ಆರೋಗ್ಯಯುತ ಆಹಾರ ಪದ್ಧತಿಯಿಂದ ಮಧುಮೇಹ ದೂರ: ಎಂ.ಎ ಶೇಖರ್

KannadaprabhaNewsNetwork |  
Published : Aug 15, 2025, 01:00 AM IST
131ನೇ ಹುಣ್ಣಿಮೆ  | Kannada Prabha

ಸಾರಾಂಶ

ಬದುಕಿನಲ್ಲಿ ಸೋದರನ ಪಾತ್ರ ಬಹಳ ಮುಖ್ಯ. ಸಹೋದರ ಸಹೋದರಿಯ ಬಾಂಧವ್ಯದ ಸಂಕೇತವಾಗಿ ಆಚರಿಸುವ ರಕ್ಷಾ ಬಂಧನ ಹಬ್ಬಕ್ಕೆ ಅದರದೇ ಆದ ಹಿನ್ನೆಲೆಯಿದೆ. ಇದು ಸಮಾಜದಲ್ಲಿ ಒಳಿತನ್ನು ಸಾರುವ ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯಯುತ ಆಹಾರ ಪದ್ಧತಿಯೊಂದಿಗೆ ವೈದ್ಯರ ಸಲಹೆಗಳನ್ನು ಪಾಲಿಸಿದರೆ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದು ಖ್ಯಾತ ಮಧುಮೇಹ ತಜ್ಞ ಮತ್ತು ವಿಶ್ರಾಂತ ಕುಲಪತಿ ಡಾ ಎಂ.ಎ. ಶೇಖರ್ ಸಲಹೆ ನೀಡಿದರು.

ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 131ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಂಗೈಯಲ್ಲಿ ಆರೋಗ್ಯ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ನಾವು ಸಾಧ್ಯವಾದಷ್ಟು ನೈಸರ್ಗಿಕವಾದ ರೀತಿಯಲ್ಲಿ ನಮಗೆ ಬಂದಿರುವ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನ ಪಡಬೇಕು. ಯಾಕೆಂದರೆ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳಿಂದ ದೇಹಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಎದುರಾಗುವುದಿಲ್ಲ, ಪ್ರಾದೇಶಿಕವಾಗಿ ಬೆಳೆಯುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರಿಂದ ದೈಹಿಕವಾಗಿ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗಬಹುದು ಎಂದರು.

ಸಾವಿರಾರು ವರ್ಷಗಳಿಂದಲೂ ಪ್ರಸಿದ್ಧವಾಗಿರುವ ಆಯುರ್ವೇದ ಪದ್ಧತಿ ಈಗಲೂ ಕೂಡ ನಮ್ಮೆಲ್ಲರ ಮಧ್ಯೆ ಇದೆ. ಆಹಾರ, ವಿಹಾರ, ವಿಚಾರ ಇದಿಷ್ಟನ್ನು ನಿಖರವಾಗಿ ಅರಿತರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ವೈದ್ಯರು ನೀಡಿದ ಔಷಧಿಗಳು ಹಾಗೂ ಕಟ್ಟು ನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಬೇಕು, ಅಲ್ಲದೆ ಪ್ರತಿದಿನ ವ್ಯಾಯಾಮವನ್ನು ಶಿಸ್ತುಬದ್ಧವಾಗಿ ಅನುಸರಿಬೇಕು ಎಂದು ತಿಳಿಸಿದರು.

ಮಧುಮೇಹ ಕಾಯಿಲೆ ಇರುವವರು ಯಾವುದನ್ನು ತಿನ್ನಬೇಕು ಎನ್ನುವುದಕ್ಕಿಂತ ಯಾವುದನ್ನು ತಿನ್ನಬಾರದು ಎಂಬುದರ ಬಗೆಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಆಹಾರ ಇರಲಿ, ಇಲ್ಲವೇ ಹಣ್ಣುಗಳಿರಲಿ ಯಾವುದನ್ನು ಎಷ್ಟು ಬಳಸಬೇಕು, ಯಾವ ಹಣ್ಣುಗಳಿಂದ ಕೊಂಚ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಅರಿಯುವುದು ಒಳ್ಳೆಯದು ಎಂದ ಅವರು, ಇಲ್ಲದರ ಬಗೆಗೆ ಚಿಂತಿಸುವುದನ್ನು ಬಿಟ್ಟು ಇರುವುದರಲ್ಲಿ ಖುಷಿ ಪಡಿ, ಅಲ್ಲದೆ ಒತ್ತಡದಿಂದ ದೂರವಿರಿ ಎಂದು ಸಲಹೆ ನೀಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಧುಮೇಹವನ್ನು ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟವಾದರೂ, ಶರೀರಕ್ಕೆ ಒಗ್ಗುವ ಆಹಾರ ಶೈಲಿಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.

ಮನುಷ್ಯನಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪರಿಸರದ ಸಮತೋಲನ ಕೂಡ ಮುಖ್ಯ. ಈ ನಿಟ್ಟಿನಲ್ಲಿ ಪರಿಸರವನ್ನು ಉಳಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದ ಅವರು, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು 5 ಕೋಟಿ ಸಸಿ ನೆಟ್ಟು ಬೆಳೆಸಿದ್ದರು ಎಂಬುದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಹಾಸನ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹೆಮ್ಮಿಗೆ ಮೋಹನ್, ರಾಜ್ಯ ಒಕ್ಕಲಿಗರ ಸಂಘದ ಸದಸ್ಯ ರಘುಗೌಡ, ಸಮಾಜ ಸೇವಕ ಲಕ್ಷ್ಮೀಕಾಂತ್ (ಕಂಚಮಾರನಹಳ್ಳಿ ಕಾಂತಣ್ಣ),ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಡಾ.ದೇವಿಪ್ರಸಾದ್, ಜಯಲಕ್ಷ್ಮೀ ರಾಜಣ್ಣ, ಶಿವರಾಮೇಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೋಹನ್ ಸ್ವಾಗತಿಸಿದರು, ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದರ್ಶನ್ ವಂದಿಸಿದರು.

-------

ಬದುಕಿನಲ್ಲಿ ಸೋದರನ ಪಾತ್ರ ಬಹಳ ಮುಖ್ಯ. ಸಹೋದರ ಸಹೋದರಿಯ ಬಾಂಧವ್ಯದ ಸಂಕೇತವಾಗಿ ಆಚರಿಸುವ ರಕ್ಷಾ ಬಂಧನ ಹಬ್ಬಕ್ಕೆ ಅದರದೇ ಆದ ಹಿನ್ನೆಲೆಯಿದೆ. ಇದು ಸಮಾಜದಲ್ಲಿ ಒಳಿತನ್ನು ಸಾರುವ ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ.

ಶ್ರೀ ಶಂಭುನಾಥ ಸ್ವಾಮೀಜಿ

ಆದಿಚುಂಚನಗಿರಿ ಮಹಾಸಂಸ್ಥಾನ, ಹಾಸನ ಶಾಖಾ ಮಠ

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್