ಕನ್ನಡಪ್ರಭ ವಾರ್ತೆ ಮಾಲೂರು
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರದ ಸಹಕಾರದಿಂದ ೩ ಬೆಡ್‌ಗಳಿದ್ದ ಡಯಾಲಿಸಿಸ್ ಕೇಂದ್ರವನ್ನು ೯ ಬೆಡ್‌ಗಳಿಗೆ ಹೆಚ್ಚಿಸಲಾಗಿದ್ದು, ಪ್ರತಿನಿತ್ಯ ೭೨ ಮಂದಿ ರೋಗಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದಿಂದ ಉಚಿತ ೯ ಬೆಡ್‌ಗಳ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿದಿನ ೭೨ ಮಂದಿಗೆ ಚಿಕಿತ್ಸೆ
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಪಡೆಯವರಿಗೆ ೩ ಬೆಡ್‌ಗಳು ಮಾತ್ರ ಇದ್ದಿದ್ದರಿಂದ ಡಯಾಲಿಸಿಸ್ ರೋಗಿಗಳು ಹೆಚ್ಚುವರಿಯಾಗಿ ಬೆಡ್‌ಗಳನ್ನು ಹಾಗೂ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿಕೊಡಲು ಮನವಿ ಮಾಡಿದ್ದರು, ಅದರಂತೆ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಡಯಾಲಿಸಿಸ್ ಕೇಂದ್ರವನ್ನು ಮಹಡಿಯಿಂದ ಕೆಳಭಾಗಕ್ಕೆ ಸ್ಥಳಾಂತರಿಸಲಾಗಿದೆ. ಈಗ ೯ ಬೆಡ್‌ಗಳ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರತಿ ದಿನ ೭೨ ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. ಪ್ರತಿನಿತ್ಯ ೧೫೦ ರೋಗಿಗಳು ಡಯಾಲಿಸಿಸ್ ಸೌಲಭ್ಯವನ್ನು ಪಡೆಯಲು ಮಾರಿಕಾಂಬ ಟ್ರಸ್ಟ್ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ಮತ್ತಷ್ಟು ಹೆಚ್ಚುವರಿ ಯಂತ್ರಗಳು ಹಾಗೂ ಬೆಡ್‌ಗಳನ್ನು ಅಳವಡಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್‌ದರ್ಜೆಗೆರಿಸಿ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅನುಕೂಲ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಲ್ಲಿ ಮನವಿ ಮಾಡಲಾಗಿತ್ತು, ಅದರಂತೆ ಮುಖ್ಯಮಂತ್ರಿಗಳು ಇಲ್ಲಿನ ಆಸ್ಪತ್ರೆಯನ್ನು ೪೫ ಕೋಟಿ ರೂಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ಹಣವನ್ನು ನಿಗದಿಪಡಿಸಿದ್ದಾರೆ ಎಂದರು.ಆಸ್ಪತ್ರೆಗೆ ಜಮೀನು ಮಂಜೂರು
ಈಗಾಗಲೇ ಜಿಲ್ಲಾಧಿಕಾರಿಗಳು ಟೇಕಲ್ ರಸ್ತೆ ಗುಡ್ನಹಳ್ಳಿ ಗೇಟ್ ಬಳಿ ಇರುವ ೧೦ ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದಾರೆ. ಪಹಣಿಯೂ ಸಹ ಆರೋಗ್ಯ ಇಲಾಖೆ ಹೆಸರಿಗೆ ಬಂದಿದೆ ಮೊದಲನೇ ಬಾರಿಗೆ ನಾನು ಶಾಸಕನಾಗಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಸಹಕಾರವನ್ನು ಸಹ ಪಡೆದಿದ್ದೇನೆ. ಆರೋಗ್ಯ ಸಚಿವರು ಹಾಗೂ ಆಯುಕ್ತರು ಹರ್ಷ ಗುಪ್ತ ಅವರು ಈಗಾಗಲೇ ಸಭೆ ನಡೆಸಿ ಮುಖ್ಯಮಂತ್ರಿ ತಾಲೂಕಿಗೆ ಬರುವ ವೇಳೆಗೆ ಗುದ್ದಲಿ ಪೂಜೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು.ನೂತನ ಕಟ್ಟಡ ನಿರ್ಮಾಣ
ಇಲ್ಲಿನ ಸರ್ಕಾರಿ ಆಸ್ಪತ್ರೆ ೧೯೬೨ರಲ್ಲಿ ಪ್ರಾರಂಭವಾಗಿರುವುದರಿಂದ ಕೆಲವು ಮೂಲಭೂತ ಸೌಲತ್ತುಗಳ ಅಗತ್ಯತೆ ಇದೆ. ಜೊತೆಗೆ ಬಸ್ ನಿಲ್ದಾಣದ ಬಳಿ ಆಸ್ಪತ್ರೆ ಇರುವುದರಿಂದ ರೋಗಿಗಳು ಆಸ್ಪತ್ರೆಗೆ ಬರಲು ಆಂಬುಲೆನ್ಸ್ ಸಂಚರಿಸಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದರು. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳು ಒದಗಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವಲ್ಲಿ ತೊಡಗಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಎಂದರು. ನಗರಸಭಾ ಅಧ್ಯಕ್ಷ ವಿಜಯಲಕ್ಷ್ಮಿ, ಉಪಾಧ್ಯಕ್ಷೇ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಏ ರಾಜಪ್ಪ, ಸದಸ್ಯರಾದ ಮುರುಳಿ, ಕೋಮುಲ್ ನಿರ್ದೇಶಕ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಸೋಮಣ್ಣ, ಆಶ್ರಯ ಸಮಿತಿ ಸದಸ್ಯ ದಿನೇಶ್ ಗೌಡ, ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಇನ್ನಿತರಿದ್ದರು.