ಧರ್ಮಸ್ಥಳ ಗ್ರಾಮ : ತನಿಖೆಗೆ ವಿದೇಶಿ ಟೆಕ್ನಾಲಜಿ ಬಳಕೆ?

KannadaprabhaNewsNetwork |  
Published : Aug 16, 2025, 12:00 AM ISTUpdated : Aug 16, 2025, 10:46 AM IST
Dharmasthala Controversy

ಸಾರಾಂಶ

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಅನಧಿಕೃತವಾಗಿ ಹೂತಿಟ್ಟಿರುವ ಆರೋಪದ ಮೇರೆಗೆ ನಡೆಸಿದ ಗುಂಡಿ ಅಗೆಯುವ ಕಾರ್ಯಾಚರಣೆ ವೇಳೆ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೂಳೆಗಳ ‘ರಹಸ್ಯ’ ಭೇದಿಸಲು ವಿದೇಶಿ ಮಾದರಿಯ ಮೂರು ಮಹತ್ವದ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಚಿಂತನೆ ನಡೆಸಿದೆ.

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು :  ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಅನಧಿಕೃತವಾಗಿ ಹೂತಿಟ್ಟಿರುವ ಆರೋಪದ ಮೇರೆಗೆ ನಡೆಸಿದ ಗುಂಡಿ ಅಗೆಯುವ ಕಾರ್ಯಾಚರಣೆ ವೇಳೆ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೂಳೆಗಳ ‘ರಹಸ್ಯ’ ಭೇದಿಸಲು ವಿದೇಶಿ ಮಾದರಿಯ ಮೂರು ಮಹತ್ವದ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಚಿಂತನೆ ನಡೆಸಿದೆ.

ಇವು ಅಸ್ಪಾರ್ಟಿಕ್ ಅಮಿನೋ ಆ್ಯಸಿಡ್ ರೆಸಮೈಜಸನ್‌, ಇನ್ಫ್ರಾರೆಡ್‌ ಸ್ಪೆಕ್ಟ್ರೋಸ್ಕೋಫಿ ಹಾಗೂ ರಾಮನ್‌ ಸ್ಪೆಕ್ಟ್ರೋಸ್ಕೋಫಿ ಪರೀಕ್ಷೆಗಳಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣ ಸಂಬಂಧ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ವಿದೇಶದ ವಿಧಿ ವಿಜ್ಞಾನ ಪ್ರಯೋಗಾಲದ ತಜ್ಞರ ನೆರವು ಪಡೆಯುವ ಬಗ್ಗೆ ಉನ್ನತ ಮಟ್ಟದಲ್ಲಿ ಎಸ್‌ಐಟಿ ಚರ್ಚಿಸಿದ್ದು, ಈ ಮೂರೂ ಮಾದರಿಯ ಪರೀಕ್ಷೆಗೆ ರಾಜ್ಯದ ಎಫ್‌ಎಸ್‌ಎಲ್ ತಜ್ಞರೇ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳ ಮಣ್ಣು ಮಾಡಿದ ಪ್ರಕರಣ ಸಂಬಂಧ ದೂರುದಾರನ ಮಾಹಿತಿ ಮೇರೆಗೆ ಹಲವೆಡೆ ಗುಂಡಿಗಳನ್ನು ಅಗೆಯಲಾಗಿತ್ತು. ಆಗ ನೇತ್ರಾವತಿ ಸ್ನಾನಘಟ್ಟದ ಸನಿಹದ 6ನೇ ಪಾಯಿಂಟ್‌ನಲ್ಲಿ 14 ಮೂಳೆಗಳು ಪತ್ತೆಯಾಗಿದ್ದವು. ಮರಣೋತ್ತರ ಪರೀಕ್ಷೆ (ಎಫ್‌ಎಸ್‌ಎಲ್‌)ಯಲ್ಲಿ ಇವು ಪುರುಷನಿಗೆ ಸೇರಿದ ಮೂಳೆಗಳಾಗಿವೆ ಎಂದು ಖಚಿತವಾಯಿತು. ಆದರೆ ಹೂತು ಹಾಕಿದ್ದು ಯಾವಾಗ ಎಂಬ ಸಮಯದ ಸ್ಪಷ್ಟನೆ ಮರಣೋತ್ತರ ಪರೀಕ್ಷೆಯಲ್ಲಿ ಸಿಗಲಿಲ್ಲ. ಹೀಗಾಗಿ ಎಫ್‌ಎಸ್‌ಎಲ್‌ ತಜ್ಞರ ಸಲಹೆ ಮೇರೆಗೆ ವಿದೇಶದಲ್ಲಿ ಚಾಲ್ತಿಯಲ್ಲಿರುವ ಮೂರು ಮಾದರಿಯ ಪರೀಕ್ಷೆಗೆ ಚಿಂತನೆ ನಡೆದಿದೆ ಎಂದು ವಿಶ್ವಸನೀಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಎಎಆರ್‌, ಐಆರ್‌ಎಸ್ ಹಾಗೂ ಆರ್‌ಎಸ್‌ ಪರೀಕ್ಷೆಗಳಿಂದ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅಂಶಗಳನ್ನು ಆಧರಿಸಿ ಆ ಮೃತದೇಹ ಯಾವಾಗ ಹೂತು ಹಾಕಲಾಯಿತು ಹಾಗೂ ಆ ವ್ಯಕ್ತಿ ಮೃತಪಟ್ಟಿದ್ದು ಯಾವಾಗ ಎಂಬುದು ಗೊತ್ತಾಗಲಿದೆ. ಇಂಥ ಪರೀಕ್ಷೆಗಳು ಈವರೆಗೆ ಕರ್ನಾಟಕ ಮಾತ್ರವಲ್ಲ, ಭಾರತದಲ್ಲೇ ನಡೆದಿಲ್ಲ. ಆದರೆ ಮೂರೂ ಪರೀಕ್ಷೆಗಳ ಕುರಿತು ಮಾಹಿತಿ ಕಲೆ ಹಾಕಿದಾಗ ಸಂಶೋಧನಾ ಪ್ರಬಂಧಗಳು ಸಿಕ್ಕಿವೆ. ಇವುಗಳನ್ನು ಅಧ್ಯಯನ ನಡೆಸಿದಾಗ ವಿದೇಶದಲ್ಲಿ ಕೆಲ ಸವಾಲಿನ ನಿಗೂಢ ಕೊಲೆ ಪ್ರಕರಣಗಳಲ್ಲಿ ಈ ಮಾದರಿಯ ಪರೀಕ್ಷೆ ನಡೆದಿರುವುದು ತಿಳಿಯಿತು ಎಂದು ಮೂಲಗಳು ವಿವರಿಸಿವೆ.

ಯಾಕೆ ಮೂಳೆಗಳ ಪರೀಕ್ಷೆ?:

ಈ ಪ್ರಕರಣದ ದೂರುದಾರ 1995 ರಿಂದ 2014ರ ಅ‍ವಧಿಯಲ್ಲಿ ನೂರಾರು ಅಪರಿಚಿತ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಆದರೆ ಆತನ ಹೇಳಿಕೆಗೆ ಪೂರಕವಾಗಿ ಈವರೆಗೆ 6ನೇ ಪಾಯಿಂಟ್ ಹೊರತುಪಡಿಸಿ ಇನ್ನುಳಿದೆಡೆ ಯಾವುದೇ ಅಸ್ಥಿಪಂಜರಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 6ನೇ ಪಾಯಿಂಟ್‌ನಲ್ಲಿ ಪತ್ತೆಯಾದ ಮೂಳೆಗಳು ದೂರುದಾರನ ಹೇಳಿಕೆಯ ಸತ್ಯಾಸತ್ಯತೆಗೆ ಪ್ರಮುಖ ಪುರಾವೆಯಾಗಿವೆ. ಹೀಗಾಗಿ ಆ ಮೃತ ದೇಹ ಸಾವಿನ ಸಮಯದ ಖಚಿತತೆಗೆ ವೈಜ್ಞಾನಿಕ ಪರೀಕ್ಷೆ ನಡೆಸಲು ಎಸ್‌ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ