ಧಾರವಾಡ: ಬೇಸಿಗೆ ಬಂದಿತೆಂದರೆ ಇಡೀ ಒಂದು ಭಾಗದ ಧಾರವಾಡದ ಜನರು ಸುಟ್ಟ ತ್ಯಾಜ್ಯದ ಹೊಗೆ ಹಾಗೂ ವಾಸನೆಯಿಂದ ಪರದಾಡಬೇಕಾಗುತ್ತದೆ. ಹೊಸಯಲ್ಲಾಪೂರದ ತ್ಯಾಜ್ಯದ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಮಂಗಳವಾರ ಧಾರವಾಡ-ಹುಬ್ಬಳ್ಳಿ ರಸ್ತೆ ಸಂಚಾರಿಗಳು ಸೇರಿದಂತೆ ಸುತ್ತಲಿನ ಬಡಾವಣೆ ಜನರು ವಿಷದ ಹೊಗೆಯುಂಡು ಜನಪ್ರತಿನಿಧಿಗಳಿಗೆ ಶಾಪ ಹಾಕುವಂತಾಯಿತು.
ಧಾರವಾಡದಿಂದ ಹುಬ್ಬಳ್ಳಿ ಕಡೆಗೆ, ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಬರುವ ಸಂಚಾರಿಗಳು ಸೇರಿದಂತೆ ಯಾಲಕ್ಕಿ ಶೆಟ್ಟರ್ ಕಾಲೋನಿ, ದಾನೇಶ್ವರ ನಗರ, ಹೊಸ ಯಲ್ಲಾಪೂರ, ಜನ್ನತನಗರ ಸೇರಿ ಸುತ್ತಲಿನ ಜನರು ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಕೋಟಿಗಟ್ಟಿಲೇ ಹಣ ಹಾಕಿ ಕಸವನ್ನು ಗೊಬ್ಬರ ಮಾಡುವ ಯಂತ್ರ ತರಲಾಗಿದೆ. ಆದರೂ ಏನೂ ಪ್ರಯೋಜನವಾಗುತ್ತಿಲ್ಲ. ಮಳೆಗಾಲದಲ್ಲಿ ಕೊಳೆತ ವಾಸನೆ, ಬೇಸಿಗೆಯಲ್ಲಿ ಸುಟ್ಟ ವಾಸನೆ ಧಾರವಾಡ ಮಂದಿಗೆ ತಡೆಯಲಾಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಸದಸ್ಯರು ಸೇರಿದಂತೆ ಶಾಸಕ ಅರವಿಂದ ಬೆಲ್ಲದಗೂ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ದಾನೇಶ್ವರಿ ನಗರ, ಯಾಲಕ್ಕಿ ಶೆಟ್ಟರ ಕಾಲೋನಿ, ವಿದ್ಯಾಗಿರಿ, ಜನ್ನತನಗರ ಸೇರಿ ಸುತ್ತಲೂ ಈ ಹೊಗೆ ಆವರಿಸಿದ್ದು, ಪ್ರತಿ ಬಾರಿ ಈ ಸಮಸ್ಯೆಯಿಂದ ನಮ್ಮ ಜನ ಅಸ್ತಮಾ ಅಂತಹ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಸ ನಿರ್ವಹಣೆ ಮಾಡಿ ಬೆಂಕಿ ಹೊತ್ತದಂತೆ ಪಾಲಿಕೆ ಎಚ್ಚರ ವಹಿಸಬೇಕು ಎಂದು ದಾನೇಶ್ವರಿ ನಗರದ ಕೆ.ವೈ. ಕೋರಿ ಆಗ್ರಹಿಸಿದರು.ಇಡೀ ದಿನ ಸುಟ್ಟ ತ್ಯಾಜ್ಯದ ವಾಸನೆಯಿಂದ ಬೇಸತ್ತು ಮಂಗಳವಾರ ಸಂಜೆ ಸ್ಥಳೀಯರು ಪಾಲಿಕೆ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿ ಹು-ಧಾ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಸುಮಾರು ಹೊತ್ತು ಬಿಆರ್‌ಟಿಎಸ್ ಸೇರಿದಂತೆ ಸಾರ್ವಜನಿಕ ವಾಹನಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.