ಕನ್ನಡಪ್ರಭ ವಾರ್ತೆ ಮೈಸೂರುಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಸ್ಮರಣಾರ್ಥ ಬಸವ ಮಾರ್ಗ ಫೌಂಡೇಷನ್ ವತಿಯಿಂದ ನಗರದ ಸರಸ್ವತಿಪುರಂನ ಬಸವಮಾರ್ಗ ಮಾನಸಿಕ ಆರೋಗ್ಯ ಚಿಕಿತ್ಸಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ಸಂಜೆ ವ್ಯಸನಮುಕ್ತ ದಿನಾಚರಣೆ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಎಚ್‌ಒ ಡಾ. ಮೋಹನ್, ವ್ಯಸನಮುಕ್ತ ಎಂದರೆ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳು (ಡ್ರಗ್ಸ್) ಅಥವಾ ಯಾವುದೇ ಕೆಟ್ಟ ಚಟಗಳಿಂದ ಮುಕ್ತವಾಗಿ ಆರೋಗ್ಯಕರ ಮತ್ತು ಸುಂದರ ಜೀವನವನ್ನು ನಡೆಸುವುದು ಎಂದರ್ಥ. ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಜೀವನದುದ್ದಕ್ಕೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.ವ್ಯಸನಿಗಳ ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಶಿವಯೋಗಿಗಳು ಅಪ್ಪಟ ಬಸವತತ್ವ ಅನುಯಾಯಿ ಆಗಿದ್ದರು. ಜೀವನದುದ್ದಕ್ಕೂ ನಡೆ- ನುಡಿಯಲ್ಲಿ ಬಸವಾದಿ ಶರಣರ ವಿಚಾರಧಾರೆ ಮೈಗೂಡಿಸಿಕೊಂಡಿದ್ದರು. ಸಮಾಜದಲ್ಲಿ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆ. 1ರಂದು ಅವರ ಜನ್ಮದಿನದ ಸ್ಮರಣಾರ್ಥ ರಾಜ್ಯಾದ್ಯಂತ ವ್ಯಸನಮುಕ್ತ ದಿನವನ್ನು ಆಚರಿಸುತ್ತಿದೆ.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ ಮಾತನಾಡಿ,ಇಂದಿನ ಯುವ ಪೀಳಿಗೆ ಪೂಜ್ಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಇಳಕಲ್ ನ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರು ತಮ್ಮ ಜೀವನದುದ್ದಕ್ಕೂ ಮದ್ಯಪಾನ ಮತ್ತು ಇತರ ದುಶ್ಚಟಗಳ ವಿರುದ್ಧ ರಾಜ್ಯಾದ್ಯಂತ ಪಾದಯಾತ್ರೆಗಳನ್ನು ಮಾಡಿದರು. ಆ ಮೂಲಕ ಲಕ್ಷಾಂತರ ಜನರ ಮನಸ್ಸು ಪರಿವರ್ತಿಸಿ ವ್ಯಸನಮುಕ್ತಗೊಳಿಸಿದ್ದರು. ಮಾದಕ ವಸ್ತುಗಳು ಮತ್ತು ದುಶ್ಚಟಗಳಿಂದಾಗುವ ಹಾನಿಯ ಬಗ್ಗೆ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಸಮಾಜ ನಿರ್ಮಿಸುವುದು ಈ ದಿನದ ಮುಖ್ಯ ಗುರಿಯಾಗಿದೆ. ಅದೆ ಹಾದಿಯಲ್ಲಿ ನಮ್ಮ ಬಸವ ಮಾರ್ಗ ಸಂಸ್ಥೆಯಿಂದ ಉಚಿತ ಶಿಬಿರ ಆಯೋಜಿಸುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸಲು ಶ್ರಮಿಸಲಾಗುತ್ತಿದೆ ಎಂದರು.