ಕನ್ನಡಪ್ರಭ ವಾರ್ತೆ ಬೆಳಗಾವಿ
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಯೋಜನೆಗೆ ನಮ್ಮ ನೀರು ನಮ್ಮ ಹಕ್ಕು ಹೊರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಮಂಗಳವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 80 ಕಿ.ಮೀ ಉದ್ದದ ಪೈಪ್ ಲೈನ್ ಹಾಕಿ ನೀರು ಪೂರೈಸುವ ಕಾಮಗಾರಿ ಬೆಳಗಾವಿ ಜಿಲ್ಲೆಯಲ್ಲಿ ಭರದಿಂದ ನಡೆದಿದೆ. ಇದು ಕಾರ್ಯಗತವಾದರೆ ಹುಕ್ಕೇರಿ ತಾಲೂಕು ಮತ್ತು ಬೆಳಗಾವಿಯ ಮಹಾನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಆಗಲಿದೆ. ಅಲ್ಲದೆ ಪಕ್ಕದ ಚಿಕ್ಕೋಡಿ, ಗೋಕಾಕ ತಾಲೂಕುಗಳ ರೈತರ ಕೃಷಿ ಭೂಮಿಗೆ ನೀರು ಅಲಭ್ಯವಾಗಲಿದೆ ಹಾಗೂ ಬಾಗಲಕೋಟೆ ಹಾಗೂ ವಿಜಾಪೂರ ಜಿಲ್ಲೆಗಳಿಗೆ ಮಾರಕವಾಗಿವೆ. ಈ ಕುರಿತು 3 ಜಿಲ್ಲೆಯ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಆಗ್ರಹಿಸಿದರು.
ಘಟಪ್ರಭಾ ನದಿಗೆ ಹಿಡಕಲ್ ಬಳಿ ಕಟ್ಟಲಾಗಿರುವ ಜಲಾಶಯದ ಸಾಮರ್ಥ್ಯವು 51 ಟಿಎಂಸಿ ಗಳಾಗಿದ್ದು ಸದ್ಯ ಇಲ್ಲಿಂದ ನಿತ್ಯವೂ ಹುಕ್ಕೇರಿ, ಸಂಕೇಶ್ವರ, ಬೆಳಗಾವಿ ಮಹಾನಗರ ಹಾಗೂ ಹುಕ್ಕೇರಿ ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಅಲ್ಲದೆ ಜಲಾಶಯದಿಂದ ಚಿಕ್ಕೋಡಿ, ಗೋಕಾಕ ತಾಲೂಕುಗಳು ಮತ್ತು ಬಾಗಲಕೋಟೆ ಹಾಗೂ ವಿಜಾಪೂರ ಜಿಲ್ಲೆಗಳಿಗೆ ಕೃಷಿ ಉದ್ದೇಶಕ್ಕಾಗಿ ನೀರು ಪೂರೈಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರವು ಹಠಾತ್ತಾಗಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 80 ಕಿ.ಮೀ ಉದ್ದದ ಪೈಪ್ ಲೈನ ಹಾಕಿ ನೀರು ಪೂರೈಸುವ ಕಾಮಗಾರಿ ಬೆಳಗಾವಿ ಜಿಲ್ಲೆಯಲ್ಲಿ ಭರದಿಂದ ನಡೆದಿದ್ದು ಇದು ಕಾರ್ಯಗತವಾದರೆ ಹುಕ್ಕೇರಿ ತಾಲೂಕು ಮತ್ತು ಬೆಳಗಾವಿಯ ಮಹಾನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಎಳುವುದು ಖಚಿತ. ಇದಲ್ಲದೆ ಚಿಕ್ಕೋಡಿ, ಗೋಕಾಕ ತಾಲೂಕುಗಳು ಮತ್ತು ಬಾಗಲಕೋಟೆ ಹಾಗೂ ವಿಜಾಪೂರ ಜಿಲ್ಲೆಗಳಿಗೆ ಬೆಳೆಗಳಿಗೆ ನೀರು ಪೂರೈಕೆಯಾಗದೇ ಬೆಳೆಗಳು ಬೆಳೆಯುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳದೆ ಇದ್ದಲಿ ಬೆಳಗಾವಿ, ಚಿಕ್ಕೋಡಿ, ಬಿಜಾಪುರ್ ಮತ್ತು ಬಾಗಲಕೋಟೆ ಜಿಲ್ಲೆ ರೈತರು ಮತ್ತು ರೈತ ಸಂಘಟನೆ ಯವರ ಹೋರಾಟ ಅನಿವಾರ್ಯ ಆಗುತ್ತದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ರಾಜಕುಮಾರ್ ಟೋಪಣ್ಣವರ, ಸಿದಗೌಡ ಮೋದಗಿ, ಮಾಜಿ ಶಾಸಕ ರಮೇಶ್ ಕುಡಚಿ ಮಾಜಿ ಮೇಯರ್ ಎನ್. ಬಿ. ನಿರ್ವಾಣಿ ಮೊದಲಾದವರು ಉಪಸ್ಥಿತರಿದ್ದರು.