ಧಾರವಾಡ ಜಿಲ್ಲಾಸ್ಪತ್ರೆ ಸ್ಥಳಾಂತರಕ್ಕೆ ಬೃಹತ್‌ ಯೋಜನೆ!

KannadaprabhaNewsNetwork |  
Published : Feb 19, 2025, 12:49 AM IST
ಧಾರವಾಡ ಕೋಟೆ ಬಳಿ ಇರುವ ಧಾರವಾಡ ಜಿಲ್ಲಾಸ್ಪತ್ರೆ | Kannada Prabha

ಸಾರಾಂಶ

ಕಿರಿದಾದ ರಸ್ತೆ ಸೇರಿ ಹಲವು ಕಾರಣಗಳಿಂದ ಧಾರವಾಡ ಜಿಲ್ಲಾಸ್ಪತ್ರೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.

ಬಸವರಾಜ ಹಿರೇಮಠ

ಧಾರವಾಡ: ಎಲ್ಲವೂ ಅಂದುಕೊಂಡಂತೆ ನಡೆದರೆ, ಎರಡೇ ವರ್ಷಗಳಲ್ಲಿ ಧಾರವಾಡ ಜಿಲ್ಲೆಯ ಜನತೆಗೆ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ, ಮಲ್ಟಿ ಸ್ಪಷಾಲಿಟಿ ಸರ್ಕಾರಿ ಆಸ್ಪತ್ರೆಯ ಭಾಗ್ಯ ದೊರೆತಂತಾಗುತ್ತದೆ!

ಪಾರಂಪರಿಕ ಧಾರವಾಡದ ಕೋಟೆ ಬಳಿ ಇರುವ ಇಲ್ಲಿಯ ಜಿಲ್ಲಾಸ್ಪತ್ರೆಯನ್ನು ಅಭಿವೃದ್ಧಿ ದೃಷ್ಟಿಯಿಂದ ಸ್ಥಳಾಂತರಿಸಿ ಬೇಲೂರು ಬಳಿ ವಿಶಾಲ ಪ್ರದೇಶದಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾಡಳಿತವು ಬೃಹತ್‌ ಯೋಜನೆಯೊಂದು ರೂಪಿಸಿದ್ದು, ಮಾರ್ಚ್‌ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆ ಸ್ಥಳಾಂತರ ಹಾಗೂ ಹೊಸ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆಗೆ ಒಪ್ಪಿಗೆ ಸಿಗಬೇಕು ಅಷ್ಟೇ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಂತರ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ರೋಗಿಗಳಿಗೆ ಜಿಲ್ಲಾಸ್ಪತ್ರೆ ಆರೋಗ್ಯದ ದೃಷ್ಟಿಯಿಂದ ಆಸರೆಯಾಗಿದೆ. ಆದರೆ, ಪಾರಂಪರಿಕ ಧಾರವಾಡ ಕೋಟೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್‌ಗಳನ್ನು ಸ್ಥಾಪಿಸುವುದು, ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ ಹಾಗೂ ನಗರದ ಮಧ್ಯೆದಲ್ಲಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದು-ಹೋಗಲು ಕಿರಿದಾದ ರಸ್ತೆ ಹಾಗೂ ಆಸ್ಪತ್ರೆಯು ಸೀಮಿತ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ರೋಗಿಗಳ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ.

ಆಸ್ಪತ್ರೆಯನ್ನು ವಿಸ್ತರಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿದ್ದು, ಇದೀಗ ಅನಿವಾರ್ಯವಾಗಿ ಸಮೀಪದ ಬೇಲೂರು ಬಳಿ ಇರುವ ಸರ್ಕಾರದ 30 ಎಕರೆ ಜಾಗದಲ್ಲಿ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.

ಸಾರ್ವಜನಿಕರ ವೈದ್ಯಕೀಯ ಚಿಕಿತ್ಸೆಯ ಅಗತ್ಯತೆ ಆಧರಿಸಿ ಹೊಸ ಬಸ್ ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿರುವ ಬೇಲೂರಿಗೆ ಜಿಲ್ಲಾ ಆಸ್ಪತ್ರೆಯನ್ನು ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಆಸ್ಪತ್ರೆಗೆ ಹೋಗುವ ರಸ್ತೆಗಳು ಕಿರಿದಾಗಿದ್ದು, ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.

ಸ್ಥಳೀಯರು ಆಸ್ಪತ್ರೆಗೆ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ) ಸ್ಥಾಪಿಸಲು ಅವಕಾಶ ನೀಡದಿರುವುದು ಆಸ್ಪತ್ರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜನರಿಗೆ ಹೆಚ್ಚುವರಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆಸ್ಪತ್ರೆಯನ್ನು ಬೇಲೂರಿಗೆ ಸ್ಥಳಾಂತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರ ಮಧ್ಯೆದ ಜಾಗವನ್ನು ಪರಿಶೀಲಿಸಲಾಗಿ ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೂನಾ-ಬೆಂಗಳೂರು ರಸ್ತೆಯಲ್ಲಿರುವ ಬೇಲೂರು ಗ್ರಾಮದ 30 ಎಕರೆ ಸರ್ಕಾರಿ ಜಾಗದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.

ಇದರ ಹೊರತಾಗಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಸುಧಾರಿಸುವ ಅವಶ್ಯಕತೆಯಿದೆ. ವೈದ್ಯಕೀಯ ಮೂಲಸೌಕರ್ಯ ಮತ್ತು ಸ್ಥಳಾವಕಾಶದ ಕೊರತೆಯಿಂದಾಗಿ ಸಿವಿಲ್ ಆಸ್ಪತ್ರೆಗೆ ಬರುವ ಹಲವಾರು ರೋಗಿಗಳನ್ನು ಕೆಎಂಸಿ-ಆರ್‌ಐಗೆ ಸ್ಥಳಾಂತರಿಸಲಾಗುತ್ತಿದೆ. ಕೆಎಂಸಿ-ಆರ್‌ಐ ಒತ್ತಡ ಕಡಿಮೆ ಮಾಡಲು ಜಿಲ್ಲಾಸ್ಪತ್ರೆಯನ್ನು 500 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಅದರೊಂದಿಗೆ, ಹೃದ್ರೋಗ ಚಿಕಿತ್ಸಾ ಸೌಲಭ್ಯಗಳು ಸಮಯದ ಅಗತ್ಯತೆ ಮತ್ತು ಹೊಸ ಹೃದ್ರೋಗ ವಿಭಾಗವನ್ನು ಸಹ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಈಗಿರುವ ಆಸ್ಪತ್ರೆ ಕಟ್ಟಡದಲ್ಲಿ ತಾಯಿ-ಮಕ್ಕಳ ಚಿಕಿತ್ಸೆ ಹೊರತು ಪಡಿಸಿ ಉಳಿದೆಲ್ಲ ವಿಭಾಗಗಳನ್ನು ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಜನಪ್ರತಿನಿಧಿಗಳ ಒಪ್ಪಿಗೆ

ಹೊಸ ಆಸ್ಪತ್ರೆ ಕಟ್ಟಡದ ಅಂದಾಜು ವೆಚ್ಚ ₹460-600 ಕೋಟಿ. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರಾದ ವಿನಯ್ ಕುಲಕರ್ಣಿ, ಎನ್.ಎಚ್. ಕೊನರಡ್ಡಿ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಆಸ್ಪತ್ರೆ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ