ಧಾರವಾಡ ಪ್ರತ್ಯೇಕ ಪಾಲಿಕೆಗೆ ಜುಲೈ 8ರ ಗಡುವು

KannadaprabhaNewsNetwork |  
Published : Jun 09, 2026, 02:15 AM IST
ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಸಭೆಯಲ್ಲಿ ನಡೆಸಲಾಯಿತು. | Kannada Prabha

ಸಾರಾಂಶ

ನೂತನ ಸರ್ಕಾರ ಜು. 8ರ ಒಳಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳದೇ ಹೋದರೆ ಜು. 9ರಿಂದಲೇ ಉಗ್ರ ಹೋರಾಟ ನಡೆಸುವುದಾಗಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆಯ ಗಡುವು ನೀಡಿದೆ.

ಧಾರವಾಡ:

ಕಳೆದ 25 ದಿನಗಳಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಲು ಆಗ್ರಹಿಸಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸದ್ಯಕ್ಕೆ ಜು. 8ರ ವರೆಗೂ ಸ್ಥಗಿತಗೊಂಡಿದೆ.

ನೂತನ ಸರ್ಕಾರ ಜು. 8ರ ಒಳಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳದೇ ಹೋದರೆ ಜು. 9ರಿಂದಲೇ ಉಗ್ರ ಹೋರಾಟ ನಡೆಸುವುದಾಗಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆಯ ಗಡುವು ನೀಡಿದೆ.

ಈ ಕುರಿತು ಸೋಮವಾರ ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಕ್ಷಾತೀತವಾಗಿ ನಡೆದ ಹೋರಾಟಗಾರರ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹೋರಾಟ ಮುನ್ನಡೆಸುವ ಮತ್ತು ಸ್ಥಗಿತಗೊಳಿಸುವ ಕುರಿತ ಚರ್ಚೆಯ ನಂತರ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆ ಅಧ್ಯಕ್ಷ ಬಿ.ಡಿ. ಹಿರೇಮಠ ಅಧೀಕೃತವಾಗಿ ಹೋರಾಟ ನಿಲ್ಲಿಸುವ ಘೋಷಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ. ಆದರೆ, ನೂತನ ಸರ್ಕಾರ ರಚನೆಯಾಗಿದ್ದರಿಂದ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಮಯಬೇಕಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೋರಾಟವನ್ನು ಕೈ ಬಿಟ್ಟಿದ್ದೇವೆ. ಆದರೆ, ಈ ಮಧ್ಯೆ ಸರ್ಕಾರದ ಗಮನ ಸೆಳೆಯುವ ಮತ್ತು ಅಗತ್ಯ ಮಾಹಿತಿ, ದಾಖಲೆ ನೀಡುವ ಕೆಲಸ ಮಾತ್ರ ನಿಲ್ಲುವುದಿಲ್ಲ. ಸರ್ಕಾರ ಜು. 8ರ ಒಳಗಾಗಿ ಪ್ರತ್ಯೇಕ ಪಾಲಿಕೆ ರಚಿಸದೇ ಹೋದರೆ ಜು. 9ರಿಂದಲೇ ಅಹೋರಾತ್ರಿ ದಿನದ 24 ಗಂಟೆ ಧರಣಿ ಸತ್ಯಾಗ್ರಹ ಮತ್ತು ಉಗ್ರ ಹೋರಾಟ ಒಟ್ಟಿಗೆ ನಡೆಯಲಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಶಿವಶಂಕರ ಹಂಪಣ್ಣವರ, ನಾಗರಾಜ ಗೌರಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಷ್ಟೇ ರಚನೆಯಾಗಿದೆ. ಸರ್ಕಾರದ ಮಟ್ಟದಲ್ಲಿ ಕೆಲಸವಾಗಬೇಕಾಗಿದ್ದು, ಈ ಹೋರಾಟದ ಬಗ್ಗೆ ಕಾಳಜಿ ಇರುವ ಕಾರಣದಿಂದ ಮುಖ್ಯಮಂತ್ರಿಗಳ ಕಚೇರಿಯಿಂದಲೇ, ಸಮಯಾವಕಾಶ ಕೋರಿ ಬಿ.ಡಿ. ಹಿರೇಮಠರಿಗೆ ಪತ್ರ ಬರೆಯಲಾಗಿದೆ. ಹೀಗಾಗಿ ಸದ್ಯಕ್ಕೆ ಹೋರಾಟ ಸ್ಥಗಿತಗೊಳಿಸಿ, ಎರಡು ತಿಂಗಳ ಸಮಯದ ಗಡುವು ನೀಡೋಣ. ಒಂದು ವೇಳೆ ಸರ್ಕಾರ ಮಾಡದೇ ಹೋದರೆ ಉಗ್ರ ಹೋರಾಟ ಮಾಡೋಣ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಶಿವು ಹಿರೇಮಠ ಮಾತನಾಡಿ, ರಾಜ್ಯಪಾಲರ ಅಂಕಿತ ಹಾಕಿದ 48 ಗಂಟೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಅಂಕಿತ ಹಾಕಿಸುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದರು. ಇದೀಗ ಎರಡು ತಿಂಗಳು ಸಮಯ ಕೇಳುವುದು ಸಮಂಜಸವಲ್ಲ. 15 ದಿನಗಳಲ್ಲಿ ಪ್ರತ್ಯೇಕ ಪಾಲಿಕೆ ರಚಿಸುವಂತೆ ಗುಡುವು ನೀಡಬೇಕು ಎಂದು ಹೇಳಿದರು.

ಈ ವೇಳೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದರು. ಮಧ್ಯ ಪ್ರವೇಶಿಸಿದ ಹೋರಾಟಗಾರ ಬಿ.ಡಿ. ಹಿರೇಮಠ, ಇದು ಪಕ್ಷಾತೀತ ಸಭೆ. ಇಲ್ಲಿ ಪಕ್ಷಗಳ ಕಾರ್ಯಸಾಧನೆ ಚರ್ಚೆ ಬೇಡ ಎಂದು ವಾತಾವರಣ ತಿಳಿಗೊಳಿಸಿದರು.

ಹಿರಿಯ ವಕೀಲ ಸಿ.ಎಸ್. ನೇಗಿನಹಾಳ, ಹೋರಾಟಗಾರರಾದ ವೆಂಕಟೇಶ ಮಾಚಕನೂರ, ಮಹಾದೇವ ಹೊರಟ್ಟಿ, ವಿಠ್ಠಲ ಕಮ್ಮಾರ, ರವಿ ಮಾಳಗೇರ, ವಿಜಯ ಶೆಟ್ಟರ, ಮನೋಜ ಕರ್ಜಗಿ, ಮೇಯರ್ ಜ್ಯೊತಿ ಪಾಟೀಲ್, ಪಾಲಿಕೆ ಸದಸ್ಯರಾದ, ಶಂಕರ ಶೆಳಕೆ, ಕವಿತಾ ಕಬ್ಬೇರ, ಸುರೇಶ ಬೇದರೆ, ರಾಜಶೇಖರ ಕಮತಿ ಇದ್ದರು. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಳ್ಳುವ ಹಂತಕ್ಕೆ ಹೋಗಿದ್ದು ವಿಷಾದನೀಯ. ಪ್ರತ್ಯೇಕ ಪಾಲಿಕೆ ವಿಚಾರ ಕೂಗಾಟ, ಚೀರಾಟದ್ದಲ್ಲ, ವೈಚಾರಿಕತೆ ಆಧಾರದಲ್ಲಿ ಚರ್ಚೆಯಾಗಿ ಬಗೆ ಹರಿಸುವಂತಹದ್ದು, ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕಿದೆ.

ಮನೋಜ್ ಪಾಟೀಲ್, ಹೋರಾಟಗಾರ.ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಅಂದಾಗ ಪ್ರತ್ಯೇಕ ಪಾಲಿಕೆ ಹೋರಾಟ ಯಶಸ್ವಿಯಾಗುತ್ತದೆ.

ಗುರುರಾಜ್ ಹುಣಸಿಮರದ, ಜೆಡಿಎಸ್ ಮುಖಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಯಲ್ಲೇ ಹರಿಯುವ ಕೊಳಚೆ ನೀರು, ಕಾಂಪೌಂಡ್ ಹಿಡಿದು ಸಾಗುವ ಶಾಲಾ ಮಕ್ಕಳು
ಶಂಭುಲಿಂಗನಗೌಡ ಕಾಂಗ್ರೆಸ್ ತೆಕ್ಕೆಗೋ, ಬಿಜೆಪಿಗೋ