ಧಾರವಾಡ ರೈತರ ಜಮೀನಿನಲ್ಲೂ ವಕ್ಫ್‌ ಮಂಡಳಿ ಹೆಸರು

KannadaprabhaNewsNetwork |  
Published : Oct 29, 2024, 12:45 AM IST
28ಡಿಡಬ್ಲೂಡಿ4 | Kannada Prabha

ಸಾರಾಂಶ

ವಿಜಯಪುರದಲ್ಲಿ ವಕ್ಫ್ ಮಂಡಳಿ ರೈತರಿಗೆ ನೋಟಿಸ್ ನೀಡಿದ ಬೆನ್ನಲೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ರೈತರು ಜಮೀನಿನ ಪಹಣಿ ಪತ್ರಿಕೆ ತಿದ್ದುಪಡಿಗೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. 2021, 2022 ಹಾಗೂ 2023ರಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟ ಬಗ್ಗೆ ನಮೂದಾಗಿವೆ.

ಧಾರವಾಡ:

ವಿಜಯಪುರ ಜಿಲ್ಲೆಯ ಹಿಂದೂ ರೈತರ ಜಮೀನು, ವಕ್ಫ್ ಮಂಡಳಿ ಹೆಸರಿನಲ್ಲಿ ದಾಖಲಾಗಿರುವುದು ಮಾತ್ರವಲ್ಲದೇ ಧಾರವಾಡ ಜಿಲ್ಲೆಯಲ್ಲೂ ಇಂತಹ ಉದಾಹರಣೆಗಳು ಪತ್ತೆಯಾಗಿದ್ದು, ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ.

ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಐದಾರು ರೈತರ ಜಮೀನು ಪಹಣೆ ಪತ್ರ ಕಾಲಂ 11ರಲ್ಲಿ ವಕ್ಫ್ ಮಂಡಳಿ ಹೆಸರು ದಾಖಲು ಕಂಡ ರೈತರು ಆಶ್ಚರ್ಯದ ಜತೆಗೆ ಆತಂಕಕ್ಕೂ ಒಳಗಾಗಿದ್ದಾರೆ.

ಗ್ರಾಮದ ಸರ್ವೇ ನಂ-142ರ ಮಲ್ಲಿಕಾರ್ಜುನ ಹುಟಗಿ ಅವರ 5.37 ಎಕರೆ, ಸರ್ವೇ ನಂ-141 ಸರೋಜ ಜವಳಿಗೆ ಅವರ 2.12 ಎಕರೆ ಜಮೀನು ವಕ್ಫ್ ಹೆಸರಲ್ಲಿದೆ. ಅದೇ ರೀತಿ ಗಂಗಪ್ಪ ಜವಳಗಿ 3.21 ಎಕರೆ, ಬಾಳಪ್ಪ ಜವಳಗಿ 26 ಗುಂಡೆ, ಶ್ರೀಶೈಲ ಮಸೂತಿ, ಮರಬಸಪ್ಪ ಮಸೂತಿ ಅವರ ಜಂಟಿ 3.13 ಎಕರೆ ಜಮೀನು ಪತ್ರದಲ್ಲಿ ವಕ್ಪ್ ಹೆಸರು ದಾಖಲಾಗಿದೆ.

ವಿಜಯಪುರದಲ್ಲಿ ವಕ್ಫ್ ಮಂಡಳಿ ರೈತರಿಗೆ ನೋಟಿಸ್ ನೀಡಿದ ಬೆನ್ನಲೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ರೈತರು ಜಮೀನಿನ ಪಹಣಿ ಪತ್ರಿಕೆ ತಿದ್ದುಪಡಿಗೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. 2021, 2022 ಹಾಗೂ 2023ರಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟ ಬಗ್ಗೆ ನಮೂದಾಗಿವೆ. ಆದರೆ, ಈ ಬಗ್ಗೆ ರೈತರ ಗಮನಕ್ಕೂ ಬಂದಿಲ್ಲ. 2018-2019ರ ಇದೇ ಪಹಣೆ ಪತ್ರಿಕೆಯಲ್ಲಿ ವಕ್ಫ್ ಆಸ್ತಿ ನಮೂದಾಗಿಲ್ಲ ಎಂಬುದು ಗಮನಾರ್ಹ.

ಪೂರ್ವಾರ್ಜಿತ ಆಸ್ತಿ:

ಇದು ನಮ್ಮ ಪೂರ್ವಜರಿಂದ ಬಂದ ಪಿತ್ರಾರ್ಜಿತ ಆಸ್ತಿ. ಯಾರು ದಾನ ನೀಡಿಲ್ಲ. ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿ, ಜಮೀನು ಕಬಳಿಸುವ ಹುನ್ನಾರವಿದೆ ಎಂದು ಗ್ರಾಮದ ಶ್ರೀಶೈಲ ಹಾಗೂ ಮರಬಸಪ್ಪ ಮಸೂತಿ ಆರೋಪಿಸಿದ್ದಾರೆ. ಉಪ್ಪಿನಬೆಟಗೇರಿ ಗ್ರಾಮದ ಸುಮಾರು 20 ಎಕರೆ ಹಾಗೂ ಜಿಲ್ಲೆಯ 1,500 ಜಮೀನು ವಕ್ಫ್ ಬೋರ್ಡ್ ಎಂದು ದಾಖಲಾಗಿದೆ ಎನ್ನಲಾಗುತ್ತಿದ್ದು, ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ.

ಮುತಾಲಿಕ ಭೇಟಿ:

ಸೋಮವಾರ ಉಪ್ಪಿನಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿದ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, 1936ರಲ್ಲಿ ಬ್ರಿಟಿಷ್ ಸರ್ಕಾರ ಮುಸ್ಲಿಮರ ಶಿಯಾ-ಸುನ್ನಿ ಪಂಗಡದ ತಿಕ್ಕಾಟ ಪರಿಹರಿಸಲು ವಕ್ಫ್ ಮಂಡಳಿ ಸ್ಥಾಪಿಸಿತ್ತು. 1995ರಲ್ಲಿ ಸರ್ಕಾರ ವಕ್ಫ್ ಬೋರ್ಡ್ ಪಕ್ಕಾ ಮಾಡಿದ್ದು, ಈ ಮಂಡಳಿಯು ರೈತರ ಭೂಮಿ ನುಂಗಲು ಹುನ್ನಾರ ನಡೆಸಿದೆ ಎಂದರು.

ಜಮೀನು ಪತ್ರದಲ್ಲಿ ವಕ್ಫ್ ಹೆಸರು ದಾಖಲಾದರೆ ಜಮೀನು ಮಾರಾಟ ಮಾಡಲು ಬರುವುದಿಲ್ಲ. ಸಾಲ ಲಭಿಸುವುದಿಲ್ಲ. ಜಮೀನು ವರ್ಗಾವಣೆ ಮಾಡಲು ಬರುವುದಿಲ್ಲ. ಕಲ್ಲೆ-ಕಬ್ಬೂರ ರೈತರು ಇದೇ ಸಮಸ್ಯೆ ಅನುಭವಿಸುವ ಬಗ್ಗೆ ರೈತರು ಮಾಹಿತಿ ನೀಡಿದರಲ್ಲದೇ, ಸಿಟಿ ಸರ್ವೇ ಸಂಪೂರ್ಣ ಮುಸ್ಲಿಮರ ಕೈಯಲ್ಲಿದೆ. ಗ್ರಾಮಕ್ಕೆ ಬಂದ ಸವೇರ್ಯರ್ ಬಹುತೇಕ ಮುಸ್ಲಿಮರೇ. ಹೀಗಾಗಿ ರೈತರ ಜಮೀನುಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸಿದ್ದಾರೆ. ತಮಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದು, ಈ ಕುರಿತಾಗಿ ಸೇನೆಯು ಹೋರಾಟ ನಡೆಸಲಿದೆ ಎಂದರು ಮುತಾಲಿಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!