇಳಿದ್ದೇನು?
ಎಸ್‌ಐಟಿ ಅಧಿಕಾರಿಗಳು ಆರೋಪಿ ಮುಸುಕುಧಾರಿ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಿದ ವೇಳೆ ತಲೆಬುರುಡೆ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗಿದೆ.
ನಾನು ಹೆಣಗಳನ್ನು ಹೂತಿರುವುದು ನಿಜ. ಆದರೆ ಹೂತ ಜಾಗದಲ್ಲಿ ಸಾಕ್ಷ್ಯಗಳು ಸಿಗದ ಬಗ್ಗೆ ಪೊಲೀಸರು ಕೋರ್ಟ್ ಮುಂದೆ ಹೇಳಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ವಶಕ್ಕೆ ಕೋರಿದ್ದಾಗಿ ಹೇಳಲಾಗಿದೆ.
ಎಸ್‌ಐಟಿ ಕಸ್ಟಡಿ ವೇಳೆ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ಗುರಿಪಡಿಸಲಿದ್ದಾರೆ. ಹೆಣ ಹೂತಿದ್ದು ಸತ್ಯ ಎಂದು ಹೇಳಿರುವುದರಿಂದ ಎಸ್‌ಐಟಿ ತನಿಖೆ ಹಾಗೂ ಕೋರ್ಟ್ ಮುಂದೆ ಆತನ ಜೊತೆಗಿದ್ದವರನ್ನೂ ಕರೆದು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ. ಇದರ ಮೊದಲ ಹಂತವಾಗಿ ಆರೋಪಿ ಚಿನ್ನಯ್ಯನ ಅಣ್ಣ ತಾನಾಸಿಯನ್ನು ಆತ ಕೆಲಸ ಮಾಡುವ ಸ್ಥಳದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅನಾಮಿಕನ ಹೆಸರು ಬಹಿರಂಗಪಡಿಸಿದ ಎಸ್‌ಐಟಿ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ ಮುಸುಕುಧಾರಿಯ ಹೆಸರನ್ನು ಕೊನೆಗೂ ಎಸ್‌ಐಟಿ ಬಹಿರಂಗಪಡಿಸಿದೆ.
ನಾನೊಬ್ಬ ಸಾಕ್ಷಿದಾರ ಎಂದು ಮುಸುಕುಧಾರಿ ದೂರು ನೀಡಿದ ಕಾರಣ ಆತನಿಗೆ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರು ರಕ್ಷಣೆ ಒದಗಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಆತ ಹೇಳಿದಂತೆ ತಲೆಬುರುಡೆ ಪತ್ತೆ ಕಾರ್ಯ ನಡೆಸಿದರೂ ಸಾಕ್ಷ್ಯ ನೀಡುವಲ್ಲಿ ವಿಫಲನಾದ ಬಳಿಕ ಎಸ್‌ಐಟಿ ತಂಡ ಆತನನ್ನು ಇಡೀ ದಿನ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆತ ನೀಡಿದ ಮಾಹಿತಿಯನ್ನು ಆಧರಿಸಿ ಸಕ್ಷಮ ಪ್ರಾಧಿಕಾರಕ್ಕೆ ಎಸ್‌ಐಟಿ ಅಧಿಕಾರಿಗಳು ಮನವಿ ಸಲ್ಲಿಸಿ, ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದರು. ಈ ಬಗ್ಗೆ ಸಾಕ್ಷ್ಯವನ್ನು ಪರಿಶೀಲಿಸಿದ ಬಳಿಕ ಸಕ್ಷಮ ಪ್ರಾಧಿಕಾರವು ಆತನ ಸಾಕ್ಷ್ಯಸಂರಕ್ಷಣೆಯನ್ನು ರದ್ದುಪಡಿಸಿತ್ತು. ಬಳಿಕವೇ ಮುಂಜಾನೆ ಆರೋಪಿ ಮುಸುಕಧಾರಿಯನ್ನು ಬಂಧಿಸಿದ ತಂಡ ಆತನ ಹೆಸರು ಹಾಗೂ ಮೂಲವನ್ನು ಬಹಿರಂಗಪಡಿಸಿತು.
ದೂರುದಾರ, ಆರೋಪಿ ಮುಸುಕುಧಾರಿ ಮಂಡ್ಯ ಮೂಲದ ಚಿಕ್ಕಬಳ್ಳಿ ನಿವಾಸಿ ನಂಜಯ್ಯ ಅವರ ಪುತ್ರ ಚಿನ್ನಯ್ಯ ಸಿ.ಎನ್. ಈತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಾಸಂಗ ಪ್ರಮಾಣ ಪತ್ರ ಎಸ್‌ಐಟಿ ತಂಡ ಪಡೆದುಕೊಂಡಿದೆ. ಈತ 16.06.1980 ರಲ್ಲಿ ಜನಿಸಿದ್ದು, 1987 ರಲ್ಲಿ ಶಾಲೆಗೆ ದಾಖಲಾಗಿ 1995 ರಲ್ಲಿ ಶಾಲೆ ಬಿಟ್ಟ ಬಗ್ಗೆ ದಾಖಲೆ ದೊರೆತಿದೆ.
ಮತ್ತೆ ಠಾಣೆಗೆ ಹಾಜರಾದ ಮಟ್ಟಣ್ಣವರ್
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕೇಸು ದಾಖಲಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಶನಿವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು.
ಆರೋಪಿ ಚಿನ್ನಯ್ಯ ಬಂಧನವಾಗುತ್ತಲೇ ಗಿರೀಶ್ ಮಟ್ಟಣ್ಣ, ಜಯಂತ್ ಟಿ., ಯೂಟ್ಯೂಬರ್ ಸಮೀರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಗಿರೀಶ್ ಮಟ್ಟಣ್ಣವರ್ ಬೆಳಗ್ಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಳಿಕ ವಿಚಾರಣೆ ಎದುರಿಸಿದ್ದಾರೆ. ಕೇಸು ದಾಖಲಾದ ದಿನ ಶುಕ್ರವಾರವೇ ಗಿರೀಶ್ ಮಟ್ಟಣ್ಣವರ್ ಬೆಳ್ತಂಗಡಿ ಠಾಣೆಗೆ ತಾನೇ ಸ್ವತಃ ಆಗಮಿಸಿ ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಕೇಸು ದಾಖಲು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಠಾಣೆಗೆ ಕರೆಸಿ ವಿಚಾರಣೆ ನಡೆಸುವುದಾಗಿ ಹೇಳಿ ಪೊಲೀಸರು ವಾಪಸ್ ಕಳುಹಿಸಿದ್ದರು.