ಶಿವಾನಂದ ಅಂಗಡಿಹುಬ್ಬಳ್ಳಿ: ಉತ್ತರ ಕರ್ನಾಟಕದ ರೈತರ ಹಬ್ಬವೆಂದೇ ಹೆಸರು ವಾಸಿಯಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳಕ್ಕೆ (ಸೆ.13-16)ಕ್ಕೆ ದಿನಗಣನೆ ಆರಂಭವಾಗಿದ್ದು, ಮೇಳದಲ್ಲಿ ಪ್ರತಿವರ್ಷದಂತೆ ಬಿತ್ತನೆ ಬೀಜಗಳ ಮಾರಾಟದ ಜತೆಗೆ ನಾಲ್ಕು ದಿನ ಮೊದಲೇ ಸೆ. 10ರಿಂದ (ಬುಧವಾರ) ಕಡಲೆ ಬೀಜಗಳ ಮಾರಾಟಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಮೇಳದ ಸಂದರ್ಭದಲ್ಲಿ ನೂಕುನುಗ್ಗಲು ಹೆಚ್ಚಾಗುತ್ತಿದ್ದು, ನಮಗೆ ಪೂರೈಕೆ ಮಾಡಲು ಬಹಳ ಕಷ್ಟವಾಗುತ್ತಿದೆ. ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಕೃಷಿ ವಿವಿ ಆವರಣದಲ್ಲಿ ವಾಹನಗಳನ್ನು ಬಿಡುವುದಿಲ್ಲ. ಕ್ವಿಂಟಲ್‌ಗಟ್ಟಲೇ ಭಾರದ ಬೀಜಗಳ ಮೂಟೆಯನ್ನು ರೈತರು ತಲೆ ಮೇಲೆ ಹೊತ್ತುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ಈ ಬಾರಿ ಸೆ. 10ರಿಂದಲೇ 25 ಕಿಲೋ ತೂಕದ ಕಡಲೆ ಬೀಜಗಳ ವಿತರಣೆ ಆರಂಭಿಸುತ್ತೇವೆ. ಫೋನ್ ಮಾಡಿದ ರೈತರಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಿದ್ದೇವೆ ಎನ್ನುತ್ತಾರೆ ಕೃಷಿ ವಿವಿ ಬೀಜ ಘಟಕದ ಅಧಿಕಾರಿಗಳು.ಮೊದಲ ದಿನದಂದಲೇ ಮೇಳದಲ್ಲಿ ಬೀಜ ಮಾರಾಟ ಆರಂಭವಾಗುತ್ತದೆ. ನಾವಷ್ಟೇ ಅಲ್ಲ, ಕರ್ನಾಟಕ ಸ್ಟೇಟ್ ಸೀಡ್ಸ್ ಕಾರ್ಪೊರೇಶನ್, ನ್ಯಾಶನಲ್ ಸೀಡ್ಸ್ ಕಾರ್ಪೊರೇಶನ್, ನ್ಯಾಶನಲ್ ಆರ್ಟಿಕಲ್ಚರ್ ರಿಸರ್ಚ್ ಫೌಂಡೇಶನ್ ಸೇರಿ ಎಲ್ಲ ಕೃಷಿ ವಿವಿಗಳವರು ಬಿತ್ತನೆ ಬೀಜಗಳನ್ನು ಸ್ಟಾಲ್‌ಗಳಲ್ಲಿ ಮಾರಾಟ ಮಾಡುತ್ತಾರೆ. ಈ ಬಾರಿ ಕಡಲೆ ಉತ್ಪಾದನೆಯೂ ಜಾಸ್ತಿಯಾಗಿದ್ದು, ನಮ್ಮಲ್ಲಿ ಬೀಜಗಳ ಸ್ಟಾಕ್ ಇದೆ ಎಂದು ಹೇಳಿದರು.
ದುಪ್ಪಟ್ಟು ಕಡಲೆ ಬೀಜ: ಕಳೆದ ಬಾರಿ (2024) ಮೇಳದಲ್ಲಿ 1906.76 ಕ್ವಿಂಟಲ್ ಬಿತ್ತನೆ ಬೀಜಗಳ ಮಾರಾಟವಾಗಿತ್ತು. ಈ ಬಾರಿ 3431.04 ಕ್ವಿಂಟಲ್ ಬೀಜಗಳ ಮಾರಾಟಕ್ಕೆ ಕೃಷಿ ವಿವಿ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿ ವಿತರಿಸಿದ ಬೀಜಗಳ ಪೈಕಿ ಈ ಬಾರಿ ಉದ್ದು ಮತ್ತು ಸೂರ್ಯಪಾನ ಬೀಜಗಳ ವಿತರಿಸುತ್ತಿಲ್ಲ. 1200 ಕ್ವಿಂಟಲ್ ಕಡಲೆ ಬೀಜ ಕಳೆದ ಬಾರಿ ಮಾರಾಟವಾಗಿತ್ತು. ಈ ಬಾರಿ 2529 ಕ್ವಿಂಟಲ್ ಕಡಲೆ ಬೀಜ ಮಾರಾಟಕ್ಕೆ ಅಧಿಕಾರಿಗಳ ಸಿದ್ಧ ಮಾಡಿದ್ದಾರೆ.ಅಕ್ಟೋಬರ್ ಕೊನೆ ವಾರ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಉತ್ತರ ಕರ್ನಾಟಕದಲ್ಲಿ ಗೋದಿ, ಕಡಲೆ, ಜೋಳ, ಕುಸುಬೆ ಬಿತ್ತನೆ ಮಾಡುತ್ತಾರೆ. ಹೀಗಾಗಿ ಹೊಸ ತಳಿಯ ಬೀಜಗಳನ್ನು ಕೃಷಿ ಮೇಳದಲ್ಲಿ ಖರೀದಿಸುವುದು ವಿಶೇಷ.
ಕೃಷಿಮೇಳದಲ್ಲಿ ಬೀಜ ಖರೀದಿಗೆ ಯಾವುದೇ ಸಬ್ಸಿಡಿ ವ್ಯವಸ್ಥೆ ಇರುವುದಿಲ್ಲ. ನಿಗದಿಪಡಿಸಿದ ಪೂರ್ಣ ದರ ನೀಡಿ ಬೀಜ ಖರೀದಿಸಬೇಕು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಖರೀದಿಸಿ ಬೆಳೆ ಬಂದ ಮೇಲೆ ಅದೇ ಬೀಜಗಳನ್ನು ಮುಂದಿನ ವರ್ಷ ಕಾದಿರಿಸಿಕೊಳ್ಳುತ್ತೇವೆ. ಕೃಷಿ ವಿವಿಯ ಬೀಜಗಳು ರೈತ ಸಂಪರ್ಕ ಕೇಂದ್ರಕ್ಕೆ ವರ್ಷದ ನಂತರ ಬರುತ್ತವೆ. ಆಗ ಹೆಚ್ಚಿನ ಪ್ರಮಾಣದಲ್ಲಿ ರೈತರು ಖರೀದಿಸುತ್ತೇವೆ ಎನ್ನುತ್ತಾರೆ ರೈತರು.ಹಿಂಗಾರಿ ಬಿತ್ತನೆಗಾಗಿ ಬೀಜಗಳನ್ನು ಖರೀದಿಸಲು ಕೃಷಿಮೇಳಕ್ಕೆ ಲಕ್ಷಾಂತರ ರೈತರು ಬರುತ್ತಾರೆ. ಹೀಗಾಗಿ ಮೇಳದಲ್ಲಿ ಸಿಕ್ಕಾಪಟ್ಟೆ ನೂಕುನುಗ್ಗಲು ಉಂಟಾಗುತ್ತದೆ. ರೈತ ಸಂಪರ್ಕ ಕೇಂದ್ರಗಳಂತೆ ಇಲ್ಲಿ ಬೀಜಗಳಿಗೆ ಸಬ್ಸಿಡಿ ಇರುವುದಿಲ್ಲ. ಆದರೂ ಬೀಜ ಮಾರಾಟದ ಸ್ಟಾಲ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ರೈತರು ಖರೀದಿಸುತ್ತಾರೆ ಎಂದು ಧಾರವಾಡ ಕೃಷಿ ವಿವಿ (ಬೀಜ) ವಿಶೇಷ ಅಧಿಕಾರಿ ಶಶಿಧರ ಹೇಳಿದರು.25 ವರ್ಷದಿಂದ ಧಾರವಾಡ ಕೃಷಿಮೇಳಕ್ಕೆ ಬರುತ್ತಿದ್ದೇವೆ. ಪ್ರತಿ ವರ್ಷ ಮೇಳದಲ್ಲಿ ಹೊಸ ತಳಿಯ ಜೋಳ, ಗೋದಿ, ಕುಸುಬೆ, ಕಡಲೆ ಬೀಜ ಖರೀದಿಸುತ್ತಿದ್ದು, ಅಲ್ಲಿ ಖರೀದಿಸಿದ ಬಿಜಿಡಿ-111-1 ತಳಿಯ ಕಡಲೆ ಬೀಜವನ್ನೇ ಎರಡು ವರ್ಷದಿಂದ ಬಿತ್ತನೆ ಮಾಡುತ್ತಿದ್ದು, ಎಕರೆಗೆ ಒಣಬೇಸಾಯದಲ್ಲೇ 5ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಕಾಯಿ ಒಣಗಿದ ಮೇಲೆ ಕೆಳಗೆ ಬೀಳದಿರುವುದು ಇದರ ವಿಶೇಷ ಎಂದು ಗದಗ ತಾಲೂಕು ಲಿಂಗದಾಳ ಗ್ರಾಮದ ರೈತ ಅನಿಲ ನವಲಗುಂದ ಹೇಳಿದರು.ಬೀಜದ ಹೆಸರು 2024ರಲ್ಲಿ ವಿತರಣೆ ಈ ಬಾರಿ ಮಾರಾಟಕ್ಕೆ ಲಭ್ಯ (ಕ್ವಿಂ)
ಜೋಳ349.40228.44ಗೋದಿ103.70557.00
ಕಡಲೆ1200.002529.00ಕುಸುಬೆ62.3093.60
ಉದ್ದು0.600.00ಅಲಸಂದೆ187.9020.00
ತರಕಾರಿ2.263.00ಸೂರ್ಯಪಾನ0.600.00
ಒಟ್ಟು1906.763431.04