ಧಾರವಾಡ: 5 ವರ್ಷದಲ್ಲಿ 314 ಜನ ರೈತರ ಆತ್ಮಹತ್ಯೆ!

KannadaprabhaNewsNetwork |  
Published : Jul 15, 2025, 01:01 AM IST
ಆತ್ಮಹತ್ಯೆ | Kannada Prabha

ಸಾರಾಂಶ

2020-21ರಲ್ಲಿ 64, 2021-22ರಲ್ಲಿ 55, 2022-23ರಲ್ಲಿ 64, 2023-24ರಲ್ಲಿ 79 ಹಾಗೂ 2024-25ರಲ್ಲಿ 52 ಒಟ್ಟು 314 ಜನ ರೈತರು ಸಾಲದ ಬಾಧೆಯಿಂದಲೇ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನೂ ಕೊಡಲಾಗಿದೆ. ಆದರೆ, ಏಪ್ರಿಲ್‌ನಿಂದ ಈವರೆಗೆ ದಾಖಲಾಗಿರುವ 11 ಪ್ರಕರಣಗಳನ್ನು ಈವರೆಗೂ ಪರಿಶೀಲನೆ ಮಾಡುವ ಗೋಜಿಗೆ ಉಪವಿಭಾಗಾಧಿಕಾರಿಗಳ ಕಮಿಟಿ ಹೋಗಿಲ್ಲ ಎಂಬ ಆಕ್ರೋಶ ರೈತ ವರ್ಗದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ದಿನೇ ದಿನೇ ರೈತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕುಂದಗೋಳ ತಾಲೂಕಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಜಿಲ್ಲಾಡಳಿತವನ್ನೇ ಕಂಗೆಡೆಸಿದೆ. ಇನ್ನು 5 ವರ್ಷದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 314 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ತಲ್ಲಣಗೊಳಿಸುವಂತಾಗಿದೆ.

ಕುಂದಗೋಳ ತಾಲೂಕಲ್ಲಿ ಇಬ್ಬರು ರೈತರು ಒಂದೇ ದಿನ (ಜು.11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದು ಆಗಿದೆ. ಜತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೇ, ತಮ್ಮ ಲಾಡ್‌ ಫೌಂಡೇಷನ್‌ನಿಂದ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಸಾಲವನ್ನು ಭರಿಸುವ ಭರವಸೆಯನ್ನೂ ನೀಡಿದ್ದಾರೆ.

11 ಜನ ಆತ್ಮಹತ್ಯೆ: ಈ ನಡುವೆ ಏಪ್ರಿಲ್‌ 1ರಿಂದ ಈವರೆಗೆ (ಮೂರುವರೆ ತಿಂಗಳಲ್ಲಿ) ಬರೋಬ್ಬರಿ 11 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ರೈತರೇ ಆಗಿದ್ದು, ಆದರೆ, ಇದು ಸಾಲ ಬಾಧೆಯಿಂದ ಆಗಿರುವಂತಹದ್ದೋ ಅಲ್ವೋ ಎಂಬುದು ಇನ್ನು ನಿರ್ಧಾರವಾಗಿಲ್ಲ. ಸಾಲಬಾಧೆಯಿಂದ ಆತ್ಮಹತ್ಯೆಯಾಗಿದ್ದರೆ ಮಾತ್ರ ರೈತ ಆತ್ಮಹತ್ಯೆ ಎಂದು ನಿರ್ಧರಿಸುವ ಗೋಜಿಗೆ ಉಪವಿಭಾಗಾಧಿಕಾರಿಗಳ ನೇತೃತ್ವದ ಕಮಿಟಿ ಇನ್ನು ಹೋಗಿಲ್ಲ. ಹೀಗಾಗಿ ಏಪ್ರಿಲ್‌ನಿಂದ ಈವರೆಗೆ ಆತ್ಮಹತ್ಯೆ ಮಾಡಿಕೊಂಡವರಿಗೆ ಈವರೆಗೂ ಸರ್ಕಾರದಿಂದ ಕೊಡಬೇಕಿರುವ ಪರಿಹಾರ ಸಿಕ್ಕಿಲ್ಲ. ಆದರೆ, ಕುಟುಂಬಸ್ಥರು ಮಾತ್ರ ಸಾಲದ ಬಾಧೆಯಿಂದ ಆತ್ಮಹತ್ಯೆ ಎಂದು ಕೇಸ್‌ ದಾಖಲಿಸಿದ್ದಾರೆ. ಆದಷ್ಟು ಬೇಗನೆ ಕಮಿಟಿ ಪರಿಶೀಲನೆ ನಡೆಸಿ ರೈತ ಆತ್ಮಹತ್ಯೆ ಎಂದು ಘೋಷಿಸಿ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ವರ್ಗ ಆಗ್ರಹಿಸಿದೆ.

5 ವರ್ಷದಲ್ಲಿ ಎಷ್ಟು?: 2020-21ರಲ್ಲಿ 64, 2021-22ರಲ್ಲಿ 55, 2022-23ರಲ್ಲಿ 64, 2023-24ರಲ್ಲಿ 79 ಹಾಗೂ 2024-25ರಲ್ಲಿ 52 ಒಟ್ಟು 314 ಜನ ರೈತರು ಸಾಲದ ಬಾಧೆಯಿಂದಲೇ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನೂ ಕೊಡಲಾಗಿದೆ. ಆದರೆ, ಏಪ್ರಿಲ್‌ನಿಂದ ಈವರೆಗೆ ದಾಖಲಾಗಿರುವ 11 ಪ್ರಕರಣಗಳನ್ನು ಈವರೆಗೂ ಪರಿಶೀಲನೆ ಮಾಡುವ ಗೋಜಿಗೆ ಉಪವಿಭಾಗಾಧಿಕಾರಿಗಳ ಕಮಿಟಿ ಹೋಗಿಲ್ಲ ಎಂಬ ಆಕ್ರೋಶ ರೈತ ವರ್ಗದ್ದು.

ಬರೀ ಎಚ್ಚರಿಕೆ ಅಷ್ಟೇ?: ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವರೋ, ಜಿಲ್ಲಾಡಳಿತವು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ ಸಾಲ ವಸೂಲಿಗೆ ಒತ್ತಡ ಹೇರಬೇಡಿ. ಒತ್ತಾಯದ ವಸೂಲಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ. ಆದರೆ, ಇದು ಬರೀ ಎಚ್ಚರಿಕೆಗಷ್ಟೇ ಸೀಮಿತವಾಗಿರುತ್ತದೆ. ಸಭೆಯ ಮರುದಿನದಿಂದಲೇ ಬ್ಯಾಂಕ್‌ ಸಿಬ್ಬಂದಿ ವಸೂಲಿಗಿಳಿಯುತ್ತಾರೆ. ಯಾವ ಬ್ಯಾಂಕಿನ ಮೇಲೂ ಸರ್ಕಾರ ಈವರೆಗೂ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಬರೀ ಸಭೆಗಷ್ಟೇ ಸೀಮಿತವಾಗದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತಸಮುದಾಯ ಆಗ್ರಹಿಸುತ್ತದೆ.

ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಪ್ರಜ್ಞಾವಂತರಲ್ಲಿ ಆತಂಕವನ್ನುಂಟು ಮಾಡಿರುವುದಂತೂ ಸತ್ಯ. ರೈತ ಆತ್ಮಹತ್ಯೆ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಏಪ್ರಿಲ್‌ನಿಂದ ಈವರೆಗೆ 11 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಆದರೆ, ಅವು ರೈತ ಆತ್ಮಹತ್ಯೆ ಹೌದೋ ಅಲ್ವೋ ಎಂಬುದನ್ನು ಉಪವಿಭಾಗಾಧಿಕಾರಿಗಳ ನೇತೃತ್ವದ ಕಮಿಟಿ ಇನ್ನೂ ನಿರ್ಧರಿಸಿಲ್ಲ ಎಂದು ಧಾರವಾಡದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.

5 ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲೇ 314 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದು ಆತಂಕದ ವಿಷಯ. ಸರ್ಕಾರ ಬ್ಯಾಂಕ್‌ಗಳಿಗೆ ಬರೀ ಎಚ್ಚರಿಕೆ ಕೊಟ್ಟರೆ ಸಾಲದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಏಪ್ರಿಲ್‌ನಿಂದ ಈವರೆಗೆ ವರದಿಯಾಗಿರುವ 11 ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ರೈತಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ