ಬಸವರಾಜ ಹಿರೇಮಠ
ಧಾರವಾಡ: ಇಡೀ ಕರ್ನಾಟಕದಲ್ಲಿ ಮೈಸೂರು ಹೊರತು ಪಡಿಸಿ ಧಾರವಾಡ ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ದಕ್ಷಿಣ ಭಾಗದ ಮೈಸೂರಿನಂತೆ ಉತ್ತರ ಭಾಗದ ಧಾರವಾಡ ಸಹ ಸಾಂಸ್ಕೃತಿಕವಾಗಿ ಮಾನ್ಯತೆ ಪಡೆಯಲು ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಾದರೂ ಅನುದಾನದ ಭಾಗ್ಯ ಒದಗಿಸಬೇಕಾದ ಅನಿವಾರ್ಯತೆ ಇದೆ.ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಖ್ಯಾತನಾಮರಾದ ಮಲ್ಲಿಕಾರ್ಜನ ಮನಸೂರ, ಬಸವರಾಜ ರಾಜಗುರು, ಡಿ.ವಿ. ಹಾಲಬಾವಿ, ಆಲೂರು ವೆಂಕಟಾವ್, ಡಾ. ದ.ರಾ. ಬೇಂದ್ರೆ ಹೆಸರಿನ ಐದಾರು ರಾಷ್ಟ್ರೀಯ ಟ್ರಸ್ಟ್‌ಗಳು, ರಂಗಾಯಣ, ಸರ್ಕಾರಿ ಆರ್ಟ್ ಗ್ಯಾಲರಿ ಹಾಗೂ ಕವಿವಿ, ಕೃಷಿ ವಿವಿ, ಕಾನೂನು ವಿಶ್ವವಿದ್ಯಾಲಯಗಳೂ ಇವೆ. ಇವುಗಳ ಜೊತೆಗೆ ಹತ್ತಾರು ಸರ್ಕಾರೇತರ ಸಂಘ-ಸಂಸ್ಥೆಗಳೂ ಧಾರವಾಡ ಜಿಲ್ಲೆಯನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಶ್ರೀಮಂತಗೊಳಿಸಿವೆ. ಆದರೆ, ಇವುಗಳು ನಿರ್ದಿಷ್ಟವಾಗಿ ಕಾರ್ಯ ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಅನುದಾನದ ಕೊರತೆ ಅನುಭವಿಸುತ್ತಿವೆ.
ಹಾಳು ಬಿದ್ದ ಗಂಗಜ್ಜಿ ಮನೆಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮಸ್ಥಳ ಇಲ್ಲಿಯ ಶುಕ್ರವಾರ ಪೇಟೆಯ ಮನೆ ಎಂಟತ್ತು ವರ್ಷಗಳಿಂದ ಹಾಳು ಬಿದ್ದಿದ್ದು, ಇನ್ನೂ ಸುಧಾರಣೆಯಾಗುತ್ತಿಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನದೆ ಬೇಡಿಕೆಗೆ ಸ್ಪಂದನೆಯೇ ಸಿಗುವುದಿಲ್ಲ. ಸಂಗೀತ, ನೃತ್ಯ, ನಾಟಕದಂತಹ ಕಲೆಗಳ ಪ್ರದರ್ಶನಕ್ಕೆ ಧಾರವಾಡದ ಕಲಾಭವನ ಸಹ ಎಂಟತ್ತು ವರ್ಷಗಳಿಂದ ಪಾಳು ಬಿದ್ದಿದೆ. ಬಯಲು ರಂಗಮಂದಿರ, ಆಲೂರು ವೆಂಕಟರಾವ್ ಭವನಗಳು ಬೆಳಕು ಹಾಗೂ ಇನ್ನಿತರೆ ತಾಂತ್ರಿಕ ಕಾರಣಗಳಿಂದ ಸುಸಜ್ಜಿತವಾಗಿಲ್ಲ. ಅನಿವಾರ್ಯವಾಗಿ ಸೃಜನಾ ಮಂದಿರಕ್ಕೆ ದಿನಕ್ಕೆ₹20 ಸಾವಿರ ಬಾಡಿಗೆ ನೀಡಿ ಕಲಾ ಪ್ರದರ್ಶನ ಮಾಡುವ ಸ್ಥಿತಿ ಧಾರವಾಡ ಕಲಾವಿದರಿಗಿದೆ. ಕಲಾಭವನ ಸುಧಾರಣೆಗೆ ಸ್ಥಳೀಯ ಶಾಸಕರು ಭರವಸೆ ನೀಡಿದ್ದೇ ಬಂತು. ಸುಧಾರಿಸುವ ಪ್ರಯತ್ನ ಆಗಲೇ ಇಲ್ಲ.
ಏನ್ ಮಾಡ್ತಿವೆ ಟ್ರಸ್ಟ್ಗಳುಇಡೀ ರಾಜ್ಯದ ಪೈಕಿ ಅತಿ ಹೆಚ್ಚು ಖ್ಯಾತನಾಮ ಕಲಾವಿದರ ರಾಷ್ಟ್ರೀಯ ಟ್ರಸ್ಟ್‌ಗಳು ಧಾರವಾಡದಲ್ಲಿವೆ. ಸಮರ್ಪಕ ಅನುದಾನದ ಕೊರತೆಯಿಂದ ಟ್ರಸ್ಟ್ ಕಾರ್ಯಗಳು ಬರೀ ಪುಣ್ಯಸ್ಮರಣೆ, ಜನ್ಮದಿನ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನಕ್ಕೆ ಮಾತ್ರ ಸೀಮಿತವಾಗಿವೆ. ಟ್ರಸ್ಟ್ ಪ್ರಾರಂಭದ ದಿನದಿಂದ ಇದ್ದ ಅಧ್ಯಕ್ಷ ಹಾಗೂ ಪದಾಧಿಕಾರಿಗಳೂ ಬದಲಾಗದೇ ಇರುವುದು ಸಹ ದುರಂತದ ಸಂಗತಿ. ದ.ರಾ. ಬೇಂದ್ರೆ ಹೆಸರಿನ ಬೇಂದ್ರೆ ಭವನವಂತೂ ಮಳೆಗಾಲದಲ್ಲಿ ಸೋರುತ್ತಿದ್ದು ದುರಸ್ತಿಗೋಸ್ಕರ ಕಾದಿದೆ. ಬಜೆಟ್‌ನಲ್ಲಿ ಈ ಬಾರಿ ₹2 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು, ರಂಗಾಯಣ ಮಹಾನಗರ ಪಾಲಿಕೆ ಜಾಗದಲ್ಲಿದ್ದು, ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ.
ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೂರಾರು ಜನಪದ ಕಲಾವಿದರಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳ ಕೊರತೆ ಎದ್ದು ಕಾಣುತ್ತಿದೆ. ಹೆಸರಿಗೆ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದು, ಅನುದಾನದ ಕೊರತೆಯಿಂದ ಧಾರವಾಡದ ಸಂಸ್ಕೃತಿ ನಿಧಾನಗತಿಯಲ್ಲಿ ಮರೆಮಾಚುತ್ತಿದೆ ಎಂಬ ಭಾವ ಕಲಾವಿದರಿಗೆ ಉಂಟಾಗುತ್ತಿದೆ.ಕಲೆ, ಕಲಾವಿದರು ಬೆಳೆಯಲಿ
ಈ ಪ್ರದೇಶದ ಕಲೆಗೆ ಪ್ರೋತ್ಸಾಹ ದೊರೆತಾಗ ಹಾಗೂ ಇಲ್ಲಿಯ ಕಲಾವಿದರು ಬೆಳೆದಾಗ ಮಾತ್ರ ಧಾರವಾಡಕ್ಕೆ ಇರುವ ಸಾಂಸ್ಕೃತಿಕ ನಗರಿ ಎಂಬ ಹೆಸರು ಮುಂದುವರಿಯುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಧಾರವಾಡದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಒದಗಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.- ವೀರಣ್ಣ ಪತ್ತಾರ, ಹಿರಿಯ ರಂಗಕರ್ಮಿಗಳು