ಧಾರವಾಡ ಜಿಲ್ಲೆಯ ಗ್ರಾಮೀಣದಲ್ಲಿ ತೆರಿಗೆ ವಸೂಲಿಗೆ ಜಿಪಂ ವಿಶೇಷ ಅಭಿಯಾನ!

KannadaprabhaNewsNetwork |  
Published : Jan 24, 2025, 12:48 AM IST
23ಡಿಡಬ್ಲೂಡಿ2ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಗ್ರಾಪಂ ವತಿಯಿಂದ ತರಿಗೆ ವಸೂಲಿ ಅಭಿಯಾನ. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಒತ್ತಾಯ ಪೂರ್ವಕ ತೆರಿಗೆ ಸಂಗ್ರಹ ನಿರೀಕ್ಷಿಸುವಂತಿಲ್ಲ. ಏನಿದ್ದರೂ ಅವರ ಮನವೊಲಿಸಿಯೇ ತೆರಿಗೆ ಸಂಗ್ರಹ ಮಾಡಬೇಕು. ಇಲ್ಲವೇ, ರಹವಾಸಿ ಪ್ರಮಾಣ ಪತ್ರ, ಮನೆ ಪರವಾನಗಿ ಅಂತಹ ಕೆಲಸ, ಕಾರ್ಯಗಳಲ್ಲಿ ಅನಿವಾರ್ಯವಾಗಿ ತೆರಿಗೆ ತುಂಬುತ್ತಾರೆ. ಇಲ್ಲದೇ ಹೋದಲ್ಲಿ ಹಲವಾರು ವರ್ಷಗಳ ಕಾಲ ತೆರಿಗೆ ತುಂಬುವುದಿಲ್ಲ.

ಬಸವರಾಜ ಹಿರೇಮಠ

ಧಾರವಾಡ:

ಸ್ಥಳೀಯ ಸಂಸ್ಥೆಗಳಲ್ಲಿ ಕರವಸೂಲಿ ಕಾರ್ಯ ತುಸು ಕಷ್ಟವೇ ಸರಿ. ಅದರಲ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮೀಣ ಪ್ರದೇಶಗಳಲ್ಲಿ ತೆರಿಗೆ ವಸೂಲಿ ಅಷ್ಟಕಷ್ಟೇ. ಆದರೆ, ತೆರಿಗೆ ಸಂಗ್ರಹ ಇಲ್ಲದೇ ಅಭಿವೃದ್ಧಿ ಕಾರ್ಯ ಸಹ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಆಗಾಗ ವಿಶೇಷ ಅಭಿಯಾನ ಮೂಲಕ ಕಸ ವಸೂಲಿಗೆ ಮುಂದಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಒತ್ತಾಯ ಪೂರ್ವಕ ತೆರಿಗೆ ಸಂಗ್ರಹ ನಿರೀಕ್ಷಿಸುವಂತಿಲ್ಲ. ಏನಿದ್ದರೂ ಅವರ ಮನವೊಲಿಸಿಯೇ ತೆರಿಗೆ ಸಂಗ್ರಹ ಮಾಡಬೇಕು. ಇಲ್ಲವೇ, ರಹವಾಸಿ ಪ್ರಮಾಣ ಪತ್ರ, ಮನೆ ಪರವಾನಗಿ ಅಂತಹ ಕೆಲಸ, ಕಾರ್ಯಗಳಲ್ಲಿ ಅನಿವಾರ್ಯವಾಗಿ ತೆರಿಗೆ ತುಂಬುತ್ತಾರೆ. ಇಲ್ಲದೇ ಹೋದಲ್ಲಿ ಹಲವಾರು ವರ್ಷಗಳ ಕಾಲ ತೆರಿಗೆ ತುಂಬುವುದಿಲ್ಲ. ಸತತವಾಗಿ ಮೂರು ವರ್ಷಗಳ ಕಾಲ ತೆರಿಗೆ ತುಂಬದೇ ಇರುವ ಆಸ್ತಿ ಮಾಲೀಕರ ಪಟ್ಟಿ ಸಹ ಜಿಪಂ ಮಾಡಿ ಈ ಮೂಲಕ ಕರ ಸಂಗ್ರಹಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ 2.86 ಲಕ್ಷ ಆಸ್ತಿ:

ಜಿಲ್ಲೆಯಲ್ಲಿ 146 ಗ್ರಾಪಂಗಳಲ್ಲಿ 2,86,332 ಆಸ್ತಿಗಳಿವೆ. ಅತೀ ಹೆಚ್ಚೆಂದರೆ 2.35 ಲಕ್ಷ ಮನೆಗಳಿದ್ದು ಈ ಪೈಕಿ 1.43 ಆಸ್ತಿಗಳ ಮಾಲೀಕರು ಮೂರು ವರ್ಷ ಕರ ತುಂಬಿಲ್ಲ. ಅದೇ ರೀತಿ ಧಾರ್ಮಿಕ ಕೇಂದ್ರಗಳು, ವಾಣಿಜ್ಯ ಆಸ್ತಿಗಳು ಸೇರಿದಂತೆ ಈ ಪಟ್ಟಿಯಲ್ಲಿ ಸರ್ಕಾರಿ ಆಸ್ತಿಗಳು ಸಹ ಇವೆ. ಜಿಲ್ಲೆಯ 146 ಗ್ರಾಮ ಪಂಚಾಯ್ತಿ ಪೈಕಿ ಮನೆ, ಖಾಲಿ ಜಾಗ, ಅಂಗಡಿ-ಮುಗ್ಗಟ್ಟು ಸೇರಿ ವಾಣಿಜ್ಯ ಕೇಂದ್ರಗಳಿಂದ 2024-25ನೇ ಸಾಲಿಗೆ ₹ 26.13 ಕೋಟಿ ಹಾಗೂ ಈ ಹಿಂದಿನ ಬಾಕಿ ₹ 48.51 ಕೋಟಿ ಸೇರಿ ಒಟ್ಟಾರೆ ₹ 74.64 ಕೋಟಿ ತೆರಿಗೆ ಬಾಕಿ ಇದೆ.

ಪಾಕ್ಷಿಕ ಅಭಿಯಾನ:

ಈ ಕಾರಣದಿಂದ ಜ. 20ರಿಂದ ಫೆ. 3ರ ವರೆಗೆ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿ ಗ್ರಾಮಗಳಲ್ಲಿ ಪಾಕ್ಷಿಕ ಕರ ವಸೂಲಿಗೆ ಮುಂದಾಗಿರುವ ಜಿಲ್ಲಾ ಪಂಚಾಯ್ತಿ ಎರಡೇ ದಿನಗಳಲ್ಲಿ ₹ 30 ಲಕ್ಷಕ್ಕೂ ಹೆಚ್ಚು ಸಂಗ್ರಹ ಮಾಡಿದ್ದು, 15 ದಿನಗಳಲ್ಲಿ ₹ 6 ಕೋಟಿ ಸಂಗ್ರಹದ ಗುರಿ ಹೊಂದಿದೆ. ಪಿಒಎಸ್‌ ಯಂತ್ರದ ಮೂಲಕ ಹಣ ಪಾವತಿ ಮಾಡಿಕೊಳ್ಳುತ್ತಿದ್ದು, ಹಣ ಪಡೆದಿರುವುದಕ್ಕೆ ತೆರಿಗೆ ತುಂಬಿದವರಿಗೆ ರಸೀದಿ ಸಹ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ.ಎಸ್‌. ಮೂಗನೂರಮಠ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

19ನೇ ಸ್ಥಾನಕ್ಕಿದೆ ಧಾರವಾಡ:

ಸಾಮಾನ್ಯವಾಗಿ ತೆರಿಗೆ ಸಂಗ್ರಹ ನಿತ್ಯವೂ ಇರಲಿದೆ. ಆದರೆ, ತೆರಿಗೆದಾತರರು ಅನಿವಾರ್ಯ ಹಾಗೂ ಅಗತ್ಯತೆ ಇದ್ದಾಗ ಮಾತ್ರ ತುಂಬುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಪಾಕ್ಷಿಕ ಅಭಿಯಾನ ರೀತಿಯಲ್ಲಿ ಗ್ರಾಪಂ ಪಿಡಿಒ, ಸದಸ್ಯರು ಹಾಗೂ ಸಿಬ್ಬಂದಿ ಈ 15 ದಿನಗಳ ಕಾಲ ಗ್ರಾಮಸ್ಥರಿಂದ ತೆರಿಗೆ ತುಂಬಲು ಮನವೊಲಿಕೆ ಮಾಡುತ್ತಿದ್ದು, ಈ ಉಪಕ್ರಮ ಯಶಸ್ವಿಯಾಗಿದೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ ಹತ್ತು ದಿನಗಳ ಅಭಿಯಾನದಲ್ಲಿ ₹ 3 ಕೋಟಿ ಸಂಗ್ರಹವಾಗಿದ್ದು, ಇದೇ ಭರವಸೆ ಮೇಲೆ ಮತ್ತೀಗ 15 ದಿನಗಳ ತೆರಿಗೆ ಅಭಿಯಾನ ಮಾಡುತ್ತಿದ್ದೇವೆ. ತೆರಿಗೆ ವಸೂಲಿಯಲ್ಲಿ ರಾಜ್ಯದ ಪೈಕಿ ಧಾರವಾಡ ಜಿಲ್ಲೆಯು 19ನೇ ಸ್ಥಾನ ಇದ್ದು ಇದನ್ನು ಒಂದಂಕಿಗೆ ತರುವ ಗುರಿಯೂ ಇದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!